

ಗಂಗಾವತಿ: ನೀರು ಹರಿಸುವ ವಿಚಾರದಲ್ಲಿ ರಾಜ್ಯ ಸರ್ಕಾರ ರೈತರೊಂದಿಗೆ ಚೆಲ್ಲಾಟವಾಡುತ್ತಿದ್ದು, ಕಾಲುವೆಗೆ ಹರಿವು ಪ್ರಮಾಣದ ತಪ್ಪು ಮಾಹಿತಿ ನೀಡುತ್ತಿದೆ ಎಂದು ಮಾಜಿ ಶಾಸಕ ಬಸವರಾಜ ದಢೇಸೂಗೂರು ದೂರಿದರು.
ತಾಲೂಕಿನ ಗಡಿಭಾಗ ಶಿವಪುರದ ಬಳಿ ಭೋರೂಕಾದಲ್ಲಿ ನಡೆಯುತ್ತಿರುವ ಕ್ರೆಸ್ಟ್ ಗೇಟ್ ದುರಸ್ತಿ ಕಾಮಗಾರಿಯನ್ನು ಗುರುವಾರ ವೀಕ್ಷಿಸಿ ಮಾತನಾಡಿದರು. ಮುಂಗಾರು ವಿಳಂಬವಾಗಿದ್ದು, ಈಗಾಗಲೇ ಸಸಿ ಮಡಿ ಹಚ್ಚಿರುವ ರೈತರಿಗೆ ನೀರಿನ ಅಗತ್ಯವಿದೆ. ತುಂಗಭದ್ರಾ ಜಲಾಶಯದಲ್ಲಿ 80 ಟಿಎಂಸಿ ನೀರಿದ್ದರೂ, ದುರಸ್ತಿ ಕಾಮಗಾರಿ ನೆಪದಲ್ಲಿ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದರು.
ಬಿಜೆಪಿ ಆಡಳಿತಾವಧಿಯಲ್ಲಿ 30 ಟಿಎಂಸಿ ನೀರಿದ್ದಾಗಲೂ ಎಡದಂಡೆ ಕಾಲುವೆಗೆ ನೀರು ಹರಿಸಲಾಗಿದೆ. ಸಲಹಾ ಸಮಿತಿ ರಚನೆ ಬಗ್ಗೆ ಮಾತನಾಡುವ ಜಿಲ್ಲಾ ಉಸ್ತುವಾರಿ ಸಚಿವರಿಗೆ ರೈತರ ಬಗ್ಗೆ ಕಾಳಜಿಯಿಲ್ಲ. ಇನ್ನೆರೆಡು ದಿನಗಳಲ್ಲಿ ಕಾಲುವೆಗೆ 3 ಸಾವಿರ ಕ್ಯೂಸೆಕ್ ನೀರು ಹರಿಸದಿದ್ದರೆ ರೈತರೊಂದಿಗೆ ಪಕ್ಷಾತೀತ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಕಾಡಾ ಮಾಜಿ ಅಧ್ಯಕ್ಷ ಬಿ.ಎಚ್.ಎಂ.ತಿಪ್ಪೇರುದ್ರಸ್ವಾಮಿ ಮಾತನಾಡಿ, ನೀರು ಹರಿವು ಸಂದರ್ಭದಲ್ಲಿ ಕಾಲುವೆ ಮೇಲೆ ಗಸ್ತು ತಿರುಗಬೇಕಿದ್ದ ಅಧಿಕಾರಿಗಳು ನಾಪತ್ತೆಯಾಗಿದ್ದಾರೆ. ಕಾಡಾ ಕಚೇರಿಯಲ್ಲಿ ಉನ್ನತ ಅಧಿಕಾರಿಗಳು ಸಮಪರ್ಕ ಕರ್ತವ್ಯ ನಿರ್ವಹಿಸುತ್ತಿಲ್ಲ. ರೈತರೊಂದಿಗೆ ಚೆಲ್ಲಾಟವಾಡುವ ಸರ್ಕಾರ ಮತ್ತು ಅಧಿಕಾರಿಗಳಿಗೆ ಹೋರಾಟದ ಮೂಲಕ ತಕ್ಕ ಉತ್ತರ ನೀಡಲಾಗುವುದು ಎಂದರು.
ಬಿಜೆಪಿ ಪ್ರಮುಖರಾದ ನಾಗರಾಜ್ ಬಿಲ್ಗಾರ್, ಶರಣಪ್ಪ ಬಾವಿ, ಚಂದ್ರಶೇಖರ್ ಮುಸಾಲಿ, ಸೋಮಶೇಖರಗೌಡ, ವೀರಭದ್ರಗೌಡ, ಈರಣ್ಣ ಕುರಿ, ಮೋಹನ್ ಇತರರಿದ್ದರು.