ಠೇವಣಿದಾರರಿಗೆ ನ್ಯಾಯ ಕೊಡಿಸಲು ಪ್ರಯತ್ನ

21GKK1
ಗೋಕಾಕ ನಗರದಲ್ಲಿ ಹಮ್ಮಿಕೊಂಡಿದ್ದ ಸಭೆಯನ್ನು ಉದ್ದೇಶಿಸಿ ಶಾಸಕ ರಮೇಶ ಜಾರಕಿಹೊಳಿ ಮಾತನಾಡಿದರು. ಡಾ.ಮೋಹನ ಭಸ್ಮೆ, ಗೋಪಾಲ ರಾಠೋಡ, ಕೆ.ವಾಲಿಕರ ಉಪಸ್ಥಿತರಿದ್ದರು.
Published on

ಗೋಕಾಕ: ಆರ್‌ಬಿಐ ಹಾಗೂ ರಾಜ್ಯ ಸರ್ಕಾರದ ಮಾರ್ಗಸೂಚಿ ಪ್ರಕಾರ ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡಿ ಠೇವಣಿದಾರರಿಗೆ ಹಣ ಮರಳಿಸುವ ಪ್ರಾಮಾಣಿಕ ಯತ್ನ ಮಾಡುತ್ತೇನೆ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.

ನಗರದ ಶ್ರೀ ಮಹಾಲಕ್ಷ್ಮೀ ಸಭಾಭವನದಲ್ಲಿ ಇಲ್ಲಿನ ಮಹಾಲಕ್ಷ್ಮೀ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್‌ನಿಂದ 74.86 ಕೋಟಿ ರೂ. ಸಾಲ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬ್ಯಾಂಕ್‌ನ ಈ ಪ್ರಕರಣ ಬೆಳಕಿಗೆ ಬಂದ ಬಳಿಕ ಅಧಿಕಾರಿಗಳು ಮತ್ತು ರಾಜಕಾರಣಿಗಳು ಕೂಡಿ ಸಭೆ ಮಾಡಿ ಬಡವರಿಗೆ ನ್ಯಾಯ ದೊರಕಿಸಿಕೊಡುವ ಕಾರ್ಯ ಮಾಡುತ್ತಿರುವುದು ರಾಜ್ಯದಲ್ಲಿ ಇದೇ ಮೊದಲು. ಬಾಳಾಸಾಹೇಬ ಮಾಂಗಳೇಕರ ಅವರು ಬಹಳ ಕಷ್ಟಪಟ್ಟು ಸಹಕಾರಿ ಕಟ್ಟಿದ್ದಾರೆ. ಆಡಳಿತ ಮಂಡಳಿ ಈ ಹಗರಣದಲ್ಲಿ ಶಾಮೀಲು ಇಲ್ಲ. ಪೊಲೀಸರು ಹಂತ ಹಂತವಾಗಿ ತನಿಖೆ ನಡೆಸಿ ಈ ಪ್ರಕರಣ ಸರಿಪಡಿಸುತ್ತಾರೆ. ನನ್ನ ಮೇಲೆ ನಂಬಿಕೆ ಇಟ್ಟು ನನಗೆ ಸಹಕಾರ ನೀಡಿ, ಮುಂಬರುವ 3 ರಿಂದ 6 ತಿಂಗಳ ವರೆಗೆ ಇದನ್ನು ಸರಿಪಡಿಸುತ್ತೇನೆ ಎಂದು ಅಭಯ ನೀಡಿದರು. ತಹಸೀಲ್ದಾರ್ ಡಾ.ಮೋಹನ ಭಸ್ಮೆ, ಸಿಪಿಐ ಗೋಪಾಲ ರಾಠೋಡ, ಪಿಎಸ್‌ಐ ಕೆ.ವಾಲಿಕರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net