

ಲಾಹೋರ್: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಹಿರಿಯ ಆಟಗಾರ ಹಾಗೂ ಕೋಚ್ ಆಗಿರುವ ಬಸಿತ್ ಅಲಿ, ಇದೀಗ ಮುಂದಿನ ಕ್ರಿಕೆಟ್ ಭವಿಷ್ಯಕ್ಕೆ ಟಿ20 ಮಾದರಿ ಕೊಡಲಿಪೆಟ್ಟಾಗಿದೆ. 20 ಓವರ್ಗಳ ಲೀಗ್ಗಳಿಂದ ಕ್ರಿಕೆಟ್ ಸಂಪೂರ್ಣ ಸರ್ವನಾಶ ಆಗುವುದರಲ್ಲಿ ಕಿಂಚಿತ್ತು ಅನುಮಾನ ಬೇಡ ಎಂದು ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಅಸಲಿಗೆ ಅಲಿ ಕೆಂಡಾಮಂಡಲಕ್ಕೆ ಕಾರಣ ನ್ಯೂಜಿಲೆಂಡ್ನ ಇಬ್ಬರು ಸ್ಟಾರ್ ಆಟಗಾರರು ತೆಗೆದುಕೊಂಡ ನಿರ್ಧಾರ. ಡೆವಾನ್ ಕಾನ್ವೆ ಮತ್ತು ಫಿನ್ ಅಲೆನ್ ಅಂತಾರಾಷ್ಟ್ರೀಯ ಪಂದ್ಯಗಳ ಫಾರ್ಮೆಟ್ಗೆ ಸಹಿ ಹಾಕುವುದಿಲ್ಲ ಎಂದು ಹೇಳಿ, ತಮ್ಮ ಹೆಜ್ಜೆ ಹಿಂದಿಟ್ಟಿರುವುದೇ ಇಷ್ಟೆಕ್ಕಲ್ಲಾ ಕಾರಣವಾಗಿದೆ.
ಕ್ರಿಕೆಟ್ನ ಭವಿಷ್ಯದ ಬಗ್ಗೆ ಭಾರೀ ಮುಂದಾಲೋಚನೆ ಮಾಡ್ತಿರುವ ಬಸಿತ್ ಅಲಿ, ಇತ್ತೀಚಿನ ವರ್ಷಗಳಲ್ಲಿ ಟಿ20 ಲೀಗ್ಗಳು ಹೆಚ್ಚು ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ಇದರಿಂದ ಇಂತಹ ಲೀಗ್ಗಳ ಸಂಖ್ಯೆ ಕೂಡ ಹೆಚ್ಚುತ್ತಿವೆ. ಆಯಾ ದೇಶದ ಸ್ಟಾರ್ ಕ್ರಿಕೆಟಿಗರು ಐಪಿಎಲ್ ಸೇರಿದಂತೆ ಹಲವಾರು ಲೀಗ್ನಲ್ಲಿ ಆಡಿದ್ರೆ, ನಮಗೆ ಇಲ್ಲಿಗಿಂತ ಅಧಿಕ ಸಂಭಾವನೆ ಸಿಗುತ್ತದೆ ಎಂದು ಈ ರೀತಿ ಅಂತಾರಾಷ್ಟ್ರೀಯ ಕ್ರಿಕೆಟ್ ಫಾರ್ಮೆಟ್ಗಳ ಒಪ್ಪಂದದಿಂದ ದೂರ ಉಳಿಯುತ್ತಿದ್ದಾರೆ ಎಂದರು.
ಜಾಗತಿಕ ಮಟ್ಟದಲ್ಲಿ ನಡೆಯುವ ಟಿ20 ಲೀಗ್ಗಳಲ್ಲಿ ಕಿವೀಸ್ ಕ್ರಿಕೆಟಿಗರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಆಡುತ್ತಿದ್ದಾರೆ. ಆದ್ರೆ, ಕಾನ್ವೆ ಮತ್ತು ಅಲೆನ್ ತೆಗೆದುಕೊಂಡ ನಿರ್ಧಾರ ಕೇವಲ ನ್ಯೂಜಿಲೆಂಡ್ ಕ್ರಿಕೆಟ್ಗೆ ಮಾತ್ರ ಸೀಮಿತವಾಗಿರುವುದಿಲ್ಲ. ಭಾರತವನ್ನು ಬಿಟ್ಟು ಇತರೆ ದೇಶಗಳ ಮೇಲೂ ಪ್ರಭಾವ ಬೀರುತ್ತದೆ. ಡೆವೂನ್ ಕಾನ್ವೆಗೆ ಶ್ರೀಲಂಕಾ ವಿರುದ್ಧದ ಸರಣಿ ಆಡಲು ಇಷ್ಟವಿಲ್ಲ. ಇದು ನ್ಯೂಜಿಲೆಂಡ್ನ ವಿಷಯವಲ್ಲ ಎಂಬುದನ್ನು ಇತರರು ಕೂಡ ಅರ್ಥೈಸಿಕೊಳ್ಳಬೇಕು. ಭವಿಷ್ಯದಲ್ಲಿ ಕೇಂದ್ರ ಒಪ್ಪಂದಗಳನ್ನು ತಿರಸ್ಕರಿಸುವ ಆಟಗಾರರಿಂದ ಅನ್ಯ ರಾಷ್ಟ್ರೀಯ ಕ್ರಿಕೆಟಿಗರು ಕೂಡ ಅದೇ ಮಾರ್ಗವನ್ನು ಅನುಸರಿಸಬಹುದು ಎಂದು ಗುಡುಗಿದರು.
ಮುಂದಿನ ದಿನಗಳಲ್ಲಿ ಪಾಕಿಸ್ತಾನದ ಆಟಗಾರರು ಕೂಡ ಈ ಟ್ರೆಂಡ್ ಅನ್ನು ಅನುಸರಿಸುತ್ತಾರೆ. ಫ್ರಾಂಚೈಸಿ ಕ್ರಿಕೆಟ್ನಲ್ಲಿ ಹಣದ ವಿಷಯವೇ ಸ್ಟಾರ್ ಆಟಗಾರರ ನಿರ್ಧಾರವೇ ಇದಕ್ಕೆ ಮುಖ್ಯ ಕಾರಣ. ಈ ವಿಷಯದಲ್ಲಿ ಭಾರತ ಅದೃಷ್ಟಶಾಲಿಯಾಗಿದೆ. ಏಕಂದರೆ, ಇಂಡಿಯನ್ ಪ್ರೀಮಿಯರ್ ಲೀಗ್ ಹೊರತುಪಡಿಸಿದರೆ ಇತರೆ ಟಿ20 ಪಂದ್ಯಾವಳಿಗಳಲ್ಲಿ ಟೀಮ್ ಇಂಡಿಯಾ ಆಟಗಾರರು ಆಡುವುದೇ ಇಲ್ಲ. ಇದು ಇಲ್ಲಿಗೆ ಮುಗಿಯದ ಕಥೆ. ಟಿ20 ಅಂತ್ಯಕಾಣುವುದಿಲ್ಲ, ಬದಲಿಗೆ ಕ್ರಿಕೆಟ್ನ ಸರ್ವನಾಶ ಮಾಡುತ್ತದೆ. ಇದರಿಂದ ಭಾರತಕ್ಕೆ ತೊಂದರೆಯಿಲ್ಲ. ಆದ್ರೆ, ಉಳಿದ ದೇಶದವರಿಗೆ ದೊಡ್ಡ ಸಮಸ್ಯೆಯಾಗಿ ಕಾಡಲಿದೆ. ಹಣ ಗೆಲ್ಲುತ್ತದೆ, ಕ್ರಿಕೆಟ್ ನಶಿಸಿ ಹೋಗಲಿದೆ ಎಂದು ಪರೋಕ್ಷವಾಗಿ ಭಾರತದ ವಿರುದ್ಧ ಕಿಡಿಕಾರಿದರು,(ಏಜೆನ್ಸೀಸ್).