ಮರದ ಕಾಲುಸಂಕವೇ ಗತಿ : ಬಿರ್ಮೆರೆಗುಂಡಿ ಊರಿಗೆ ಇದುವೇ ಸಂಪರ್ಕ ಸೇತುವೆ : ಸ್ವಲ್ಪ ಆಯತಪ್ಪಿದರೂ ನೀರುಪಾಲಾಗುವ ಭೀತಿ

footbridge
ಸ್ಥಳೀಯರು ತೋಡಿಗೆ ನಿರ್ಮಾಣ ಮಾಡಿದ ಅಡಕೆ ಮರದ ಕಾಲುಸಂಕ.
Published on

ಪ್ರವೀಣ್‌ರಾಜ್ ಕೊಲ ಕಡಬ

ಕಡಬ ತಾಲೂಕು ಕಾಡಂಚಿನ ಕೊಂಬಾರು ಗ್ರಾಮವೊಂದರ ಊರಿನ ಜನತೆಗೆ ಮಳೆಗಾಲ ಬಂತೆಂದರೆ ಜೀವ ಭಯ ಕಾಡುತ್ತದೆ. ಆ ಊರಿನಿಂದ ಬಾಹ್ಯ ಸಂಪರ್ಕಕ್ಕೆ ಇರುವುದು ತೋಡಿಗೆ ಹಾಕಿರುವ ಅಡಕೆ ಮರದ ಕಾಲುಸಂಕ ಮಾತ್ರ. ದಾಡುವಾಗ ಸ್ವಲ್ಪ ಆಯತಪ್ಪಿದರೂ ನೀರುಪಾಲಾಗುವ ಭೀತಿಯಲ್ಲಿ ಜನ ನಿತ್ಯ ಇದರ ಮೇಲೆಯೇ ಓಡಾಡುತ್ತಾರೆ.

ಕೊಂಬಾರು ಗ್ರಾಮದ ಅಲ್ವೆ-ಕಟ್ಟೆ ಹೊಳೆಗೆ ಬಿರ್ಮೆರೆಗುಂಡಿ ಎಂಬಲ್ಲಿ ಸ್ಥಳೀಯ ಜನ ತೋಡು ದಾಟಲು ಅಡಕೆ ಮರದ ಕಾಲುಸಂಕ ನಿರ್ಮಾಣ ಮಾಡಿಕೊಂಡು ಬಳಕೆ ಮಾಡುವ ಅನಿವಾರ್ಯ ಪರಿಸ್ಥಿತಿ ಎದುರಿಸುತ್ತಿದ್ದಾರೆ.

ಮಳೆನಾಡಿನ ತಪ್ಪಲಿನಲ್ಲಿರುವ ಕೊಂಬಾರು ಸಿರಿಬಾಗಿಲು ಗ್ರಾಮಗಳು ಬಹುತೇಕ ಅರಣ್ಯ ಪ್ರದೇಶದಿಂದ ಕೂಡಿದ್ದು, ತೀರಾ ಗ್ರಾಮೀಣ ಭಾಗಕ್ಕೆ ಇನ್ನೂ ಸಂಪರ್ಕ ವ್ಯವಸ್ಥೆ ಇಲ್ಲ. ಕೆಲವು ಪ್ರದೇಶಗಳಲ್ಲಿ ಮಳೆಗಾಲ ಪ್ರಾರಂಭವಾದರೆ ಇಲ್ಲಿನ ತೋಡು, ಹೊಳೆಗಳು ತುಂಬಿ ಹರಿದು ಊರು ದ್ವೀಪವಾಗಿ ಬಿಡುತ್ತದೆ. ರಸ್ತೆ ಸಂಚಾರ ಸ್ಥಗಿತವಾಗುತ್ತದೆ. ಈ ಸಂದರ್ಭದಲ್ಲಿ ಜನರು ತೋಡುಗಳಿಗೆ ಮರ ಅಥವಾ ಅಡಕೆ ಮರದ ತಾತ್ಕಾಲಿಕ ಪಾಲಗಳನ್ನು ನಿರ್ಮಿಸಿಕೊಂಡು ಸಂಚರಿಸುತ್ತಾರೆ.

ಮಣಿಬಾಂಡ-ಕಟ್ಟೆ ಕಚ್ಚಾ ರಸ್ತೆಯಲ್ಲಿ ಒಂದೂವರೆ ಕಿ.ಮೀ. ಸಾಗಿದರೆ ಬಿರ್ಮೆರೆಗುಂಡಿ ಸಿಗುತ್ತದೆ. ಇಲ್ಲಿನ ನಿವಾಸಿಗಳು ಸೇರಿಕೊಂಡು ಅಡಕೆ ಮರದ ಕಾಲುಸಂಕವನ್ನು ತಾತ್ಕಾಲಿಕವಾಗಿ ನಿರ್ಮಾಣ ಮಾಡಿಕೊಳ್ಳುತ್ತಾರೆ. ಜೂನ್ ತಿಂಗಳಿಂದ ಡಿಸೆಂಬರ್ ತನಕ ಕಟ್ಟೆ ಪ್ರದೇಶದ ಹತ್ತು ಮನೆಗಳ ಜನರಿಗೆ ತೋಡು ದಾಟಲು ಇದೇ ಸಂಪರ್ಕ ಸೇತು. ಇಲ್ಲಿನ ಜನಗಳಿಗೆ ಮಳೆಗಾಲದಲ್ಲಿ ಇದು ಸಾಮಾನ್ಯ ಸಮಸ್ಯೆ. ಕಾಲುಸಂಕದ ಮೇಲೆ ಸರ್ಕಸ್ ಮಾಡಿಕೊಂಡು ಹೋಗುವುದು ಅಪಾಯಕಾರಿ. ಸ್ವಲ್ಪ ಆಯತಪ್ಪಿದರೂ ತೋಡುಪಾಲಾಗುವ ಭೀತಿ ಇಲ್ಲಿದೆ.

ಈ ಭಾಗದ ವಿದ್ಯಾರ್ಥಿಗಳು ಈ ಕಾಲುಸಂಕದಲ್ಲೇ ದಿನಂಪ್ರತಿ ಶಾಲೆಗೆ ಹೋಗುತ್ತಾರೆ. ಅನಾರೋಗ್ಯ ಪೀಡಿತರನ್ನು ಇದೇ ಕಾಲುಸಂಕದಲ್ಲಿ ಹೊತ್ತುಕೊಂಡು ಹೋಗಬೇಕಾದ ಅನಿವಾರ್ಯತೆ ಇದೆ. ಇಲ್ಲಿನ ವೃದ್ಧ ಮಹಿಳೆಯೊಬ್ಬರನ್ನು ವಾರಕ್ಕೆ ಒಂದು ಬಾರಿ ವೈದ್ಯರ ಬಳಿಗೆ ಚಿಕಿತ್ಸೆಗೆ ಕರೆದುಕೊಂಡು ಹೋಗಬೇಕಾಗುತ್ತದೆ. ಒಂದೊಮ್ಮೆ ಅವರನ್ನು ಕೈಗಾಡಿಯಲ್ಲಿ ಕುಳ್ಳಿರಿಸಿಕೊಂಡು ಬಂದು ಅವರ ಪುತ್ರ ಕಾಲುಸಂಕದಲ್ಲಿ ಹೆಗಲ ಮೇಲೆ ಹೊತ್ತುಕೊಂಡು ಹೋಗಿದ್ದರು. ಕಟ್ಟೆ ಪ್ರದೇಶದ ಜನ ವರ್ಷದಲ್ಲಿ ಆರು ತಿಂಗಳು ನರಕಯಾತನೆ ಅನುಭವಿಸಬೇಕಾಗುತ್ತದೆ. ಇವರಿಗೆ ಪರ‌್ಯಾಯ ದಾರಿ ಇದ್ದರೂ ಅದು 4-5 ಕಿ.ಮೀ.ದೂರದ ದುರ್ಗಮ ಸುತ್ತುಬಳಸು ದಾರಿ. ಕಾಡಿನ ಮಧ್ಯೆ ಆನೆಗಳ ಹಾವಳಿ ಬೇರೆ ಇದೆ.

ಅಹವಾಲು, ಮನವಿಗೆ ಇಲ್ಲ ಸ್ಪಂದನೆ

ಇಲ್ಲಿ ಸೇತುವೆ ನಿರ್ಮಾಣ ಮಾಡಿಕೊಡಿ ಎಂದು ಹಲವು ಸಮಯದಿಂದ ಸಂಬಂಧಪಟ್ಟವರಿಗೆ ಅಹವಾಲು ಸಲ್ಲಿಸಲಾಗುತ್ತಿದೆ. ಅದರೆ ಈವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಇಲ್ಲಿನ ನಿವಾಸಿ ಮಂಜುನಾಥ್ ಕೆ.ಎನ್. ಎಂಬುವರು ರಾಜ್ಯ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಇಲಾಖೆ, ದ.ಕ ಜಿಲ್ಲಾ ಪಂಚಾಯಿತಿ, ಜಿಲ್ಲಾಧಿಕಾರಿಯವರು, ಸಚಿವರು, ಶಾಸಕರಿಗೆ ಮನವಿ ಸಲ್ಲಿಸಿ ಬಿರ್ಮೆಗುಂಡಿ ಸಂಪರ್ಕ ರಸ್ತೆ ಅಭಿವೃದ್ಧಿ ಹಾಗೂ ಸೇತುವೆ ನಿರ್ಮಾಣ ಮಾಡುವಂತೆ ಆಗ್ರಹಿಸಿದ್ದರು. ಆದರೆ ಈ ವರೆಗೆ ಇವರ ಮನವಿಗೆ ಪೂರಕ ಸ್ಪಂದನೆ ದೊರೆತಿಲ್ಲ.

ಬಿರ್ಮೆರೆಗುಂಡಿಯಲ್ಲಿ ಅಗತ್ಯವಾಗಿ ಸೇತುವೆ ನಿರ್ಮಾಣವಾಗಬೇಕಿದೆ. ಸದ್ಯಕ್ಕೆ ಕಾಲುಸಂಕ ನಿರ್ಮಾಣ ಮಾಡಲು ಗ್ರಾಪಂ ವತಿಯಿಂದ ಅನುದಾನ ನೀಡಲಾಗುತ್ತಿದೆ. ಅಲ್ಲಿನ ರಸ್ತೆ ಅಭಿವೃದ್ಧಿಗೆ ಹಾಗೂ ಸೇತುವೆ ನಿರ್ಮಾಣಕ್ಕೆ ಬಗ್ಗೆ ಶಾಸಕರಲ್ಲಿ ಬೇಡಿಕೆ ಇಟ್ಟಿದ್ದೇವೆ. - ಮಧೂಸೂದನ್ ಒಡೋಳಿ, ಕೊಂಬಾರು ಗ್ರಾಪಂ ಅಧ್ಯಕ್ಷ https://www.vijayavani.net/kumble-cooperative-society-management-committee-suspension https://www.vijayavani.net/road-problem-16

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net