

ಕನಕಪುರ: ಕನಕಪುರದ ಶ್ರೀದೇಗುಲಮಠದಲ್ಲಿ ಪರಂಪರೆಯ ಗುರು ಕೋರಣ್ಯ ಕಾಯಕ ಕಾರ್ಯಕ್ರಮಕ್ಕೆ ಡಾ. ಶ್ರೀ ಮುಮ್ಮಡಿ ನಿರ್ವಾಣ ಸ್ವಾಮಿಗಳು ಶನಿವಾರ ಚಾಲನೆ ನೀಡಿದರು. ಕನಕಪುರ ನಗರದಲ್ಲಿ ಎರಡು ದಿನಗಳ ಕಾಲ ಗುರು ಕೋರಣ್ಯ ನಡೆಯಲಿದ್ದು, ಕಿರಿಯ ಶ್ರೀಚನ್ನಬಸವ ಸ್ವಾಮಿಗಳು ಗುರು ಕೋರಣ್ಯ ಕಾಯಕದ ನೇತೃತ್ವ ವಹಿಸಿದ್ದಾರೆ.
ದೇಗುಲಮಠದಲ್ಲಿ ಈ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯದಂತೆ ಭಾದ್ರಪದ ಮಾಸದಲ್ಲಿ ಶ್ರೀಮಠದ ದಾಸೋಹಕ್ಕೆ ಧಾನ್ಯವನ್ನು ಸಂಗ್ರಹಿಸುವ ಪದ್ಧತಿ ಇದ್ದು, ಆ ಪರಂಪರೆಯನ್ನು ಇಂದಿಗೂ ಮುನ್ನಡೆಸಲಾಗುತ್ತಿದೆ.
ವಿಶೇಷವಾಗಿ ಈ ಬಾರಿ ದೇಗುಲಮಠದ ಗುರು ಕೋರಣ್ಯ ಕಾಯಕದಲ್ಲಿ ಸ್ಥಳೀಯ ಮಠಗಳಾದ ಬಿಲ್ವಪತ್ರೆ ಗವಿಮಠದ ಶ್ರೀಶಿವಲಿಂಗ ಸ್ವಾಮಿಗಳು, ಅತ್ತಹಳ್ಳಿ ಮಠದ ಕಿರಿಯ ಶ್ರೀನಿರಂಜನ ಸ್ವಾಮಿಗಳು, ಮರಳವಾಡಿ ಮಠದ ಕಿರಿಯ ಶ್ರೀ ಪ್ರಭು ಕೀರಿಟ ಸ್ವಾಮಿಗಳು ಹಾಗೂ ತೋಟಹಳ್ಳಿ ಮಠದ ಶ್ರೀಬಸವಪ್ರಭು ಸ್ವಾಮಿಗಳು ಪಾಲ್ಗೊಂಡಿದ್ದರು.
ಕನಕಪುರದ ವಿವಿಧ ಬಡಾವಣೆಗಳಲ್ಲಿ ಸಾಗಿದ ಗುರು ಕಾರುಣ್ಯ ಕಾಯಕ ಜಾಥಾವನ್ನು ಭಕ್ತಿ-ಆದರದಿಂದ ಬರಮಾಡಿಕೊಂಡು ಭಕ್ತರು ತಮ್ಮ ಶಕ್ತ್ಯಾನುಸಾರ ದವಸ, ಧಾನ್ಯ, ಕಾಣಿಕೆ ಮತ್ತಿತರ ಪಡಿತರ ಸಾಮಾಗ್ರಿಗಳನ್ನು ನೀಡಿ ಶ್ರೀಮಠದ ದಾಸೋಹಕ್ಕೆ ಸೇವೆ ಸಲ್ಲಿಸಿದರು. ಕಾಯಕ ಜಾಥದಲ್ಲಿ ವಿವಿಧ ಭಜನೆ ತಂಡಗಳು ಪಾಲ್ಗೊಂಡು ಮೆರಗು ನೀಡಿದವು. ಶ್ರೀಮಠದ ಹಳೇ ವಿದ್ಯಾರ್ಥಿಗಳು, ಭಕ್ತರು, ಸಿಬ್ಬಂಧಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು.