

ವಿಜಯವಾಣಿ ಸುದ್ದಿಜಾಲ ಹೆಬ್ರಿ
ವಿಶ್ವ ಸಾಹಿತ್ಯಕ್ಕೆ ಕನ್ನಡ ವಚನ ಸಾಹಿತ್ಯವನ್ನು ಕೊಡುಗೆಯಾಗಿ ನೀಡಿದೆ. ಇಂತಹ ವಿಶಿಷ್ಟ ಸಾಹಿತ್ಯ ಬೇರೆ ಎಲ್ಲೂ ಇಲ್ಲ. ಸರಳ ಕನ್ನಡದಲ್ಲಿ ಜನರಿಗೆ ತಲುಪುವಂತೆ ರಚನೆಯಾದ ಸಾಹಿತ್ಯವಾಗಿದ್ದು, ಸತ್ಯವನ್ನು ಹೇಳುತ್ತದೆ ಎಂದು ಉಡುಪಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ನಿರಂಜನ ಚೋಳಯ್ಯ ಹೇಳಿದರು.
ಹೆಬ್ರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆಯಲ್ಲಿ ಅಕ್ಷರ ಸಾಹಿತ್ಯ ಸಂಘ ಮತ್ತು ಉಡುಪಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಸಹಯೋಗದೊಂದಿಗೆ ಶುಕ್ರವಾರ ವಚನ ಸಾಹಿತ್ಯ ಸಂಭ್ರಮ ಮತ್ತು ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಉಪ ಪ್ರಾಂಶುಪಾಲ ದಿವಾಕರ ಮರಕಾಲ ಎಸ್. ಮಾತನಾಡಿದರು. ಎಸ್‌ಡಿಎಂಸಿ ಅಧ್ಯಕ್ಷ ವಿಜಯೇಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವಚನ ಗಾಯಕ ಆಶಿಷ್ ಸಾಲ್ಯಾನ್, ಅಕ್ಷರ ಸಾಹಿತ್ಯ ಸಂಘದ ಸಂಚಾಲಕ ಮಂಜುನಾಥ ಕುಲಾಲ್ ಶಿವಪುರ, ಅಧ್ಯಕ್ಷ ಶ್ರೀನಿತಾ ಉಪಸ್ಥಿತರಿದ್ದರು. ವೈಷ್ಣವಿ ಪ್ರಾರ್ಥಿಸಿದರು. ಅಕ್ಷರ ಸಾಹಿತ್ಯ ಸಂಘದ ಉಪಾಧ್ಯಕ್ಷೆ ವರ್ಷಾ ಸ್ವಾಗತಿಸಿದರು. ಅಧ್ಯಾಪಕಿ ಸಂಗೀತ ಶೆಟ್ಟಿ ವಂದಿಸಿದರು. ಚಿನ್ಮಯಿ ಮತ್ತು ರಕ್ಷಾ ಕಾರ್ಯಕ್ರಮ ನಿರೂಪಿಸಿದರು.
ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ವಚನ ಸಾಹಿತ್ಯ ಸಂಭ್ರಮದ ಅಂಗವಾಗಿ ಹಿಂದುಸ್ತಾನಿ ಸಂಗೀತ ಗಾಯಕ ಆಶಿಷ್ ಸಾಲ್ಯಾನ್ ಮತ್ತು ತಂಡದಿಂದ ವಚನ ಗಾಯನ ಕಾರ್ಯಕ್ರಮ ನಡೆಯಿತು. ಹಿಂದುಸ್ತಾನಿ ಗಾಯಕ ವಿಜಯಕುಮಾರ ಎಸ್.ಮೇಟಿ, ಸುಮೇಧ ಕಶ್ಯಪ್, ಅರುಣ್ ಸಹಕರಿಸಿದರು. ವಚನ ಸಾಹಿತ್ಯ ಸಂಬಂಧಿ ಪ್ರಬಂಧ, ಭಾಷಣ, ಚಿತ್ರಕಲೆ, ಗಾಯನ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.