

ಮಂಗಳೂರು: ಫುಟ್ಬಾಲ್ ಪಂದ್ಯದ ವೇಳೆ ಉದ್ಭವಿಸಿದ ಜಗಳದ ಹಿನ್ನೆಲೆಯಲ್ಲಿ ಒಂದು ಕಾಲೇಜಿನ ವಿದ್ಯಾರ್ಥಿಗಳ ತಂಡವು ಇನ್ನೊಂದು ಕಾಲೇಜಿನ ಮೂವರು ವಿದ್ಯಾರ್ಥಿಗಳನ್ನು ಕಾರಿನಲ್ಲಿ ಅಪಹರಿಸಿ ತೀವ್ರವಾಗಿ ಹಲ್ಲೆ ನಡೆಸಿದ್ದು, ಗಾಯಾಳುಗಳು ಆಸ್ಪತ್ರೆಗೆ ದಾಖಲಾಗಿದ್ದು, ಇಬ್ಬರು ಆರೋಪಿಗಳನ್ನು ಬಂದರು ಪೊಲೀಸರು ಬಂಧಿಸಿದ್ದಾರೆ.
ಅಪಹರಣ- ಹಲ್ಲೆಗೆ ಒಳಗಾದ ಮೂವರೂ ವಿದ್ಯಾರ್ಥಿಗಳು 17 ವರ್ಷದೊಳಗಿನವರು. ಅಪಹರಣ ಮಾಡಿದ ಐವರ ಪೈಕಿ ಇಬ್ಬರು ಅಪ್ತಾಪ್ತರು. ಉಳಿದ ಮೂವರು ಆರೋಪಿಗಳು 18-19 ವರ್ಷ ವಯಸ್ಸಿನವರು. ಇನ್ನೂ ಮೀಸೆ ಮೂಡದ ವಿದ್ಯಾರ್ಥಿಗಳು ಸಿನಿಮೀಯ ರೀತೀಯಲ್ಲಿ ಅಪಹರಣ ಮಾಡಿ ಹಲ್ಲೆ ಮಾಡಿರುವುದು ಪೊಲೀಸರಲ್ಲೇ ಅಚ್ಚರಿ ಮೂಡಿಸಿದೆ.
ಫುಟ್ಬಾಲ್ ಪಂದ್ಯದ ಹಗೆ: ಆ.14ರಂದು ನಗರದ ನೆಹರು ಮೈದಾನದಲ್ಲಿ ಯೆನೆಪೋಯ ಕಾಲೇಜು ಫುಟ್ಬಾಲ್ ತಂಡ ಮತ್ತು ಅಲೋಶಿಯಸ್ ಕಾಲೇಜು ಫುಟ್ಬಾಲ್ ತಂಡಗಳ ನಡುವೆ ಪಂದ್ಯ ನಡೆದಿದ್ದು, ಅದರಲ್ಲಿ ಯೆನೆಪೋಯ ತಂಡ ಜಯ ಗಳಿಸಿತ್ತು. ಪಂದ್ಯದ ವೇಳೆ ನಡೆದ ಸಣ್ಣ ವಿವಾದ ಈ ಅಪರಾಧಕ್ಕೆ ಕಾರಣವಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ದ್ವೇಷದಿಂದ ಸೋಮವಾರ ಸಂಜೆ ಸುಮಾರು 6.15ರ ವೇಳೆಗೆ ನಗರದ ಪಾಂಡೇಶ್ವರ ಫೋರಂ ಮಾಲ್ ಬಳಿಯಿಂದ ಮೂವರು ಅಪ್ರಾಪ್ತ ವಿದ್ಯಾರ್ಥಿಗಳನ್ನು (ಇಬ್ಬರು ಯೇನೆಪೋಯ ಕಾಲೇಜು, ಇನ್ನೊಬ್ಬ ಮಾತಾ ಸಂಸ್ಥೆ ವಿದ್ಯಾರ್ಥಿ) ಇನ್ನೊಂದು ಕಾಲೇಜಿನ ವಿದ್ಯಾರ್ಥಿಗಳಾದ ದಿಯಾನ್, ತಸ್ಲಿಮ್, ಸಲ್ಮಾನ್ ಹಾಗೂ ಇಬ್ಬರು ಅಪ್ರಾಪ್ತ ಆರೋಪಿಗಳು (ಸೈಂಟ್ ಅಲೋಶಿಯಸ್ ಮತ್ತು ಮಾತಾ ಕಾಲೇಜು ವಿದ್ಯಾರ್ಥಿಗಳು) ಕಾರಿನಲ್ಲಿ ಅಪಹರಿಸಿದ್ದಾರೆ. ಕಾರಿನಲ್ಲೇ ಕೈ ಮತ್ತು ಕಾಲಿನಿಂದ ದೈಹಿಕವಾಗಿ ಹಲ್ಲೆ ನಡೆಸಿದ್ದಲ್ಲದೆ, ಮಹಾಕಾಳಿಪಡ್ಪು ಮತ್ತು ಜಪ್ಪು ಮಹಾಕಾಳಿ ಪಡ್ಪು ಮಸೀದಿ ಬಳಿ ಸೇರಿದಂತೆ ವಿವಿಧ ಸ್ಥಳಗಳಿಗೆ ಕರೆದೊಯ್ದು ವಿವಸ್ತ್ರಗೊಳಿಸಿ ಮತ್ತಷ್ಟು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
ಹಲ್ಲೆ ನಡೆಸುವಾಗ ಚಿತ್ರೀಕರಣ ಮಾಡಿ ಅದನ್ನು ವೈರಲ್ ಮಾಡಿ ಅಮಾನವೀಯತೆಯನ್ನೂ ಮೆರೆದಿದ್ದಾರೆ. ಬಹಳಷ್ಟು ಹಲ್ಲೆ ನಡೆಸಿದ ಮೇಲೆ ಮೂವರು ಸಂತ್ರಸ್ತರನ್ನು ಬಿಟ್ಟು ಆರೋಪಿಗಳು ಪರಾರಿಯಾಗಿದ್ದಾರೆ. ಸಂತ್ರಸ್ತ ವಿದ್ಯಾರ್ಥಿ ನೀಡಿದ ದೂರಿನ ಮೇರೆಗೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.