ಬಾಲಕಾರ್ಮಿಕರ ರಕ್ಷಣೆಗೆ ಸತತ ದಾಳಿ

MEETING
ತಹಸೀಲ್ದಾರ್ ಡಾ.ಪ್ರತಿಭಾ ಆರ್. ಅಧ್ಯಕ್ಷತೆಯಲ್ಲಿ ಸೋಮವಾರ ಟಾಸ್ಕ್‌ಫೋರ್ಸ್ ಅಧಿಕಾರಿಗಳ ಸಭೆ ನಡೆಯಿತು. ಕಾರ್ಮಿಕ ಇಲಾಖೆ ಅಧಿಕಾರಿ ನವೀನ್ ಸಹಿತ ಹಲವರಿದ್ದರು
Published on

ವಿಜಯವಾಣಿ ಸುದ್ದಿಜಾಲ ಕಾರ್ಕಳ

ಬಾಲಕಾರ್ಮಿಕರ ರಕ್ಷಣೆ ಉದ್ದೇಶದಿಂದ ತಾಲೂಕಾದ್ಯಂತ ಅನಿರೀಕ್ಷಿತ ದಾಳಿಗಳನ್ನು ಸತತ ನಡೆಸಬೇಕು. ಬಾಲಕಾರ್ಮಿಕರನ್ನು ದುಡಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ. 18 ವರ್ಷದೊಳಗಿನವರನ್ನು ದುಡಿಸಿಕೊಳ್ಳುವಂತಿಲ್ಲ. ಕಾನೂನು ಉಲ್ಲಂಘಿಸಿದರೆ ಕನಿಷ್ಠ 6 ತಿಂಗಳಿಂದ ಗರಿಷ್ಠ 2 ವರ್ಷದ ತನಕ ಜೈಲು ಶಿಕ್ಷೆ ಸಹಿತ 20 ಸಾವಿರದಿಂದ 50 ಸಾವಿರ ತನಕ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ಕಾರ್ಕಳ ತಹಸೀಲ್ದಾರ್ ಡಾ.ಪ್ರತಿಭಾ ಆರ್ ಹೇಳಿದರು.

ಕಾರ್ಕಳ ತಹಸೀಲ್ದಾರ್ ಕಚೇರಿಯಲ್ಲಿ ಸೋಮವಾರ ಟಾಸ್ಕ್‌ಫೋರ್ಸ್ ಅಧಿಕಾರಿಗಳ ಸಭೆಯ ಅಧ್ಯಕ್ಷೆ ವಹಿಸಿ ಮಾತನಾಡಿದರು.

ಬಾಲ ಹಾಗೂ ಕಿಶೋರ ಕಾರ್ಮಿಕರನ್ನು ಪತ್ತೆ ಮಾಡಿ ಪುರ್ನವಸತಿ ಕಲ್ಪಿಸಲು ತಾಲೂಕು ಮಟ್ಟದಲ್ಲಿ ಟಾಸ್ಕ್‌ಫೋರ್ಸ್ ಸಮಿತಿ ರಚಿಸಲಾಗಿದೆ. ಬಾಲಕಾರ್ಮಿಕ ಪದ್ಧತಿ ಹಾಗೂ ಜಾರಿಯಲ್ಲಿರುವ ಕಾನೂನಿನ ಅರಿವು-ನೆರವು ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಆಟೊ ಪ್ರಚಾರ, ಬೀದಿನಾಟಕ, ಗೋಡೆ ಬರಹದ ಜತೆಗೆ ಕರಪತ್ರ ಮತ್ತು ಭಿತ್ತಿ ಚಿತ್ರಗಳನ್ನು ಹಂಚಿ ಜಾಗೃತಿ ಮೂಡಿಸಬೇಕು ಎಂದು ಸೂಚನೆ ನೀಡಿದರು.

ಕ್ರಷರ್ ಹಾಗೂ ಕಲ್ಲುಕ್ವಾರಿಗಳಲ್ಲಿ ಬಾಲ ಕಾರ್ಮಿಕ ಪ್ರಕರಣಗಳು ಕಂಡುಬರುವ ಸಾಧ್ಯತೆಯಿದ್ದು ಸದರಿ ಸ್ಥಳಗಳಲ್ಲಿ ನಿರೀಕ್ಷಕರು ಜಂಟಿ ತಪಾಸಣೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ತಹಸೀಲ್ದಾರ್ ತಿಳಿಸಿದರು. ಸಭೆಯಲ್ಲಿ ಟಾಸ್ಕ್‌ಫೋರ್ಸ್ ಸಮಿತಿ ಸದಸ್ಯರು ಹಾಜರಿದ್ದರು. ಕಾರ್ಮಿಕ ಇಲಾಖೆ ಅಧಿಕಾರಿ ನವೀನ್ ಕಾರ್ಯಕ್ರಮ ನಿರೂಪಿಸಿದರು.

ಸಾರ್ವಜನಿಕರು ಸಹ ತಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಯಾರಾದರೂ ಮಕ್ಕಳನ್ನು ನೇಮಿಸಿಕೊಂಡಿರುವುದು ಕಂಡುಬಂದಲ್ಲಿ ತಕ್ಷಣವೇ ಮಕ್ಕಳ ಸಹಾಯವಾಣಿ 1098 ಮತ್ತು ಪೊಲೀಸ್ ಇಲಾಖೆಯ ಸಹಾಯವಾಣಿ 112 ಸಂಖ್ಯೆಗೆ ಕರೆ ಮಾಡಿ ಮಕ್ಕಳ ರಕ್ಷಣೆಗೆ ಸಹಕಾರ ನೀಡಬೇಕು. -ಡಾ.ಪ್ರತಿಭಾ ಆರ್. ಕಾರ್ಕಳ ತಹಸೀಲ್ದಾರ್ https://www.vijayavani.net/bad-condition-of-gangolli-port-connecting-road https://www.vijayavani.net/from-the-congress-government-to-the-decline-of-the-state

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net