

ಹರಿಪ್ರಸಾದ್ ನಂದಳಿಕೆ ಕಾರ್ಕಳ
ಕಳೆದೆರಡು ವರ್ಷದಿಂದ ರಾಷ್ಟ್ರೀಯ ಹೆದ್ದಾರಿ 169ರ ಕಾಮಗಾರಿ ನಡೆಯುತ್ತಿದ್ದು, ಬಹುತೇಕ ಭಾಗದಲ್ಲಿ ಕಾಮಗಾರಿ ವೇಗ ಪಡೆದರೆ ಇತ್ತ ದ.ಕ ಹಾಗೂ ಉಡುಪಿ ಜಿಲ್ಲೆಯ ಗಡಿಪ್ರದೇಶದಲ್ಲಿ ಸಾಣೂರು- ಬಿಕರ್ನಕಟ್ಟೆ ಚತುಷ್ಪಥ ಕಾಮಗಾರಿಗೆ ಅರಣ್ಯ ಇಲಾಖೆ ಕಂಟಕ ತಂದೊಡ್ಡಿದೆ. ಅರಣ್ಯ ಇಲಾಖೆ ಅನುಮತಿ ದೊರಕದ ಹಿನ್ನೆಲೆಯಲ್ಲಿ ರಸ್ತೆ ಕಾಮಗಾರಿ ಮೀನಮೇಷ ಎನಿಸಿಕೊಂಡು ಸಾಗುವಂತಾಗಿದೆ.
ತಾಲೂಕು ಸಾಣೂರು ಪುಲ್ಕೇರಿ ಬೈಪಾಸ್ನಿಂದ ಪ್ರಾರಂಭವಾಗಿರುವ ರಾ.ಹೆದ್ದಾರಿ ಕಾಮಗಾರಿಗೆ ಸಾಣೂರು ಗ್ರಾಪಂ ವ್ಯಾಪ್ತಿಯ ಗಡಿ ಪ್ರದೇಶ ಮುರತಂಗಡಿ ದಾಟಿ ಬೆಳವಾಯಿ ಸಂಪರ್ಕದ ಮಧ್ಯೆ ಇರುವ ಚಿಲಿಂಬಿಗುಡ್ಡ ಅರಣ್ಯ ಪ್ರದೇಶಕ್ಕೆ ಅರಣ್ಯ ಇಲಾಖೆಯಿಂದ ಹೆದ್ದಾರಿ ಕಾಮಗಾರಿ ನಡೆಸಲು ಅನುಮತಿ ಪತ್ರ ದೊರೆಯದ ಕಾರಣ ಸುಮಾರು ಒಂದೂವರೆ ಕಿಲೋ ಮೀಟರ್ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗೆ ಅಡ್ಡಿಯುಂಟಾಗಿದೆ.
ಸುತ್ತಲೂ ಬೆಟ್ಟಗುಡ್ಡ, ಕಾಡು, ಸಣ್ಣ ನೀರಿನ ತೊರೆ ಒಳಗೊಂಡ ಸಾಣೂರು ಚಿಲಿಂಬಿ ಪ್ರದೇಶ ಸಾಣೂರು ಮುರತಂಗಡಿ, ಕಾಂತಾವರ ಪ್ರದೇಶ ಕಾರ್ಕಳ ತಾಲೂಕಿಗೆ ಸೇರಿದ್ದು, ಬೆಳುವಾಯಿ ಪರಿಸರ ಮಂಗಳೂರು ತಾಲೂಕು ಹಾಗೂ ದ.ಕ. ಜಿಲ್ಲೆಗೆ ಸೇರಿದೆ. ಈ ಭಾಗದಲ್ಲಿ ಹೆದ್ದಾರಿ ಹಾದು ಹೋಗುವ ಪರಿಸರದಲ್ಲಿ ಅರಣ್ಯ ಇಲಾಖೆಗೆ ಸಂಬಂಧಿಸಿದ ಜಾಗವಿರುವ ಪರಿಣಾಮ ಅರಣ್ಯ ಇಲಾಖೆ ಅನುಮತಿ ಪತ್ರ ಅತಿ ಅಗತ್ಯ. ಅಧಿಕಾರಿಗಳು ಕಳೆದೆರಡು ವರ್ಷಗಳಿಂದ ಅನುಮತಿಗೆ ಪ್ರಯತ್ನ ನಡೆಸುತ್ತಿದ್ದರೂ ಇಲ್ಲಿವರೆಗೂ ಅರಣ್ಯ ಇಲಾಖೆ ಮಾತ್ರ ಗ್ರೀನ್ ಸಿಗ್ನಲ್ ನೀಡಿಲ್ಲ. ಪರಿಣಾಮ ಕಾಮಗಾರಿ ಅರೆಬರೆಯಾಗಿ ನಡೆಸುವಂತಾಗಿದೆ.
ಇದೀಗ ಚಿಲಿಂಬಿ ಒಂದುವರೆ ಕಿ.ಮೀ ಉದ್ದದ ರಸ್ತೆ ಮಾತ್ರ ಬಿಟ್ಟು ಬಾಕಿ ಉಳಿದ ಕಡೆಗಳಲ್ಲಿ ಅಗಲೀಕರಣ ಕಾಮಗಾರಿ ನಡೆದಿದೆ. ಇಲ್ಲಿನ ರಸ್ತೆ ಅಗಲೀಕರಣಕ್ಕಾಗಿ ಹಾಗೂ ಅಭಿವೃದ್ಧಿಗೆ ಅರಣ್ಯ ಇಲಾಖೆ ಒಪ್ಪಿಗೆ ನೀಡುವುದು ಬಹುಮುಖ್ಯ. ಅನುಮತಿಗೆ ಬೆಂಗಳೂರಿನಿಂದ ದಾಖಲೆ ಪತ್ರಗಳು ಕುಂದಾಪುರ ಅರಣ್ಯ ಇಲಾಖೆಗೆ ರವಾನೆಯಾಗಿದೆ.
ಉಡುಪಿ ಮತ್ತು ದ.ಕ. ಉಭಯ ಜಿಲ್ಲೆಯ ಜಿಲ್ಲಾಧಿಕಾರಿ ಮಂಗಳೂರು ಹಾಗೂ ಉಡುಪಿ ಸಂಸದರು, ಕಾರ್ಕಳ ಮತ್ತು ಮೂಡುಬಿದಿರೆ ಶಾಸಕರು ಜತೆಯಾಗಿ ಕೂಡಲೇ ಅನುಮತಿ ಸಿಗುವ ನೆಲೆಯಲ್ಲಿ ಒಟ್ಟಾಗಿ ಪ್ರಯತ್ನ ಮಾಡಿದರೆ ಬಹುದಿನದ ಕಂಟಕವೊಂದು ತಪ್ಪಿ ಹೆದ್ದಾರಿ ನಿರ್ಮಾಣ ಸಾಧ್ಯ.
ಪುಲ್ಕೇರಿಯಿಂದ ಚಿಲಿಂಬಿವರೆಗಿನ ರಸ್ತೆ ಕಾಮಗಾರಿ ನಡೆದಿದ್ದು, ವಾಹನಗಳು ವೇಗವಾಗಿ ಬಂದು ಚಿಲಿಂಬಿ ಹತ್ತಿರವಾಗುತ್ತಿದ್ದಂತೆ ಅಲ್ಲಿನ ಕಿರಿದಾದ ರಸ್ತೆ ಹಾಗೂ ಸುರಕ್ಷತೆಗಾಗಿ ಇಡಲಾದ ಬ್ಯಾರಿಕೇಡ್ಗಳಿಂದ ಅಪಘಾತಗಳಿಗೆ ಕಾರಣವಾಗುತ್ತದೆ. ಅಲ್ಲದೆ ರಸ್ತೆ ಅಲ್ಲಲ್ಲಿ ಡೈವರ್ಷನ್ಗಳಿಂದ ವಾಹನ ಸವಾರರು ನಿತ್ಯ ಎಡವಟ್ಟು ಮಾಡಿಕೊಳ್ಳುವಂತಾಗಿದೆ. ಎರಡು ವರ್ಷಗಳಿಂದಲೂ ಇದೇ ಸಮಸ್ಯೆಯಿದ್ದು ಜನ ಸಂಕಟ ಅನುಭವಿಸುವಂತಾಗಿದೆ.
ಉಭಯ ಜಿಲ್ಲೆ ಜಿಲ್ಲಾಧಿಕಾರಿಗಳು ಮತ್ತು ಶಾಸಕರು ಹಾಗೂ ಸಂಸದರು ಅಭಿವೃದ್ಧಿಪರ ಇಚ್ಛಾಶಕ್ತಿ ತೋರ್ಪಡಿಸಿ, ಅರಣ್ಯ ಇಲಾಖೆಯಿಂದ ಅನುಮತಿ ದೊರಕಿಸಿದರೇ ಸಾಣೂರು ಚಿಲಿಂಬಿ ಪ್ರದೇಶದ ಹೆದ್ದಾರಿ ಕಾಮಗಾರಿಗೆ ಮುಕ್ತಿ ಸಿಗಲಿದೆ. ಬೈಪಾಸ್ನಿಂದ ಮೂಡುಬಿದಿರೆ ಅಲಂಗಾರುವರೆಗೆ ಸುಮಾರು 12 ಕಿಲೋಮೀಟರ್ ಬಹುತೇಕ ಹೆದ್ದಾರಿ ಚತುಷ್ಪಥ ಕಾಮಗಾರಿ ಮುಗಿಯುವ ಹಂತದಲ್ಲಿದ್ದು, ಇಲ್ಲಿನ ಒಂದುವರೆ ಕಿ.ಮೀ ಉದ್ದದ ರಸ್ತೆ ವಾಹನ ಸವಾರರಿಗೆ ಸಂಕಟವಾಗಿದೆ. ಸಾಣೂರು ನರಸಿಂಹ ಕಾಮತ್ ಹೆದ್ದಾರಿ ಹೋರಾಟ ಸಮಿತಿ ಪ್ರಮುಖರು https://www.vijayavani.net/there-are-a-lot-of-potholes-on-the-brahavara-road https://www.vijayavani.net/ganesh-chaturthi-celebration-consultation-meeting