

ಜೈಪುರ: ಕಾರು ಮತ್ತು ಖಾಸಗಿ ಬಸ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಮೃತಪಟ್ಟಿರುವ ಘಟನೆ ರಾಜಸ್ಥಾನದ ಡುಂಗರ್ಪುರ ಜಿಲ್ಲೆಯಲ್ಲಿ ನಡೆದಿದೆ.
ಬಿಚ್ಚಿವಾಡದಿಂದ ಡುಂಗರ್ಪುರದ ಕಡೆಗೆ ತೆರಳುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದ್ದು, ಓರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದು, ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಪುನರ್ವಸತಿ ಕೇಂದ್ರದಲ್ಲಿ ಅಗ್ನಿ ಅವಘಡ; 32 ಮಂದಿ ಸಾವು
ಈ ಕುರಿತು ಪ್ರತಿಕ್ರಿಯಿಸಿರುವ ಬಿಚ್ಚಿವಾಡ ಪೊಲೀಸ್ ಠಾಣಾಧಿಕಾರಿ ಮದನ್ಲಾಲ್ ಖಾತಿಕ್, ರಾಷ್ಟ್ರೀಯ 48ರಲ್ಲಿ ಘಟನೆ ನಡೆದಿದ್ದು, ಏಕಮುಖವಾಗಿ ಕಾರು ವೇಗವಾಗಿ ಬಂದು ಬಸ್ಗೆ ಡಿಕ್ಕಿ ಹೊಡೆದಿದೆ. ಮೃತರು ಗುಜರಾತ್ ಮೂಲದವರು ಎಂದು ತಿಳಿದು ಬಂದಿದ್ದು, ಬಸ್ಗೆ ಕಾರು ಡಿಕ್ಕಿ ಹೊಡೆದ ರಭಸಕ್ಕೆ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಓರ್ವರ ಸ್ಥಿತಿ ಚಿಂತಾಜನಕವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಕಿತ್ಸೆ ಕೊಡಿಸಲಾಗುತ್ತಿದೆ.
ಮೃತರನ್ನು ಗುಜರಾತ್ನ ಶಾಮಲಾಜಿ ಮೂಲದ ಸತೀಶ್ ಭಾಯಿ (25), ಅಂಕಿತ್ ನಿನಾಮ (25), ರವಿ (23) ಮತ್ತು ಕೌಶಿಕ್ (21) ಎಂದು ಗುರುತಿಸಲಾಗಿದೆ. ಮೃತದೇಹಗಳನ್ನು ಶವಗಾರದಲ್ಲಿ ಇರಿಸಲಾಗಿದ್ದು, ಮೃತರ ಕುಟುಂಬಸ್ಥರು ಬಂದ ಬಳಿಕ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗುವುದು ಎಂದು ಬಿಚ್ಚಿವಾಡ ಪೊಲೀಸ್ ಠಾಣಾಧಿಕಾರಿ ಮದನ್ಲಾಲ್ ಖಾತಿಕ್ ತಿಳಿಸಿದ್ದಾರೆ.