

ನವದೆಹಲಿ: ಸೌರವ್ ಗಂಗೂಲಿ ನಾಯಕರಾಗಿ ಭಾರತೀಯ ಕ್ರಿಕೆಟ್‌ನಲ್ಲಿ ಕ್ರಾಂತಿ ಗಮನಾರ್ಹವಾದುದು. ಅದೇ ರೀತಿ ಎಡಗೈ ಆರಂಭಿಕ ಬ್ಯಾಟ್ಸ್‌ಮನ್ ಆಗಿಯೂ ಅವರು ವಿಶೇಷ ಛಾಪು ಮೂಡಿಸಿದವರು. ಸಚಿನ್ ತೆಂಡುಲ್ಕರ್ ಜತೆಗೂಡಿ ಹಲವಾರು ಇನಿಂಗ್ಸ್‌ಗಳಲ್ಲಿ ಭಾರತ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟವರು ಗಂಗೂಲಿ. ಆದರೆ ಭಾರತ ತಂಡಕ್ಕೆ ಕಾಲಿಟ್ಟ ಆರಂಭಿಕ ದಿನಗಳಲ್ಲಿ ಗಂಗೂಲಿ ಅವರೊಬ್ಬ ಆರಂಭಿಕ ಬ್ಯಾಟ್ಸ್‌ಮನ್ ಆಗಿರಲಿಲ್ಲ. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿದ್ದರು.ಆರಂಭಿಕರಾದ ಬಳಿಕ ಅವರ ಬ್ಯಾಟಿಂಗ್ ವೈಖರಿಯೇ ಬದಲಾಗಿ ಹೋಗಿತ್ತು. ಗಂಗೂಲಿ ಆರಂಭಿಕರಾಗಿ ಬಡ್ತಿ ಪಡೆಯಲು ಕಾರಣ ನಾನೇ ಎಂದು ಭಾರತ ತಂಡದ ಮಾಜಿ ಕೋಚ್ ಮದನ್ ಲಾಲ್ ಹೇಳಿಕೊಂಡಿದ್ದಾರೆ.
ಮದನ್ ಲಾಲ್
‘ನಾನು ಗಂಗೂಲಿ ಅವರ ಬ್ಯಾಟಿಂಗ್ ಅನ್ನು ಸಮರ್ಥವಾಗಿ ಬಳಸಿಕೊಳ್ಳಲು ಬಯಸಿದ್ದೆ. ಹೀಗಾಗಿ ಅವರಿಗೆ, ದಾದಾ 5ನೇ ಕ್ರಮಾಂಕದ ಬ್ಯಾಟಿಂಗ್‌ನಲ್ಲಿ ಏನೂ ನಡೆಯುವುದಿಲ್ಲ. ನೀವು ಇನಿಂಗ್ಸ್ ಆರಂಭಿಸಿ ಎಂದಿದ್ದೆ. ಅವರು ಅದಕ್ಕೆ ಓಕೆ ಎಂದಿದ್ದರು. ಬಳಿಕ ಅವರಿಗೆ ಹಿಂದಿರುಗಿ ನೋಡುವ ಪ್ರಸಂಗ ಬರಲಿಲ್ಲ’ ಎಂದು ಮದನ್ ಲಾಲ್ ಫೇಸ್‌ಬುಕ್ ಸಂದರ್ಶನದಲ್ಲಿ ವಿವರಿಸಿದ್ದಾರೆ. ಗಂಗೂಲಿ 1996ರ ಅಕ್ಟೋಬರ್‌ನಲ್ಲಿ ಜೈಪುರದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಮೊದಲ ಬಾರಿ ಆರಂಭಿಕರಾಗಿ ಆಡಿದ್ದರು. ಆಗ ಮದನ್ ಲಾಲ್ ಭಾರತ ತಂಡದ ಕೋಚ್ ಆಗಿದ್ದರು.
ಇದನ್ನೂ ಓದಿ: ವಿಶ್ವ ನಂ. 1 ಟೆನಿಸ್ ತಾರೆ ಜೋಕೊವಿಕ್ ವಿಚ್ಛೇದನ?
ಆರಂಭಿಕನಾಗಿ ಆಡಿದ ಮೊದಲ ಇನಿಂಗ್ಸ್‌ನಲ್ಲೇ ದಕ್ಷಿಣ ಆಫ್ರಿಕಾ ವೇಗಿಗಳ ದಾಳಿಯನ್ನು ಸಮರ್ಥವಾಗಿ ಎದುರಿಸಿ ಅರ್ಧಶತಕ ಬಾರಿಸಿದ್ದ ಗಂಗೂಲಿ, ಬಳಿಕ ಸಚಿನ್ ತೆಂಡುಲ್ಕರ್ ಜತೆಗೆ ಭಾರತ ತಂಡದ ಕಾಯಂ ಆರಂಭಿಕರಾಗಿದ್ದರು. ‘ಎಲ್ಲ ಆಟಗಾರರೂ ತಮ್ಮದೇ ಆದ ಶೈಲಿಯನ್ನು ಹೊಂದಿರುತ್ತಾರೆ. ಗಂಗೂಲಿ ಎಲ್ಲ ರೀತಿಯ ಹೊಡೆತಗಳನ್ನೂ ಬಾರಿಸುತ್ತಿದ್ದರು. ಎಲ್ಲ ಬ್ಯಾಟ್ಸ್‌ಮನ್‌ಗೂ ಕ್ರೀಸ್‌ಗೆ ಅಂಟಿಕೊಳ್ಳಲು ಸ್ವಲ್ಪ ಸಮಯ ಬೇಕಾಗುತ್ತದೆ. ಕೊಹ್ಲಿ, ರಹಾನೆ ಕೂಡ ಸಮಯ ತೆಗೆದುಕೊಳ್ಳುತ್ತಾರೆ’ ಎಂದು ಮದನ್ ಲಾಲ್ ವಿವರಿಸಿದ್ದಾರೆ.