

Family : ವಾಂತಿ ಮತ್ತು ಅತಿಸಾರದಿಂದ ಒಂದೇ ಮನೆಯ ನಾಲ್ವರು ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದ ಮಾಂಡ್ಲಾ ಜಿಲ್ಲೆಯ ಸಿಮಾರಿಯಾ ಗ್ರಾಮದಲ್ಲಿ ನಡೆದಿದೆ.
ಮುನ್ನಾ ಕೇರಂ (48), ನರ್ವಾಡಿಯಾ ಕೇರಂ (68), ದೇವಿಸಿಂಗ್ ಕೇರಂ (44) ಆದಿತ್ಯ (2) ಎಂದು ಗುರುತಿಸಲಾಗಿದೆ. ಮೃತಪಟ್ಟವರೆಲ್ಲರೂ ಅತಿಸಾರದಿಂದ ಬಳಲುತ್ತಿದ್ದು, ಕುಟುಂಬದ ಇತರ ಸದಸ್ಯರ ಆರೋಗ್ಯ ಕೂಡಾ ಗಂಭೀರವಾಗಿದೆ ಎಂದು ಮಾಹಿತಿ ಬಂದಿದೆ.
ಈ ಘಟನೆ ನಡೆದ ಬಳಿಕ ಆರೋಗ್ಯ ಇಲಾಖೆಯ ತಂಡವು ತನಿಖೆಗಾಗಿ ಗ್ರಾಮಕ್ಕೆ ಆಗಮಿಸಿದ್ದು, ಗ್ರಾಮಸ್ಥರು ಹಾಗೂ ಮೃತ ಕುಟುಂಬವನ್ನು ವೈದ್ಯಕೀಯ ಚಿಕಿತ್ಸೆಗೆ ಒಳಪಡಿಸಲಾಗಿದೆ.
ವೈದ್ಯಕೀಯ ತಂಡವು ಈಗಾಗಲೇ ಗ್ರಾಮವನ್ನು ತಲುಪಿದೆ. ರೋಗಿಗಳ ನೀರಿನ ಮಾದರಿಯನ್ನು ಪರೀಕ್ಷೆಗೆ ಬೇರೆಡೆ ಕಳುಹಿಸಲಾಗಿದೆ. ತನಿಖೆ ನಂತರವೇ ಸಾವಿಗೆ ನಿಜವಾದ ಕಾರಣ ಏನು ಎಂಬುದು ತಿಳಿಯಲಿದೆ ಎಂದು ಮಾಂಡ್ಲಾ ಜಿಲ್ಲಾಧಿಕಾರಿ ಸೊಮೇಶ್ ಮಿಶ್ರಾ ಸುದ್ದಿಮೂಲಗಳಿಗೆ ತಿಳಿಸಿದ್ದಾರೆ.
ಈ ಮೊದಲು ಸೆಪ್ಟೆಂಬರ್ 8 ರಂದು ಕುಟುಂಬದ ಓರ್ವ ಸದಸ್ಯರು ಕೀಟ ಕಡಿದು ಸಾವನ್ನಪ್ಪಿದ್ದಾರೆ. ಇನ್ನು ಮೂವರು ಆಹಾರ ಸೇವನೆಯಿಂದ ವಾಂತಿ ಮಾಡಿಕೊಂಡು ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ. (ಏಜೆನ್ಸೀಸ್)