

ಪುರುಷೋತ್ತಮ ಪೆರ್ಲ ಕಾಸರಗೋಡು
ಎಂಡೋಸಲ್ಫಾನ್ ದುಷ್ಪರಿಣಾಮಕ್ಕೆ ತುತ್ತಾಗಿ ಪ್ರಾಣ ಕಳೆದುಕೊಂಡಿರುವ ಪುತ್ರನ ಚಿಕಿತ್ಸಾ ವೆಚ್ಚಕ್ಕಾಗಿ ವರ್ಷಗಳ ಹಿಂದೆ ಮಾಡಿರುವ ಸಾಲದ ಹೊರೆ ಎಣ್ಮಕಜೆ ಪಂಚಾಯಿತಿ ಶೇಣಿ ಶೇರಮೆ ನಿವಾಸಿ ವಾಸುದೇವ ನಾಯಕ್ ಅವರನ್ನು ಬೆಂಬಿಡದೆ ಕಾಡುತ್ತಿದೆ.
ಪುತ್ರನ ಚಿಕಿತ್ಸೆಗಾಗಿ ಬ್ಯಾಂಕಿನಿಂದ ಪಡೆದಿರುವ ಸಾಲ ಮರುಪಾವತಿಸಲಾಗದೆ ಅವರ ಮನೆ ಹಾಗೂ ಆಸ್ತಿ ಹರಾಜಾಗುವ ಹಂತದಲ್ಲಿದೆ. ಜಾಗವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದು, ಮೂರು ತಿಂಗಳೊಳಗೆ ಬ್ಯಾಂಕಿನ ಹಣ ಪಾವತಿಸಬೇಕು, ತಪ್ಪಿದಲ್ಲಿ ಜಾಗ ವಶಪಡಿಸಿಕೊಳ್ಳುವ ಬಗ್ಗೆ ಬ್ಯಾಂಕ್ನ ಕಂದಾಯ ವಸೂಲಿ ವಿಭಾಗದಿಂದ ನೋಟಿಸ್ ಮನೆಗೆ ಲಗತ್ತಿಸಲಾಗಿದೆ.
ಪತ್ನಿ, ಪುತ್ರ, ಪುತ್ರಿಯೊಂದಿಗೆ ಸಣ್ಣ ಮನೆಯಲ್ಲಿ ಶೇರಮೆಯಲ್ಲಿ ವಾಸಿಸುತ್ತಿದ್ದ ವಾಸುದೇವ ನಾಯಕ್ ಅವರ ಕುಟುಂಬಕ್ಕೆ ಒಂದರ ಮೇಲೊಂದರಂತೆ ಎದುರಾಗಿರುವ ಸಂಕಷ್ಟಗಳಿಂದ ಬದುಕು ದುಸ್ತರವಾಗಿದೆ. ವರ್ಷಗಳ ಹಿಂದೆ ಪುತ್ರ ಶ್ರೇಯಸ್ ಎಂಡೋಸಲ್ಫಾನ್ ದುಷ್ಪರಿಣಾಮದಿಂದ ಹದಿನೆಂಟರ ಹರೆಯದಲ್ಲಿ ಪ್ರಾಣ ಕಳೆದುಕೊಂಡ ನಂತರ ವಾಸುದೇವ ನಾಯಕ್ ಕುಟುಂಬದ ಬದುಕು ಅಯೋಮಯವಾಗಿದೆ.
ಪುತ್ರನ ಚಿಕಿತ್ಸೆಗಾಗಿ ವಿವಿಧ ಬ್ಯಾಂಕ್ಗಳಿಂದ ಮಾಡಿದ ಸಾಲ ಮರುಪಾವತಿಸಲಾಗದೆ ಇಂದು ಈ ಮೊತ್ತ ಎಂಟು ಲಕ್ಷ ರೂ.ಗೂ ಹೆಚ್ಚಾಗಿದೆ. ಒಂದೂಮುಕ್ಕಾಲು ಎಕರೆ ಜಾಗದಲ್ಲಿ ಸಣ್ಣ ಜೋಪಡಿಯಲ್ಲಿ ವಾಸಿಸುತ್ತಿರುವ ವಾಸುದೇವ ನಾಯಕ್ ಅವರಿಗೆ ಕೆಲವು ವರ್ಷಗಳ ಹಿಂದೆ ಪಂಚಾಯಿತಿ ವತಿಯಿಂದ ಮಂಜೂರಾಗಿ ಲಭಿಸಿದ್ದ ಮನೆ ಕೆಲಸವೂ ಅರ್ಧದಲ್ಲಿದ್ದು, ಇದರಲ್ಲಿ ಕಾಡು ಬೆಳೆಯುತ್ತಿದೆ. ಪುತ್ರನ ಸಾವಿನ ನಂತರ ಪುತ್ರಿಯ ಓದಿಗಾಗಿ ಪತ್ನಿ ತವರು ಸೇರಿಕೊಂಡ ನಂತರ ವಾಸುದೇವ ನಾಯಕ್ ಒಂಟಿಯಾಗಿ ಇದೇ ಜೋಪಡಿಯಲ್ಲಿ ಕಾಲ ಕಳೆಯುತ್ತಿದ್ದಾರೆ.
ಮಾತು ಪಾಲಿಸದ ನಟ ಸುರೇಶ್ಗೋಪಿ
ಪುತ್ರನ ಎಂಡೋಸಲ್ಫಾನ್ ದುಷ್ಪರಿಣಾಮದಿಂದ ಪದವೀಧರನಾಗಿರುವ ವಾಸುದೇವ ನಾಯಕ್ ಅವರ ಬಹುಕಾಲದ ಕನಸು ನುಚ್ಚುನೂರಾಗಿದೆ. ವರ್ಷಗಳ ಹಿಂದೆ ಎಂಡೋಸಲ್ಫಾನ್ ಸಂತ್ರಸ್ತರಿಗಾಗಿ ತನ್ನ ಟ್ರಸ್ಟ್ ವತಿಯಿಂದ ಧನಸಹಾಯ ವಿತರಿಸಿದ್ದ ಚಿತ್ರನಟ, ಹಾಲಿ ಕೇಂದ್ರ ಸಚಿವ ಸುರೇಶ್ಗೋಪಿ, ವಾಸುದೇವ ನಾಯಕ್ ಅವರ ಬ್ಯಾಂಕ್ ಸಾಲದ ಮೊತ್ತವನ್ನೂ ಪರಿಗಣಿಸಿದ್ದರು. ಪೆರಿಯದಲ್ಲಿ ನಡೆದ ಸಮಾರಂಭವೊಂದರಲ್ಲಿ ಬ್ಯಾಂಕ್ ಸಾಲ ಹೊಂದಿದ್ದ ಎಂಡೋ ಸಂತ್ರಸ್ತರಿಗೆ ಧನಸಹಾಯದ ಚೆಕ್ ವಿತರಿಸಿದ್ದರೂ, ವಾಸುದೇವ ನಾಯಕ್ ಅವರ ಬ್ಯಾಂಕ್ ಸಾಲದ ಖಚಿತ ಮೊತ್ತ ಕೈಸೇರದಿದ್ದುದರಿಂದ ಅಂದು ಈ ಚೆಕ್ ಹಸ್ತಾಂತರ ತಡೆಹಿಡಿಯಲಾಗಿತ್ತು. ನಂತರದ ದಿನಗಳಲ್ಲಿ ಬಿಜೆಪಿ ಮುಖಂಡರ ಮೂಲಕ ಚೆಕ್ಗಾಗಿ ವಾಸುದೇವ ನಾಯಕ್ ಅಲೆದಾಟ ನಡೆಸಿದ್ದರೂ ಒಂದಲ್ಲ ಒಂದು ಕಾರಣದಿಂದ ಮುಂದೂಡುತ್ತಾ ಬರಲಾಗಿದೆ.
ಬ್ಯಾಂಕ್ ಸಾಲ ಮಾಡಿ ಪುತ್ರನಿಗೆ ಚಿಕಿತ್ಸೆ ಕೊಡಿಸಿದರೂ ಪುತ್ರನನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಸಾಲ ಮರುಪಾವತಿಗಾಗಿ ಜಾಗ ಜಪ್ತಿ ಆದೇಶ ಬಂದಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ನಟ ಸುರೇಶ್ಗೋಪಿ ಅವರು ನೀಡಲು ಮುಂದಾಗಿದ್ದ ಚೆಕ್ ಇನ್ನೂ ಕೈಸೇರಿಲ್ಲ. ಬಿಜೆಪಿ ಮುಖಂಡರ ಬಳಿ ಹಲವು ಬಾರಿ ಈ ಬಗ್ಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಪಕ್ಷದ ಹೊಸ ಅಧ್ಯಕ್ಷರು ಈ ಬಗ್ಗೆ ಗಮನಹರಿಸುವರೆಂಬ ಭರವಸೆಯಿದೆ. ವಾಸುದೇವ ನಾಯಕ್ ಶೇರಮೆ ಸಂತ್ರಸ್ತ ಕೃಷಿಕ https://www.vijayavani.net/second-makhe-jatra-at-sri-sahasralingeshwar-temple https://www.vijayavani.net/shivratri-in-karnad