

ಪುತ್ತೂರು ಗ್ರಾಮಾಂತರ: ಬೆಂಗಳೂರಿನ ನೆಲಮಂಗಲದಲ್ಲಿ ಜಾಗ ಮಾರಾಟ ವಿಚಾರದಲ್ಲಿ ನಿವೃತ್ತ ಸೈನಿಕರೊಬ್ಬರಿಗೆ ವಂಚನೆ ಎಸಗಿದ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರು ಶಾಂತಿನಗರದ ಬೆಂಗಳೂರು ಗ್ರಾಮಾಂತರ, ನಗರ ಒಂದನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ನ್ಯಾಯಾಲಯದ ವಾರಂಟ್ ಆದೇಶದ ಮೇರೆಗೆ ಸಂಪ್ಯ ಠಾಣೆ ಪೊಲೀಸರು ಆರೋಪಿ, ನರಿಮೊಗರು ಗ್ರಾಮದ ಕೆರೆಮನೆ ನಿವಾಸಿ ಭರತ್‌ಕುಮಾರ್ ಎಲ್.(57) ಎಂಬುವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಬೆಂಗಳೂರಿನ ನೆಲಮಂಗಲದ ಸೈಟ್ ಒಂದನ್ನು ಮಾರಾಟ ಮಾಡಿ ನಿವೃತ್ತ ಸೈನಿಕರಾದ ಪಂಜಾಬಿನ ಸತೀಶ್ ಸ್ಟೋನಿ ಎಂಬುವರಿಗೆ ವಂಚನೆ ಎಸಗಿದ ಪ್ರಕರಣದಲ್ಲಿ ಭರತ್‌ಕುಮಾರ್ ಆರೋಪಿಯಾಗಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರು ಗ್ರಾಮಾಂತರ, ನಗರ ಒಂದನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ನ್ಯಾಯಾಲಯ ಆದೇಶಿಸಿದ್ದ ಪರಿಹಾರ ಮೊತ್ತ ಪಾವತಿಸದೆ ತಲೆಮರೆಸಿಕೊಂಡಿದ್ದರು. ಈ ಹಿನ್ನಲೆಯಲ್ಲಿ ನ್ಯಾಯಾಲಯ ವಾರಂಟ್ ಆದೇಶ ಹೊರಡಿಸಿತ್ತು.
ನ್ಯಾಯಾಲಯದ ವಾರಂಟ್ ಆದೇಶದ ಹಿನ್ನೆಲೆಯಲ್ಲಿ ಆರೋಪಿಯನ್ನು ಬೆಂಗಳೂರಿನಲ್ಲಿ ಬುಧವಾರ ಪತ್ತೆ ಮಾಡಿ ಬಂಧಿಸಿ, ಗ್ರಾಹಕರ ವ್ಯಾಜ್ಯಗಳ ಪರಿಹಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆರೋಪಿಯನ್ನು ಸೂಕ್ತ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದೆ.