ಜಮ್ಮು ಮತ್ತು ಕಾಶ್ಮೀರದ ಮಾಜಿ ಸಚಿವ ಚೌಧರಿ ಜುಲ್ಫಿಕರ್ ಬಿಜೆಪಿಗೆ ಸೇರ್ಪಡೆ!

jk
Published on

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆ ಚುನಾವಣೆ ದಿನಾಂಕಗಳ ಘೋಷಣೆಯಾಗಿದ್ದು, ಅದರ ಬೆನ್ನಲ್ಲೇ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿದ್ದು, ಜಮ್ಮು & ಕಾಶ್ಮೀರದ ಮಾಜಿ ಸಚಿವ ಜುಲ್ಫಿಕರ್ ಅಲಿ ಭಾನುವಾರ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಜಮ್ಮುವಿನ ತ್ರಿಕೂಟ ನಗರದಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಬಿಜೆಪಿ ಏರಿದ್ದಾರೆ. ಈ ಬಗ್ಗೆ ಜಮ್ಮು-ಕಾಶ್ಮೀರ ಬಿಜೆಪಿ ಮಾಹಿತಿ ನೀಡಿದೆ.

ಜುಲ್ಫಿಕರ್ ಅಲಿ ಜಮ್ಮು ಮತ್ತು ಕಾಶ್ಮೀರ ಅಪ್ನಿ ಪಕ್ಷದ (ಜೆಕೆಎಪಿ) ಉಪಾಧ್ಯಕ್ಷರಾಗಿದ್ದಾರೆ. ಅವರು ವೃತ್ತಿಯಲ್ಲಿ ವಕೀಲರು. ಈ ಹಿಂದೆ ರಾಜ್ಯದಲ್ಲಿ ಸಂಪುಟ ಸಚಿವರಾಗಿಯೂ ಕೆಲಸ ಮಾಡಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದರು.

ಬಿಜೆಪಿಯ ನೀತಿಗಳು ಮತ್ತು ಯೋಜನೆಗಳು ಸರದಿಯಲ್ಲಿರುವ ಕೊನೆಯ ವ್ಯಕ್ತಿಯನ್ನೂ ತಲುಪಿವೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿಯನ್ನು ಪುನಃಸ್ಥಾಪಿಸಲಾಗಿದೆ, ಕಲ್ಲು ತೂರಾಟವು ಕೊನೆಗೊಂಡಿದೆ, ಸಾಮಾನ್ಯ ಜನರು ಹೆಚ್ಚು ಸುರಕ್ಷಿತರಾಗಿದ್ದಾರೆ ಮತ್ತು ಕಣಿವೆ ರಾಜ್ಯದಲ್ಲಿ ಪ್ರವಾಸೋದ್ಯಮವು ಬೆಳೆದಿದೆ ಎಂದು ಅವರು ಹೇಳಿದರು.

ವೃತ್ತಿಯಲ್ಲಿ ವಕೀಲರಾಗಿರುವ ಅಲಿ ಅವರು 2008 ಮತ್ತು 2014 ರ ವಿಧಾನಸಭಾ ಚುನಾವಣೆಯಲ್ಲಿ ರಾಜೌರಿ ಜಿಲ್ಲೆಯ ದರ್ಹಾಲ್ ವಿಧಾನಸಭಾ ಕ್ಷೇತ್ರದಿಂದ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಟಿಕೆಟ್‌ನಲ್ಲಿ ಗೆದ್ದಿದ್ದಾರೆ. ಅವರು 2015 ರಿಂದ 2018 ರವರೆಗೆ ಮೆಹಬೂಬಾ ಮುಫ್ತಿ ನೇತೃತ್ವದ ಪಿಡಿಪಿ-ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.

ಜೂನ್ 2018 ರಲ್ಲಿ ಬಿಜೆಪಿ ಸರ್ಕಾರದಿಂದ ಹೊರಬಂದ ನಂತರ ಸಮ್ಮಿಶ್ರ ಸರ್ಕಾರ ಪತನವಾಯಿತು. ಇದರ ನಂತರ, ಮಾಜಿ ಸಚಿವ ಅಲ್ತಾಫ್ ಬುಖಾರಿ ನೇತೃತ್ವದಲ್ಲಿ ಅನೇಕ ಪಿಡಿಪಿ ನಾಯಕರು 2020 ರಲ್ಲಿ ಜೆಕೆಎಪಿ ಪಕ್ಷವನ್ನು ರಚಿಸಿದರು ಮತ್ತು ಅಲಿ ಅದರ ಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದರು. ಅಲಿ ಅವರು ದೆಹಲಿಯಲ್ಲಿ ಗೃಹ ಸಚಿವರನ್ನು ಭೇಟಿ ಮಾಡಿದರು ಮತ್ತು ವಿಧಾನಸಭೆ ಚುನಾವಣೆ ಸೇರಿದಂತೆ ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ ಹಲವು ವಿಷಯಗಳ ಬಗ್ಗೆ ಚರ್ಚಿಸಿದರು ಎಂದು ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ 3 ಹಂತಗಳಲ್ಲಿ ಮತದಾನವನ್ನು ನಡೆಸಲು ದಿನಾಂಕಗಳನ್ನು ಘೋಷಿಸಲಾಗಿದೆ. ಕೇಂದ್ರಾಡಳಿತ ಪ್ರದೇಶದಲ್ಲಿ ಮೊದಲ ಹಂತದ ಮತದಾನ ಸೆಪ್ಟೆಂಬರ್ 18 ರಂದು, ಎರಡನೇ ಹಂತ ಸೆಪ್ಟೆಂಬರ್ 25 ರಂದು ಮತ್ತು ಮೂರನೇ ಹಂತದ ಮತದಾನ ಅಕ್ಟೋಬರ್ 1 ರಂದು ನಡೆಯಲಿದೆ. ಇದರೊಂದಿಗೆ ಅಕ್ಟೋಬರ್ 4 ರಂದು ಮತ ಎಣಿಕೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net