ಬೆಳಗಿನ ಉಪಾಹಾರದಲ್ಲಿ ಪ್ರೋಟೀನ್ ಕಡಿಮೆಯಾಗುತ್ತಿದೆಯೇ? ನಿಮ್ಮ ಫೇವರಿಟ್ ತಿಂಡಿಯಲ್ಲೇ ಇರಲಿ ಈ ಬದಲಾವಣೆ... Health tips

ಪರಿಚಿತ ಆಹಾರಗಳನ್ನು ಬದಲಾಯಿಸದೆ ಕೆಲವು ಸಣ್ಣ ಮಾರ್ಪಾಡುಗಳನ್ನು ಮಾಡುವ ಮೂಲಕ ಉಪಾಹಾರವನ್ನು ಹೆಚ್ಚು ಪೌಷ್ಟಿಕವಾಗಿಸಬಹುದು.
Health tips
ಸಾಂದರ್ಭಿಕ ಚಿತ್ರ
Published on: 

Health tips : ಸಾಮಾನ್ಯವಾಗಿ ಬೆಳಗ್ಗೆ ಇಡ್ಲಿ, ದೋಸೆ, ಉಪ್ಪಿಟ್ಟು, ಅವಲಕ್ಕಿ, ಆಲೂ ಪರೋಟಾ ಹೀಗೆ ಭಾರತೀಯ ಮನೆಗಳಲ್ಲಿ ಬೆಳಗಿನ ಉಪಾಹಾರಕ್ಕೆ ಹಲವು ಆಯ್ಕೆಗಳಿವೆ. ಕುಟುಂಬದವರು ಕೂಡಾ ಇದನ್ನೆ ಅಚ್ಚು ಮೆಚ್ಚಿನ ತಿಂಡಿ ಆಗಿಸಿಕೊಂಡಿರುತ್ತಾರೆ. ಆದರೆ, ಇವುಗಳಲ್ಲಿ ಕಾರ್ಬೋಹೈಡ್ರೇಟ್ ಪ್ರಮಾಣ ಹೆಚ್ಚಾಗಿ, ಪ್ರೋಟೀನ್ ಪ್ರಮಾಣ ಕಡಿಮೆಯಾಗಿರಬಹುದು. ಪರಿಚಿತ ಆಹಾರಗಳನ್ನು ಬದಲಾಯಿಸದೆ ಕೆಲವು ಸಣ್ಣ ಮಾರ್ಪಾಡುಗಳನ್ನು ಮಾಡುವ ಮೂಲಕ ಉಪಾಹಾರವನ್ನು ಹೆಚ್ಚು ಪೌಷ್ಟಿಕವಾಗಿಸಬಹುದು.

ಬೆಳಗಿನ ಉಪಾಹಾರವು ದಿನದ ಪ್ರಮುಖ ಆಹಾರಗಳಲ್ಲಿ ಒಂದು. ದಿನವಿಡೀ ಚಟುವಟಿಕೆಯಿಂದ ಇರಲು ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುವುದು ಮುಖ್ಯ. ಸಾಮಾನ್ಯವಾಗಿ ನಮ್ಮ ಮನೆಗಳಲ್ಲಿ ಅವಲಕ್ಕಿ, ಉಪ್ಪಿಟ್ಟು, ಇಡ್ಲಿ, ದೋಸೆ, ಸ್ಯಾಂಡ್‌ವಿಚ್‌ ಮತ್ತು ಆಲೂ ಪರೋಟಾಗಳನ್ನು ಉಪಾಹಾರವಾಗಿ ಸೇವಿಸುತ್ತೇವೆ. ಇವು ರುಚಿಕರವಾಗಿದ್ದರೂ, ತಯಾರಿಸುವ ವಿಧಾನ ಮತ್ತು ಬಳಸುವ ಪದಾರ್ಥಗಳನ್ನು ಅವಲಂಬಿಸಿ ಪ್ರೋಟೀನ್ ಪ್ರಮಾಣ ಕಡಿಮೆಯಾಗಿರಬಹುದು. ಹೀಗಾಗಿ ಪ್ರತಿದಿನದ ಉಪಾಹಾರದಲ್ಲಿ ಪ್ರೋಟೀನ್ ಅಂಶ ಹೆಚ್ಚಿಸುವುದು ಅಗತ್ಯ, ನಮ್ಮ ನೆಚ್ಚಿನ ಉಪಾಹಾರಗಳನ್ನು ಸಂಪೂರ್ಣವಾಗಿ ಬಿಡುವ ಬದಲು ಅವುಗಳ ಪ್ರಮಾಣ ಮತ್ತು ಪದಾರ್ಥಗಳಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳುವುದು ಸೂಕ್ತ.

Also Read
ಮೆದುಳಿನ ಯಾವ ಭಾಗ ನಿಜಕ್ಕೂ ಪ್ರಜ್ಞೆಯನ್ನು ನಿಯಂತ್ರಿಸುತ್ತದೆ? ಮಾನವನ ಅರಿವಿನ ಹಿಂದಿನ ರಹಸ್ಯ ಬಯಲು! Brain science
Health tips

ದೋಸೆಯ ಬದಲು ಹೆಸರುಬೇಳೆ ಚೀಲಾ ಪ್ರಯತ್ನಿಸಿ

ಸಾಮಾನ್ಯ ಅಕ್ಕಿ ದೋಸೆಯ ಬದಲಿಗೆ ಹೆಸರುಬೇಳೆಯಿಂದ ತಯಾರಿಸುವ ಚೀಲಾ ಅಥವಾ ಪೆಸರಟ್ಟು ಸೇವಿಸಬಹುದು. ಇದರೊಂದಿಗೆ ಒಂದು ಬಟ್ಟಲು ಮೊಸರು ಸೇರಿಸಿಕೊಂಡರೆ ಉಪಾಹಾರದಲ್ಲಿ ಪ್ರೋಟೀನ್ ಪ್ರಮಾಣ ಹೆಚ್ಚಿಸಲು ಸಹಾಯವಾಗುತ್ತದೆ. ಹೆಸರುಬೇಳೆಯಲ್ಲಿ ಸಸ್ಯಜನ್ಯ ಪ್ರೋಟೀನ್ ಇರುವುದರಿಂದ ಇದು ಉತ್ತಮ ಆಯ್ಕೆಯಾಗಬಹುದು.

ಅವಲಕ್ಕಿಗೆ ಪನೀರ್ ಮತ್ತು ಕಡಲೆಕಾಯಿ ಸೇರಿಸಿ

ಅವಲಕ್ಕಿಯನ್ನು ಇಷ್ಟಪಡುವವರು ಅದನ್ನು ಆಹಾರಪಟ್ಟಿಯಿಂದ ತೆಗೆದುಹಾಕುವ ಅಗತ್ಯವಿಲ್ಲ. ಸುಮಾರು 50 ಗ್ರಾಂ ಪುಡಿ ಮಾಡಿದ ಪನೀರ್ ಮತ್ತು ಎರಡು ಚಮಚ ಪುಡಿಮಾಡಿದ ಕಡಲೆಕಾಯಿಯನ್ನು ಅವಲಕ್ಕಿಗೆ ಸೇರಿಸಬಹುದು. ಜತೆಗೆ ಮೊಸರು ಸೇವಿಸುವುದರಿಂದಲೂ ಪ್ರೋಟೀನ್ ಅಂಶವನ್ನು ಹೆಚ್ಚಿಸಬಹುದು.

ಇಡ್ಲಿ ಮತ್ತು ಸಾಂಬಾರ್‌ನಲ್ಲಿ ಈ ಬದಲಾವಣೆ ಮಾಡಿ

ಬೆಳಗಿನ ಉಪಾಹಾರಕ್ಕೆ ನಾಲ್ಕು ಇಡ್ಲಿ ತಿನ್ನುವ ಬದಲು ಎರಡು ಇಡ್ಲಿಗಳನ್ನು ಸೇವಿಸಿ, ದಪ್ಪವಾದ ಸಾಂಬಾರ್ ಪ್ರಮಾಣವನ್ನು ಹೆಚ್ಚಿಸಿಕೊಳ್ಳಬಹುದು. ಇದರೊಂದಿಗೆ ಮೊಟ್ಟೆ ಬುರ್ಜಿ ಅಥವಾ ಪನೀರ್ ಬುರ್ಜಿ ಸೇರಿಸುವುದು ಮತ್ತೊಂದು ಉತ್ತಮ ಆಯ್ಕೆ. ಇದರಿಂದ ಊಟದಲ್ಲಿ ಪ್ರೋಟೀನ್ ಅಂಶ ಹೆಚ್ಚುತ್ತದೆ.

ಉಪ್ಪಿಟ್ಟಿಗೆ ಹಸಿರು ಬಟಾಣಿ ಸೇರಿಸಿ

ರವೆ ಉಪ್ಪಿಟ್ಟಿನಲ್ಲಿ ರವೆಯ ಪ್ರಮಾಣವನ್ನು ಸ್ವಲ್ಪ ಕಡಿಮೆ ಮಾಡಿ, ಅದರ ಬದಲಿಗೆ ಹಸಿರು ಬಟಾಣಿ ಸೇರಿಸಬಹುದು. ಇದರೊಂದಿಗೆ ಪನೀರ್ ಮತ್ತು ಎರಡು ಮೊಟ್ಟೆಗಳನ್ನು ಸೇವಿಸುವುದರಿಂದ ಉಪಾಹಾರ ಹೆಚ್ಚು ಸಮತೋಲಿತವಾಗುತ್ತದೆ. ಮೊಟ್ಟೆ ಸೇವಿಸದವರು ತಮ್ಮ ಆಹಾರ ಪದ್ಧತಿಗೆ ಅನುಗುಣವಾಗಿ ಇತರ ಪ್ರೋಟೀನ್‌ಯುಕ್ತ ಪದಾರ್ಥಗಳನ್ನು ಆಯ್ಕೆ ಮಾಡಬಹುದು.

ಸ್ಯಾಂಡ್‌ವಿಚ್‌ಗೆ ಮೊಟ್ಟೆ ಅಥವಾ ಕೋಳಿ ಮಾಂಸ ಸೇರಿಸಿ

ಸಾಮಾನ್ಯವಾಗಿ ಎರಡು ಬ್ರೆಡ್ ತುಂಡುಗಳ ನಡುವೆ ಚೀಸ್ ಇಟ್ಟು ತಯಾರಿಸುವ ಸ್ಯಾಂಡ್‌ವಿಚ್‌ಗೆ ಬದಲಾಗಿ, ಒಂದು ಬ್ರೆಡ್ ತುಂಡನ್ನು ಬಳಸಿ ಅದಕ್ಕೆ ಮೊಟ್ಟೆ ಬುರ್ಜಿ ಅಥವಾ ಬೇಯಿಸಿದ ಕೋಳಿ ಮಾಂಸ ಸೇರಿಸಬಹುದು. ಇದರಿಂದ ಪ್ರೋಟೀನ್ ಅಂಶ ಹೆಚ್ಚುವುದರ ಜೊತೆಗೆ ಹೊಟ್ಟೆ ತುಂಬಿದ ಅನುಭವವೂ ದೊರೆಯಬಹುದು.

Also Read
ನೀವು ಪ್ರತಿದಿನ ಬಿಸಿ ನೀರಲ್ಲೇ ಸ್ನಾನ ಮಾಡ್ತೀರಾ? ವಿಜ್ಞಾನಿಗಳು ಹೇಳೋದೇನು? ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ.....Cold Shower
Health tips

ಆಲೂ ಪರೋಟಾ ಬದಲು ಪನೀರ್ ಪರೋಟಾ

ಆಲೂ ಪರೋಟಾ ಇಷ್ಟಪಡುವವರು ಎರಡು ಆಲೂ ತುಂಬಿದ ಪರೋಟಾಗಳ ಬದಲಿಗೆ ಒಂದು ಪನೀರ್ ತುಂಬಿದ ಪರೋಟಾ ಸೇವಿಸಬಹುದು. ಇದರೊಂದಿಗೆ ಉಪ್ಪಿನಕಾಯಿಯ ಬದಲಿಗೆ ಮೊಸರು ಸೇರಿಸಿಕೊಳ್ಳುವಂತೆ ಪೌಷ್ಟಿಕತಜ್ಞೆ ಸಲಹೆ ನೀಡಿದ್ದಾರೆ. ಪನೀರ್ ಮತ್ತು ಮೊಸರು ಎರಡೂ ಪ್ರೋಟೀನ್ ಒದಗಿಸುವ ಆಹಾರಗಳಾಗಿವೆ.

ಪರಿಚಿತ ಆಹಾರದಲ್ಲೇ ಪೌಷ್ಟಿಕ ಬದಲಾವಣೆ ಇರಲಿ

ಪ್ರೋಟೀನ್ ಹೆಚ್ಚಿಸಿಕೊಳ್ಳಲು ದುಬಾರಿ ಆಹಾರಗಳನ್ನೇ ಪ್ರತಿದಿನ ಸೇವಿಸಬೇಕೆಂದಿಲ್ಲ. ಹೆಸರುಬೇಳೆ, ಕಡಲೆಕಾಯಿ, ಹಾಲಿನ ಉತ್ಪನ್ನಗಳು, ಮೊಟ್ಟೆ, ಬಟಾಣಿ ಮತ್ತು ಇತರ ಬೇಳೆಕಾಳುಗಳನ್ನು ಮನೆಯ ಸಾಮಾನ್ಯ ಉಪಾಹಾರದಲ್ಲೇ ಸೇರಿಸಿಕೊಳ್ಳಬಹುದು. ಆದರೆ ಪ್ರತಿಯೊಬ್ಬರ ವಯಸ್ಸು, ದೈಹಿಕ ಚಟುವಟಿಕೆ ಮತ್ತು ಆರೋಗ್ಯದ ಅಗತ್ಯಕ್ಕೆ ಅನುಗುಣವಾಗಿ ಆಹಾರದ ಪ್ರಮಾಣ ಬದಲಾಗಬೇಕು. ರುಚಿಯ ಜೊತೆಗೆ ಪೌಷ್ಟಿಕಾಂಶಕ್ಕೂ ಆದ್ಯತೆ ನೀಡಿದರೆ ಬೆಳಗಿನ ಉಪಾಹಾರವನ್ನು ಇನ್ನಷ್ಟು ಸಮತೋಲಿತವಾಗಿಸಬಹುದು.