ಹೆಬ್ರಿ ತಾಲೂಕಾದ್ಯಂತ ದುರ್ವಾಸನೆ!

hebri-1
Published on

ನರೇಂದ್ರ ಎಸ್. ಮರಸಣಿಗೆ ಹೆಬ್ರಿ

ತಾಲೂಕಿನ ಬಹುತೇಕ ಕಡೆಗಳಲ್ಲಿ ಕೋಳಿ ತ್ಯಾಜ್ಯಗಳ ದೂರ್ವಾಸನೆ ಜನರನ್ನು ಹೈರಣಾಗಿಸಿದೆ. ಅನೇಕ ರಸ್ತೆಗಳ ತಿರುವಿನಲ್ಲಿ ಅಥವಾ ಕೊನೆಗಳಲ್ಲಿ ಕೋಳಿ ಸಹಿತ ವಿವಿಧ ತಾಜ್ಯಗಳ ಒಳಗೊಂಡ ಗೋಣಿ ಮೂಟೆಗಳು ದೊಡ್ಡ ಪ್ರಮಾಣದಲ್ಲಿ ಸಂಗ್ರಹಗೊಂಡಿದ್ದು, ಸಾಂಕ್ರಾಮಿಕ ರೋಗಗಳ ಭೀತಿ ಎಲ್ಲೆಡೆ ಆವರಿಸಿದೆ. ಗ್ರಾಮ ಪಂಚಾಯಿತಿಗಳು ಪದೇಪದೆ ಎಚ್ಚರಿಕೆ ನೀಡುತ್ತಿದ್ದರೂ ನಿರ್ಲಕ್ಷಿಸುತ್ತಿರುವ ಹೋಟೆಲ್, ಕಟ್ಟಡ ಮಾಲೀಕರು, ಮನೆಯವರು ಕೋಳಿ ಸಹಿತ ಮಾಂಸಾಹಾರ ತ್ಯಾಜ್ಯಗಳನ್ನು ರಸ್ತೆಗೆ ಎಸೆಯುವುದು ಮಾಮೂಲಾಗಿದೆ.

ಸೀತಾ ನದಿ ಮಲೀನ

ತಾಲೂಕಿಗೆ ಜಲಸಂಪನ್ಮೂಲವಾದ ಸೀತಾನದಿಗೆ ತ್ಯಾಜ್ಯ ಸುರಿಯುವವರ ಸಂಖ್ಯೆ ಹೆಚ್ಚಳವಾಗಿದ್ದು, ಇತ್ತೀಚೆಗಷ್ಟೆ ಕುಚ್ಚೂರು ಮಠದಬೆಟ್ಟು ಸೇತುವೆ ಬಳಿ ನದಿಗೆ ಕಸ ಎಸೆದಿದ್ದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಇದರಿಂದ ಕುಡಿಯಲು ಸಹಿತ ನಿತ್ಯಬಳಕೆಗೂ ಸೀತಾನದಿ ನೀರು ಪ್ರಯೋಜನವಿಲ್ಲದಾಗಿದೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

 ರಸ್ತೆ ಬದಿಯಲ್ಲಿ ಪ್ಲಾಸ್ಟಿಕ್

ಗ್ರಾಮ ಪಂಚಾಯಿತಿಗಳು ಸಾಕಷ್ಟು ಬಾರಿ ಪ್ಲಾಸ್ಟಿಕ್ ಬಳಕೆ ಹಾಗೂ ಸಾರ್ವಜನಿಕವಾಗಿ ಎಸೆಯುವಿಕೆ ಕುರಿತು ಜಾಗೃತಿ ಕಾರ್ಯಕ್ರಮ ಆಯೋಜಿಸಿದರೂ ರಸ್ತೆಗೆ, ನದಿಗೆ ಪ್ಲಾಸ್ಟಿಕ್ ಎಸೆಯುವವರ ಸಂಖ್ಯೆ ತಾಲೂಕಿನಲ್ಲಿ ಹೆಚ್ಚುತ್ತಲೇ ಇವೆ. ಸಾರ್ವಜನಿಕವಾಗಿ ಮಾಂಸಾಹಾರದ ತ್ಯಾಜ್ಯ ಎಸೆಯುವಿಕೆ ಹಲವು ವರ್ಷಗಳಿಂದ ತಾಲೂಕಾದ್ಯಂತ ನಡೆಯುತ್ತಲೇ ಇದೆ. ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಅರಣ್ಯ ಇಲಾಖೆ ಅಥವಾ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಮಾಂಸದ ಅಂಗಡಿಯವರನ್ನು ಕರೆದು ಎಚ್ಚರಿಕೆ ನೀಡಬೇಕು. ತ್ಯಾಜ್ಯ ಎಸೆಯುವವರ ಪತ್ತೆ ಹಚ್ಚಿ ಗರಿಷ್ಠ ಮಟ್ಟದ ಶಿಕ್ಷೆ ವಿಧಿಸಬೇಕು ಎಂದು ಹಲವು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.

ಮಧ್ಯರಾತ್ರಿಯಲ್ಲಿ ತ್ಯಾಜ್ಯ ಸುರಿಯವಿಕೆ

ಬಹುತೇಕ ಕಡೆಗಳಲ್ಲಿ ಮಧ್ಯರಾತ್ರಿ ವೇಳೆ ರಸ್ತೆ, ನದಿಗಳಿಗೆ ತ್ಯಾಜ್ಯಗಳ ಸುರಿಯಲಾಗುತ್ತಿದೆ. ಮಾಂಸಗಳ ತ್ಯಾಜ್ಯಗಳನ್ನು ರಸ್ತೆ ಮೇಲೆ ಸುರಿಯುವ ಪರಿಣಾಮ ಬೀದಿನಾಯಿಗಳ ಉಪಟಳವೂ ಹೆಚ್ಚಾಗಿದ್ದು, ಪಾದಚಾರಿಗಳು ಹಾಗೂ ದ್ವಿಚಕ್ರ ವಾಹನ ಸವಾರರ ಮೇಲೆ ದಾಳಿ ನಡೆಸುತ್ತವೆ. ಮುನಿಯಾಲು- ಹೆಬ್ರಿ ರಸ್ತೆ, ಹೆಬ್ರಿ ಪೊಲೀಸ್ ಠಾಣೆಯ ರಿಂಗ್‌ರೋಡ್, ಪಾಡಿಗಾರ ಖಜಾನೆ-ಮುನಿಯಾಲು ರಸ್ತೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಸಿ ತ್ಯಾಜ್ಯ ಎಸೆಯಲಾಗುತ್ತದೆ.

ಕೋಳಿತ್ಯಾಜ್ಯದಿಂದ ಉತ್ತಮ ಗುಣಮಟ್ಟದ ಗೊಬ್ಬರವನ್ನು ತಯಾರಿಸಬಹುದು. ಮಾಂಸಾಹಾರದ ಅಂಗಡಿಗಳು ಸಾರ್ವಜನಿಕರಿಗೆ ತೊಂದರೆ ನೀಡಿದರೆ ಅಧಿಕಾರಿಗಳಿಗೆ ಸೂಚನೆ ನೀಡಿ ಕಠಿಣ ಕ್ರಮಕೈಗೊಳ್ಳಲು ಆದೇಶಿಸುತ್ತೇನೆ. ಪ್ರತಿಕ್ ಬಾಯಲ್ ಉಡುಪಿ ಜಿಪಂ ಸಿಇಒ ಹಸಿ ತ್ಯಾಜ್ಯ ಸಹಿತ ಎಲ್ಲ ಕೊಳಕು ಪದಾರ್ಥಗಳನ್ನು ಜನರು ಮನಬಂದಂತೆ ರಸ್ತೆ, ನದಿಗಳಿಗೆ ಎಸೆಯುತ್ತಿದ್ದರೂ ಅಧಿಕಾರಿಗಳು ತಮಗೆ ಇದು ಸಂಬಂಧವೇ ಇಲ್ಲದಂತಿದ್ದಾರೆ. ನೀರಿಗೆ ಬರವಿರುವ ಈ ಸಂದರ್ಭದಲ್ಲೂ ಜೀವಾಳವಾದ ಸೀತಾನದಿಗೆ ತ್ಯಾಜ್ಯ ಸುರಿಯವುದು ಜನರ ಆರೋಗ್ಯ ವಿರುದ್ಧ ಚೆಲ್ಲಾಟವಾಡಿದಂತೆ. ಇಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ. ಶ್ರೀಕಾಂತ್ ಪೂಜಾರಿ ಕುಚ್ಚೂರು ಸಾಮಾಜಿಕ ಹೋರಾಟಗಾರ

ಪಾಯಿಂಟ್ಸ್

ಪಂಚಾಯಿತಿಗಳ ಎಚ್ಚರಿಕೆ ನಡುವೆಯೂ ರಸ್ತೆ, ನದಿಗಳಿಗೆ ಹಸಿ ತ್ಯಾಜ್ಯ ಸುರಿಯುವಿಕೆ

ಸಾಂಕ್ರಾಮಿಕ ಸಹಿತ ಮಾರಣಾಂತಿಕ ರೋಗಗಳ ಭೀತಿ

ಕೃತ್ಯ ನಡೆಸುವವರ ಪತ್ತೆ ಹಚ್ಚುವುದೇ ಸವಾಲು

ತಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒಕ್ಕೊರಲಿಂದ ಒತ್ತಾಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net