ಚಿಕ್ಕಬಳ್ಳಾಪುರ: ಪೆಟ್ರೋಲ್ ಬಂಕ್ ನಿರ್ಮಾಣಕ್ಕೆ ಉದ್ದೇಶಿಸಿದ ಜಾಗದಲ್ಲಿನ ಮರಗಳ ಕಟಾವಿಗೆ ಲಂಚ ಪಡೆಯುತ್ತಿದ್ದ ವಲಯ ಅರಣ್ಯ ಇಲಾಖೆ ಕಚೇರಿಯ ಸಹಾಯಕ ಅರಣ್ಯಾಧಿಕಾರಿ ಮತ್ತು ಇಲಾಖೆಯ ಜೀಪಿನ ಚಾಲಕ ಲೋಕಾಯಕ್ತರ ಬಲೆಗೆ ಸಿಕ್ಕಿ ಬಿದ್ದಿದ್ದಾರೆ.

ಚಿಂತಾಮಣಿ ವಲಯ ಅರಣ್ಯ ಇಲಾಖೆ ಕಚೇರಿಯ ಸಹಾಯಕ ಅರಣ್ಯಾಧಿಕಾರಿ ಧನಲಕ್ಷಿ$್ಮ ಹಾಗೂ ಜೀಪಿನ ಚಾಲಕ ಮಣಿಕಂಠ ಆರೋಪಿಗಳು. ದೊಡ್ಡಗಂಜೂರು ಗ್ರಾಮದ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾದು ಹೋಗುವ ಪೆಟ್ರೋಲ್ ಬಂಕ್ವೊಂದು ತೆರೆಯುವ ಜಾಗದಲ್ಲಿದ್ದ ಮರಗಳ ಕಟಾವಿಗೆ ಶ್ರೀನಾಥ್ ಎಂಬುವರ ಬಳಿ ಲಂಚಕ್ಕೆ ಒತ್ತಾಯಿಸಲಾಗಿತ್ತು. ಮನವಿ ಪತ್ರ ಸಲ್ಲಿಸಿದಾಗ ಮೌಖಿಕವಾಗಿ ಆದೇಶ ನೀಡಿದ್ದವರು ಮರಗಳನ್ನು ಕಟಾವಿನ ಬಳಿಕ ಜಮೀನಿನ ಮಾಲೀಕರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಜತೆಗೆ ದಂಡ ವಿಧಿಸಲು ಮುಂದಾಗಿದ್ದಾರೆ. ಇದೇ ವೇಳೆ ಕಡಿಮೆ ದಂಡ ನಿಗದಿಪಡಿಸಲು 50 ಸಾವಿರ ರೂಗಳಿಗೂ ಒತ್ತಾಯಿಸಿದ್ದು ಶುಕ್ರವಾರ ಬೆಳಿಗ್ಗೆ ಮೊದಲ ಕಂತಿನ ಹಣವಾಗಿ 15 ಸಾವಿರ ರೂಗಳನ್ನು ಕಚೇರಿಯಲ್ಲಿ ಪಡೆಯುತ್ತಿದ್ದಾಗ ವಲಯ ಅರಣ್ಯ ಇಲಾಖೆಯ ಸಹಾಯಕ ಅರಣ್ಯಾಧಿಕಾರಿ ಧನಲಕ್ಷಿ$್ಮ ಮತ್ತು ಜೀಪಿನ ಚಾಲಕ ಮಣಿಕಂಠ ಲೋಕಾಯಕ್ತರ ಬಲೆಗೆ ಸಿಕ್ಕಿ ಬಿದ್ದಿದ್ದಾರೆ. ಕಾರ್ಯಾಚರಣೆಯನ್ನು ಜಿಲ್ಲಾ ಲೋಕಾಯುಕ್ತ ಎಸ್ ಪಿ ಆಂಟೋನಿ ಜಾನ್, ಡಿವೈಎಸ್ಪಿ ವೀರೇಂದ್ರ ಕುಮಾರ್ ನೇತೃತ್ವದ ತಂಡವು ಕೈಗೊಂಡಿತ್ತು.