ಜಮ್ಮು: ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದಕರು ಮತ್ತೆ ಅಟ್ಟಹಾಸ ಮೆರೆದಿದ್ದು ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಸೋಮವಾರ ತಡ ರಾತ್ರಿ ಭಯೋತ್ಪಾದಕರೊಂದಿಗೆ ನಡೆದ ಭೀಕರ ಗುಂಡಿನ ಕಾಳಗದಲ್ಲಿ ಗಾಯಗೊಂಡಿದ್ದ ಒಬ್ಬ ಕ್ಯಾಪ್ಟನ್ ಸಹಿತ ನಾಲ್ವರು ಸೈನಿಕರು ಹುತಾತ್ಮರಾಗಿದ್ದಾರೆ. ಭಾರಿ ಶಸ್ತ್ರಾಸ್ತ್ರ ಹೊಂದಿರುವ ಉಗ್ರರನ್ನು ಪತ್ತೆ ಹಚ್ಚಿ ನಿಷ್ಕ್ರಿಯಗೊಳಿಸಲು ದೊಡ್ಡ ಪ್ರಮಾಣದಲ್ಲಿ ಭದ್ರತಾ ಪಡೆಗಳನ್ನು ರವಾನಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಭಯೋತ್ಪಾದಕರ ಕೃತ್ಯಗಳ ಹೆಚ್ಚಳಕ್ಕೆ ಕಳವಳ ವ್ಯಕ್ತಪಡಿಸಿರುವ ಹಲವು ರಾಜಕೀಯ ಮುಖಂಡರು, ಇದು ನರೇಂದ್ರ ಮೋದಿ ಸರ್ಕಾರದ ವೈಫಲ್ಯವೆಂದು ಕಿಡಿ ಕಾರಿದ್ದಾರೆ.
ಹುತಾತ್ಮರಿವರು: ಉರಾರ್ ಬಾಗಿ ಪ್ರದೇಶದಲ್ಲಿ ಉಗ್ರರ ದಾಳಿಗೆ ಬಲಿಯಾದವರನ್ನು ಕ್ಯಾಪ್ಟನ್ ಬ್ರಿಜೇಶ್ ಥಾಪಾ, ನಾಯ್್ಕ ಡಿ. ರಾಜೇಶ್, ಸಿಪಾಯಿಗಳಾದ ಬಿಜೇಂದ್ರ ಮತ್ತು ಅಜಯ್ ಎಂದು ಗುರುತಿಸಲಾಗಿದೆ. ದೋಡಾ ಜಿಲ್ಲೆಯ ಅರಣ್ಯಗಳಲ್ಲಿ ಕಳೆದ ಮೂರು ವಾರಗಳಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ನಡೆದ ಮೂರನೇ ಪ್ರಮುಖ ಎನ್ಕೌಂಟರ್ ಇದಾಗಿದೆ.
ಕಥುವಾ ಜಿಲ್ಲೆಯ ಮಚೇಡಿ ಅರಣ್ಯ ವಲಯದಲ್ಲಿ ಭಯೋತ್ಪಾದಕರು ಸೇನಾ ಕಾವಲು ತಂಡದ ಮೇಲೆ ನಡೆಸಿದ ಹಠಾತ್ ಆಕ್ರಮಣದಲ್ಲಿ ಐವರು ಯೋಧರು ಹುತಾತ್ಮರಾದ ನಂತರ ಈಚಿನ ಭೀಕರ ಘಟನೆ ನಡೆದಿದೆ. ರಾಷ್ಟ್ರೀಯ ರೈಫಲ್ಸ್ ಮತ್ತು ಜಮ್ಮು-ಕಾಶ್ಮೀರ ಪೊಲೀಸ್ನ ವಿಶೇಷ ಕಾರ್ಯಾಚರಣೆ ದಳಗಳ ಯೋಧರು ದೋಡಾ ಪಟ್ಟಣದಿಂದ ಸುಮಾರು 55 ಕಿ.ಮೀ. ದೂರದಲ್ಲಿರುವ ದೇಸಾ ಅರಣ್ಯ ವಲಯದ ಧಾರಿ ಗೋಟೆ ಉರಾರ್ಬಾಗಿಯಲ್ಲಿ ಉಗ್ರರಿಗಾಗಿ ವ್ಯಾಪಕ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.
ಉಗ್ರರನ್ನು ಬೆನ್ನಟ್ಟಿದ ಯೋಧರು: ಆರಂಭದಲ್ಲಿ ಅಲ್ಪಕಾಲದ ಗುಂಡಿನ ಚಕಮಕಿ ನಡೆದ ನಂತರ ಕಾಲ್ಕೀಳಲು ಯತ್ನಿಸಿದ ದುಷ್ಕರ್ವಿುಗಳನ್ನು ಕ್ಯಾಪ್ಟನ್ ಬ್ರಿಜೇಶ್ ನೇತೃತ್ವದಲ್ಲಿ ಯೋಧರು ಬೆನ್ನಟ್ಟಿಕೊಂಡು ಹೋದರು. ಕಷ್ಟಕರ ಭೂಪ್ರದೇಶ ಹಾಗೂ ದಟ್ಟ ಮರಗಿಡಗಳಿಂದ ಕೂಡಿದ ಸವಾಲಿನ ಸನ್ನಿವೇಶದ ನಡುವೆಯೂ ಯೋಧರು ಉಗ್ರರನ್ನು ಹೆಡೆಮುರಿ ಕಟ್ಟಲು ಮುಂದಾದರು. ಅದಾದ ಮೇಲೆ, ಸೋಮವಾರ ರಾತ್ರಿ 9 ಗಂಟೆ ಹೊತ್ತಿಗೆ ಇನ್ನೊಂದು ಸಲ ನಡೆದ ಗುಂಡಿನ ಕಾಳಗದಲ್ಲಿ ಕ್ಯಾಪ್ಟನ್ ಸಹಿತ ಐವರು ಸೈನಿಕರು ಗಂಭೀರವಾಗಿ ಗಾಯಗೊಂಡರು. ಅವರಲ್ಲಿ ನಾಲ್ವರು ನಂತರ ಮೃತಪಟ್ಟರೆಂದು ಅಧಿಕಾರಿಗಳು ತಿಳಿಸಿದ್ದಾರೆ. ಭಯೋತ್ಪಾದಕರ ಹಾವಳಿಯನ್ನು ಮಟ್ಟ ಹಾಕಲು ಉತ್ತರ ಕಮಾಂಡ್ನ ಎಲ್ಲ ವಿಭಾಗಗಳು ಶ್ರಮಿಸಲಿವೆ ಎಂದು ಸೇನೆ ಘೋಷಿಸಿದೆ.
ಮರಣ ಮೃದಂಗಕ್ಕೆ ವ್ಯಾಪಕ ಆಕ್ರೋಶ : ಜಮ್ಮು-ಕಾಶ್ಮೀರದಲ್ಲಿ ಉಗ್ರಗಾಮಿಗಳ ರಣ ಕೇಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿರುವ ಜತೆಯಲ್ಲೇ ಸರ್ಕಾರದ ಕಾಶ್ಮೀರ ನೀತಿ ಟೀಕೆಗೆ ಒಳಗಾಗಿದೆ. ಯೋಧರ ಸಾವಿಗೆ ತೀವ್ರ ಶೋಕ ವ್ಯಕ್ತಪಡಿಸಿರುವ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ, ಕಾಶ್ಮೀರ ಕುರಿತ ಬಿಜೆಪಿಯ ‘ತಪ್ಪು ನೀತಿಗಳಿಂದಾಗಿ’ ನಮ್ಮ ಯೋಧರು ಹಾಗೂ ಅವರ ಕುಟುಂಬಸ್ಥರು ನೋವು ಅನುಭವಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಪದೇಪದೆ ಭದ್ರತಾ ವೈಫಲ್ಯಗಳು ಆಗುತ್ತಿರುವುದಕ್ಕೆ ಕೇಂದ್ರ ಸರ್ಕಾರವೇ ಪೂರ್ಣ ಹೊಣೆ ಹೊರಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಕುರಿತ ಪ್ರಧಾನಿ ನರೇಂದ್ರ ಮೋದಿಯವರ ‘ದೊಡ್ಡ ದೊಡ್ಡ ಮಾತುಗಳು ಏನಾದವು?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ನೀತಿ ವೈಫಲ್ಯವನ್ನು ಆಪ್ ನಾಯಕ ಸೌರಭ್ ಭಾರದ್ವಾಜ್ ಕೂಡ ಟೀಕಿಸಿದ್ದಾರೆ. ನಾಲ್ವರು ವೀರಯೋಧರು ಹುತಾತ್ಮರಾಗಿರುವುದಕ್ಕೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಘಾತ ವ್ಯಕ್ತಪಡಿಸಿದ್ದಾರೆ. ‘ಭಾರತ ರಾಷ್ಟ್ರೀಯ ಕಾಂಗ್ರೆಸ್ ನಮ್ಮ ವೀರ ಸಶಸ್ತ್ರ ಪಡೆಗಳೊಂದಿಗೆ ಸದಾ ಇರುತ್ತದೆ’ ಎಂದು ಖರ್ಗೆ ಹೇಳಿದ್ದಾರೆ. ಕಳೆದ 78 ದಿನಗಳಲ್ಲಿ ಜಮ್ಮುವೊಂದರಲ್ಲೇ 11 ಭಯೋತ್ಪಾದಕ ದಾಳಿಗಳು ನಡೆದಿವೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.
ಮೆಹಬೂಬಾ ಆಗ್ರಹ: ಜಮ್ಮು-ಕಾಶ್ಮೀರದಲ್ಲಿ ‘ಕಳೆದ 32 ತಿಂಗಳಲ್ಲಿ 50 ಸೈನಿಕರ ಪ್ರಾಣಹರಣ ವಾಗಿರುವುದಕ್ಕೆ ಹೊಣೆ ನಿಗದಿಪಡಿಸಬೇಕು’ ಎಂದು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಒತ್ತಾಯಿಸಿದ್ದಾರೆ. ಬ್ರಿಜೇಶ್ ಥಾಪಾ ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆಯವರಾಗಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹುತಾತ್ಮ ಕ್ಯಾಪ್ಟನ್ ಸಾವಿಗೆ ಕಂಬನಿ ಮಿಡಿದಿದ್ದಾರೆ.
ಮೋದಿ, ದ್ವಿವೇದಿ ಸಂತಾಪ: ಭಯೋತ್ಪಾದನೆ ವಿರೋಧಿ ಕಾರ್ಯಾಚರಣೆಯಲ್ಲಿ ಪ್ರಾಣ ತ್ಯಾಗ ಮಾಡಿದ ವೀರ ಯೋಧರಿಗೆ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ ಸಿಂಗ್ ಮತ್ತು ಭೂ ಸೇನೆ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಸಹಿತ ಹಲವು ಪ್ರಮುಖರು ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಅವರ ಕುಟುಂಬ ಸದಸ್ಯರಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ.
ಅದು ಸೇನಾ ಕಾರ್ಯಾಚರಣೆ, ಅದರಲ್ಲಿ ರಿಸ್ಕ್ ಇದ್ದೇ ಇರುತ್ತದೆ. ನನ್ನ ಮಗ ಅಂಥ ರಿಸ್ಕಿನ ಕಾರ್ಯವನ್ನೂ ಚೆನ್ನಾಗಿಯೇ ನಿರ್ವಹಿಸಿದ್ದಾನೆ, ಆತನ ಬಗ್ಗೆ ಹೆಮ್ಮೆ ಪಡುತ್ತೇನೆ.
| ನಿವೃತ್ತ ಕೊಲೊನೆಲ್ ಭುವನೇಶ್ ಕೆ. ಥಾಪಾ (ಹುತಾತ್ಮ ಕ್ಯಾ.ಬ್ರಿಜೇಶ್ ಥಾಪಾ ತಂದೆ)