ಹೊಟ್ಟೆ ಎಂದಿಗೂ ತುಂಬದಂತೆ ಆಹಾರ ಸಂಸ್ಕರಣೆ!

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಅಮೆರಿಕದ ಆಹಾರ ಸಂಸ್ಕೃತಿಯೇ ವಿಚಿತ್ರ ಮತ್ತು ಅನಾರೋಗ್ಯಕ್ಕೆ ಆಹ್ವಾನ ನೀಡುವಂಥದ್ದು. ಅಲ್ಲಿ ಸಿಗುವ ಬಹುತೇಕ ಪ್ಯಾಕೇಜ್ಡ್ ಆಹಾರಗಳು ತೀವ್ರವಾಗಿ ಸಂಸ್ಕರಿಸಲ್ಪಟ್ಟಿರುತ್ತವೆ. ಅವುಗಳಲ್ಲಿ ರಾಸಾಯನಿಕ ಬಣ್ಣಗಳು, ಕೃತಕ ಸಿಹಿಕಾರಕಗಳು, ಸಕ್ಕರೆ ಮತ್ತು ಉಪ್ಪಿನ ಪ್ರಮಾಣ ಕೂಡ ಹೆಚ್ಚು. ಇದರಿಂದಾಗಿ ಅಮೆರಿಕದಲ್ಲಿ ಬೊಜ್ಜು, ಮಧುಮೇಹ ಮತ್ತು ಹೃದಯಸಂಬಂಧಿ ಕಾಯಿಲೆಗಳು ಹೆಚ್ಚುತ್ತಲೇ ಇದ್ದು, ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದೆ. ಅಲ್ಲದೆ, ಇತ್ತೀಚಿನ ವರ್ಷಗಳಲ್ಲಿ ಪ್ರಮುಖ ಫಾಸ್ಟ್ಫುಡ್ ಚೈನ್ ಹಾಗೂ ಪ್ಯಾಕೇಜ್ಡ್ ಆಹಾರಗಳಲ್ಲಿ ಬ್ಯಾಕ್ಟೀರಿಯಾಗಳು ಪತ್ತೆಯಾಗಿ ಜನರು ಅನಾರೋಗ್ಯಕ್ಕೆ ಒಳಗಾದ ಘಟನೆಗಳು ಸುರಕ್ಷತಾ ನಿಯಮಗಳ ಬಗ್ಗೆ ಅಪನಂಬಿಕೆ ಹುಟ್ಟುಹಾಕಿವೆ. ಹೀಗಾಗಿ, ಅಲ್ಟ್ರಾ ಪೊ›ಸೆಸ್ಡ್ ಆಹಾರದ ವಿರುದ್ಧ ಅಮೆರಿಕದಲ್ಲಿ ಹೋರಾಟವೇ ನಡೆಯುತ್ತಿದ್ದು, ಈ ಕುರಿತಾದ ವಿವರ ಇಲ್ಲಿದೆ.
ಅಮೆರಿಕದಲ್ಲಿ ಅಲ್ಟ್ರಾ ಪೊ›ಸೆಸ್ಡ್ ಆಹಾರ ಸೇವನೆಯಿಂದ ಗಂಭೀರ ಆರೋಗ್ಯ ಬಿಕ್ಕಟ್ಟು ಎದುರಾಗಿದೆ. ಅಮೆರಿಕನ್ನರು ಸೇವಿಸುವ ದೈನಂದಿನ ಆಹಾರದಲ್ಲಿ ಶೇಕಡ 60ರಿಂದ 70ರಷ್ಟು ಭಾಗ ಇಂತಹ ಸಿದ್ಧ ಆಹಾರಗಳೇ ಇರುವುದರಿಂದ, ಅಲ್ಲಿನ ಸಾರ್ವಜನಿಕ ಆರೋಗ್ಯ ಕ್ಷೇತ್ರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಸಣ್ಣ ವಯಸ್ಸಿನ ಮಕ್ಕಳಲ್ಲೇ ಟೈಪ್ 2 ಮಧುಮೇಹ ಹಾಗೂ ನಾನ್-ಆಲ್ಕೋಹಾಲಿಕ್ ಫ್ಯಾಟಿ ಲಿವರ್ ಕಾಯಿಲೆಗಳು ಹೆಚ್ಚುತ್ತಿವೆ. 
ಧಾನ್ಯ, ಸೋಡಾ, ಚಿಪ್ಸ್ ಹಾಗೂ ಸಂಸ್ಕರಿಸಿದ ತಿಂಡಿಗಳಲ್ಲಿ ಸಕ್ಕರೆ, ಉಪ್ಪು ಮತ್ತು ಕೊಬ್ಬನ್ನು ಮಿದುಳಿನಲ್ಲಿ ಡೋಪಮೈನ್ ಹೆಚ್ಚಿಸುವಂತೆ ತಾಂತ್ರಿಕವಾಗಿ ಸಂಯೋಜಿಸಲಾಗಿರುತ್ತದೆ. ಇದು ಸಿಗರೇಟ್ ಅಥವಾ ಇತರ ವ್ಯಸನಕಾರಿ ವಸ್ತುಗಳಂತೆಯೇ ಕೆಲಸ ಮಾಡುತ್ತದೆ. ಸಿದ್ಧ ಆಹಾರ ಸೇವನೆಯಿಂದ ಬೊಜ್ಜು, ರಕ್ತದೊತ್ತಡ, ಪಾರ್ಶ್ವವಾಯು ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಶೇ.45ರಷ್ಟು ಹೆಚ್ಚುತ್ತದೆ. ಜೊತೆಗೆ ಮಕ್ಕಳಲ್ಲಿ ಏಕಾಗ್ರತೆಯ ಕೊರತೆ, ಖಿನ್ನತೆ ಮತ್ತು ಹಿರಿಯರಲ್ಲಿ ಡೆಮೆನ್ಷಿಯಾ (ಮರೆವು) ಮುಂತಾದ ನರಸಂಬಂಧಿ ಸಮಸ್ಯೆಗಳಿಗೆ ಇದು ಕಾರಣವಾಗುತ್ತಿದೆ ಎಂದು ಸಂಶೋಧನೆಗಳು ತಿಳಿಸಿವೆ.
ಕೊಕಾ-ಕೋಲಾ, ಪೆಪ್ಸಿಕೋ, ನೆಸ್ಲೆ, ಕ್ರಾಫ್ಟ್ ಹೈಂಜ್, ಜನರಲ್ ಮೀಲ್ಸ್ ಹಾಗೂ ಪೋಸ್ಟ್ ಹೋಲ್ಡಿಂಗ್ಸ್ನಂತಹ ಜಾಗತಿಕ ಆಹಾರ ಕಂಪನಿಗಳ ವಿರುದ್ಧ ನೂರಾರು ಪಾಲಕರು ಮತ್ತು ಸಂತ್ರಸ್ತರು ಅಮೆರಿಕದ ನ್ಯಾಯಾಲಯಗಳಲ್ಲಿ ದೂರು ದಾಖಲಿಸಿದ್ದಾರೆ. ತಂಬಾಕು (ಸಿಗರೇಟ್) ಉದ್ಯಮವು ಹಿಂದೆ ಅನುಸರಿಸಿದ್ದ ತಂತ್ರಗಳನ್ನೇ ಈ ಆಹಾರ ಕಂಪನಿಗಳೂ ಬಳಸಿವೆ ಎಂದು ಆರೋಪಿಸಲಾಗಿದೆ. ಈ ಆಹಾರಗಳು ಆರೋಗ್ಯಕ್ಕೆ ಹಾನಿಕಾರಕ ಮತ್ತು ವ್ಯಸನಕಾರಿ ಎಂದು ತಿಳಿದಿದ್ದರೂ, ಕಂಪನಿಗಳು ಮಕ್ಕಳನ್ನೇ ಗುರಿಯಾಗಿಸಿಕೊಂಡು ದಾರಿ ತಪ್ಪಿಸುವ ಜಾಹೀರಾತು ನೀಡಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಆಹಾರ ತಯಾರಿಕಾ ಸಂಸ್ಥೆಗಳು ಸರ್ಕಾರದ ನಿಯಂತ್ರಣಗಳನ್ನು ಎದುರಿಸಲು ಕಾನೂನು ಮಾರ್ಗ ಹಿಡಿದಿವೆ. ಪ್ಯಾಕೆಟ್ಗಳ ಮೇಲೆ ಆರೋಗ್ಯ ಎಚ್ಚರಿಕೆ ಲೇಬಲ್ ಹಾಕುವುದು, ಸಕ್ಕರೆ ತೆರಿಗೆ ವಿಧಿಸುವುದು ಮತ್ತು ಮಕ್ಕಳಿಗೆ ನೀಡುವ ಜಾಹೀರಾತುಗಳನ್ನು ನಿರ್ಬಂಧಿಸುವುದನ್ನು ತಡೆಯಲು ಆಹಾರ ಉದ್ಯಮಗಳು ವಿವಿಧ ನ್ಯಾಯಾಲಯಗಳಲ್ಲಿ ನೂರಾರು ಕಾನೂನು ಸವಾಲುಗಳನ್ನು ಹೂಡಿವೆ.

ಹೋರಾಟದ ದಿಟ್ಟ ಹಾದಿ

ಆತ ಹದಿನಾರು ವರ್ಷದ ಹುಡುಗ ಬ್ರೖೆಸ್ ಮಾರ್ಟಿನೆಜ್. ಇದ್ದಕ್ಕಿದ್ದ ಹಾಗೆ ಎದೆಯಲ್ಲಿ ತೀವ್ರ ನೋವು ಕಾಣಿಸಿಕೊಂಡಾಗ, ಅದು ಆಸಿಡಿಟಿ ಸಮಸ್ಯೆ ಇರಬಹುದು ಎಂದು ಭಾವಿಸಿದ್ದ. ಆದರೆ ಶಾಲೆಯಲ್ಲಿ ಆತನ ರಕ್ತದೊತ್ತಡವನ್ನು ಪರೀಕ್ಷಿಸಿದಾಗ ಬಂದ ವರದಿ ಕಂಡು ಎಲ್ಲರೂ ಬೆಚ್ಚಿಬಿದ್ದರು! ಬ್ರೖೆಸ್ನನ್ನು ತಕ್ಷಣವೇ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕಕ್ಕೆ ದಾಖಲಿಸಲಾಯಿತು. ವೈದ್ಯರು ವರದಿಗಳನ್ನು ಪರಿಶೀಲಿಸಿದಾಗ ಕಹಿಸತ್ಯವೊಂದು ಹೊರಬಿದ್ದಿತ್ತು. ಇಷ್ಟು ಚಿಕ್ಕ ವಯಸ್ಸಿನಲ್ಲೇ ಬ್ರೖೆಸ್ ಟೈಪ್-2 ಮಧುಮೇಹ ಮತ್ತು ಫ್ಯಾಟಿ ಲಿವರ್ನಂತಹ ಕಾಯಿಲೆಗಳಿಗೆ ತುತ್ತಾಗಿದ್ದ. ಈ ವರದಿ ಬ್ರೖೆಸ್ಗೆ ಆಘಾತ ತಂದಿತ್ತಾದರೂ, ಆತ ಸೋಲೊಪ್ಪಿಕೊಳ್ಳಲಿಲ್ಲ. ಅಮೆರಿಕದ 11 ಬೃಹತ್ ಅಲ್ಟ್ರಾ-ಪ್ರೋಸೆಸ್ಟ್​ ಆಹಾರ (ಸಿದ್ಧ ಆಹಾರ) ಅಂದರೆ ತೀವ್ರವಾಗಿ ಸಂಸ್ಕರಿಸಿದ, ರಾಸಾಯನಿಕ ಹಾಗೂ ಕೃತಕ ಬಣ್ಣ-ರುಚಿ ಬೆರೆಸಿದ ಆಹಾರ ತಯಾರಿಸುವ ಕಂಪನಿಗಳ ವಿರುದ್ಧ ಬೃಹತ್ ಅಭಿಯಾನವನ್ನೇ ಆರಂಭಿಸಿದ. ಸ್ವತಃ ಸಂಶೋಧನೆ ನಡೆಸಿದಾಗ, ಅಮೆರಿಕದ ಮಕ್ಕಳು ಎಷ್ಟು ಕಳಪೆ ಆಹಾರ ಸೇವನೆಯ ವಾತಾವರಣದಲ್ಲಿದ್ದಾರೆ ಎಂಬ ಅರಿವು ಆತನಿಗಾಯಿತು. ಅಲ್ಟ್ರಾ-ಪ್ರೊಸೆಸ್ಟ್​ ಆಹಾರಗಳಿಂದ ಆರೋಗ್ಯಕ್ಕಾದ ಹಾನಿಗಾಗಿ ವ್ಯಕ್ತಿಯೊಬ್ಬರು ಹೂಡಿದ ಇತಿಹಾಸದ ಮೊದಲ ಕಾನೂನು ಸಮರ ಇದಾಗಿತ್ತು. ಬ್ರೖೆಸ್ ಎದುರಿಸಬೇಕಾಗಿದ್ದುದು ಬರೋಬ್ಬರಿ 959 ಲಕ್ಷ ಕೋಟಿ ರೂ. ಮೌಲ್ಯದ ಬೃಹತ್ ಆಹಾರ ಮತ್ತು ಪಾನೀಯ ಉದ್ಯಮವನ್ನು! ಇದರ ಬೆನ್ನಲ್ಲೇ ಇಂತಹ ಇನ್ನೂ ಅರ್ಧ ಡಜನ್ಗೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.
ಸ್ವತಃ ಸಂಶೋಧನೆ ನಡೆಸಿದಾಗ, ಅಮೆರಿಕದ ಮಕ್ಕಳು ಎಷ್ಟು ಕಳಪೆ ಆಹಾರ ಸೇವನೆಯ ವಾತಾವರಣದಲ್ಲಿದ್ದಾರೆ ಎಂಬ ಅರಿವು ಆತನಿಗಾಯಿತು. ಅಲ್ಟ್ರಾ-ಪ್ರೋಸೆಸ್ಡ್ ಆಹಾರಗಳಿಂದ ಆರೋಗ್ಯಕ್ಕಾದ ಹಾನಿಗಾಗಿ ವ್ಯಕ್ತಿಯೊಬ್ಬರು ಹೂಡಿದ ಇತಿಹಾಸದ ಮೊದಲ ಕಾನೂನು ಸಮರ ಇದಾಗಿತ್ತು. ಬ್ರೖೆಸ್ ಎದುರಿಸಬೇಕಾಗಿದ್ದುದು ಬರೋಬ್ಬರಿ 959 ಲಕ್ಷ ಕೋಟಿ ರೂ. ಮೌಲ್ಯದ ಬೃಹತ್ ಆಹಾರ ಮತ್ತು ಪಾನೀಯ ಉದ್ಯಮವನ್ನು! ಇದರ ಬೆನ್ನಲ್ಲೇ ಇಂತಹ ಇನ್ನೂ ಅರ್ಧ ಡಜನ್ಗೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.
ಬ್ರೖೆಸ್​ಗೆ ಬಾಲ್ಯದಿಂದಲೂ ಬೊಜ್ಜಿನ ಸಮಸ್ಯೆ ಇತ್ತು, ಆದರೆ ಮಕ್ಕಳಿಗೂ ಹಿರಿಯರಂತೆ ಗಂಭೀರ ಕಾಯಿಲೆಗಳು ಬರಬಹುದು ಎಂದು ಆತ ಕನಸಿನಲ್ಲೂ ಯೋಚಿಸಿರಲಿಲ್ಲ. ಆತನಿಗೆ ಬಾಲ್ಯದ ದಿನಗಳು ನೆನಪಾದವು. ಬೆಳಗ್ಗೆ ಶಾಲೆಗೆ ಧಾವಿಸುವಾಗ ತಿನ್ನುತ್ತಿದ್ದ ಸಕ್ಕರೆಯಂಶ ತುಂಬಿದ ಧಾನ್ಯಗಳು, ಮಧ್ಯಾಹ್ನ ಶಾಲಾ ಕ್ಯಾಂಟೀನ್ನ ಪಿಜ್ಜಾ-ಬರ್ಗರ್ ಮತ್ತು ಸಂಜೆ ಹೆತ್ತವರು ಮನೆಗೆ ಬರುವ ಮುನ್ನ ಮೈಕ್ರೋವೇವ್ನಲ್ಲಿ ಕಾಯಿಸಿ ತಿನ್ನುತ್ತಿದ್ದ ಫೋ›ಜನ್ ಫುಡ್! ತಾನು ಸವಿಯುತ್ತಿದ್ದ ಪ್ಯಾಕ್ ಮಾಡಿದ ಜ್ಯೂಸ್, ಚಿಪ್ಸ್ ಹಾಗೂ ಇನ್ಸ್ಟೆಂಟ್ ಫುಡ್ಗಳು ಜನರಿಗೆ ಎಂದಿಗೂ ಹೊಟ್ಟೆ ತುಂಬದಂತೆ ವೈಜ್ಞಾನಿಕವಾಗಿ ರೂಪಿಸಲ್ಪಟ್ಟಿದ್ದವು ಎಂಬುದನ್ನು ಆತ ಕಂಡುಕೊಂಡ. ಮಕ್ಕಳಿಗೆ ಈ ಆಹಾರಗಳ ದಾಸರನ್ನಾಗಿ ಮಾಡಲು ಕಂಪನಿಗಳು ಇವುಗಳನ್ನು ಜಾಣತನದಿಂದ ‘ಡಿಸೈನ್’ ಮಾಡಿದ್ದವು.
18 ವರ್ಷ ತುಂಬುವಷ್ಟರಲ್ಲಿ ಬ್ರೖೆಸ್ನ ಕೋಪವು ದೃಢಸಂಕಲ್ಪವಾಗಿ ಬದಲಾಯಿತು. ತನ್ನ ಅನಾರೋಗ್ಯಕ್ಕೆ ತಾನೇ ಹೊಣೆ ಎಂದು ಭಾವಿಸುವುದನ್ನು ಆತ ನಿಲ್ಲಿಸಿದ. ಅಮೆರಿಕದ ಕೋಕಾ-ಕೋಲಾ, ಪೆಪ್ಸಿಕೋ, ಕ್ರಾಫ್ಟ್ ಹೈಂಜ್ ಮತ್ತು ನೆಸ್ಲೆ ಸೇರಿದಂತೆ 11 ಪ್ರಮುಖ ಆಹಾರ ತಯಾರಿಕಾ ಕಂಪನಿಗಳ ವಿರುದ್ಧ ಕೋರ್ಟ್​ನಲ್ಲಿ ಪ್ರಕರಣ ದಾಖಲಿಸಿದ. ಪ್ರಸಕ್ತ, 20 ವರ್ಷದ ಬ್ರೖೆಸ್ ಪ್ರತಿದಿನ ಇನ್ಸುಲಿನ್ ಮತ್ತು ಮಾತ್ರೆಗಳ ಆಸರೆಯಲ್ಲೇ ಬದುಕುತ್ತಿದ್ದಾನೆ. ಕೆಳ ನ್ಯಾಯಾಲಯವು ಆರಂಭಿಕ ಅರ್ಜಿಯನ್ನು ವಜಾಗೊಳಿಸಿದೆ ಯಾದರೂ, ಆತ ಮೇಲ್ಮನವಿ ಸಲ್ಲಿಸಿ ಹೋರಾಟ ಮುಂದುವರಿಸಿದ್ದಾನೆ. ಈ ಹೋರಾಟದಿಂದ ಪ್ರೇರಿತನಾಗಿ ಕ್ಯಾಲಿಫೋರ್ನಿಯಾ ರಾಜ್ಯ ಸರ್ಕಾರವೇ ಸಾರ್ವಜನಿಕರ ಪರವಾಗಿ ಇದೇ 11 ಕಂಪನಿಗಳ ವಿರುದ್ಧ ಪ್ರಕರಣ ದಾಖಲಿಸಿದೆ.

ಪರಿಣಾಮಗಳು

ಬ್ರೖೆಸ್​ನ ಈ ಕಾನೂನು ಸಮರ ಈಗ ರಾಷ್ಟ್ರೀಯ ಆಂದೋಲನವಾಗಿ ಮಾರ್ಪಟ್ಟಿದ್ದು, ‘ಈ ಕಾಯಿಲೆಗಳು ನಮ್ಮ ಇಷ್ಟದ ಆಯ್ಕೆಯಲ್ಲ, ಬದಲಿಗೆ ಬಹುರಾಷ್ಟ್ರೀಯ ಕಂಪನಿಗಳ ಲಾಭಕೋರತನದ ಪರಿಣಾಮ’ ಎಂಬ ವಾದಕ್ಕೆ ದೊಡ್ಡ ಮಟ್ಟದ ಬೆಂಬಲ ವ್ಯಕ್ತವಾಗುತ್ತಿದೆ. ಮಾತ್ರವಲ್ಲ, ಜನರು ರೆಸ್ಟೋರೆಂಟ್ಗಳಲ್ಲಿ ತಿನ್ನುವುದು ಮತ್ತು ಸಂಸ್ಕರಿಸಿದ ಆಹಾರಗಳನ್ನು ಕೊಳ್ಳುವುದನ್ನು ಕಡಿಮೆ ಮಾಡುತ್ತಿದ್ದಾರೆ. ಮನೆಯಲ್ಲೇ ಅಡುಗೆ ಮಾಡುವುದು ಹಾಗೂ ಸ್ಥಳೀಯ ರೈತರ ಮಾರುಕಟ್ಟೆಗಳಿಂದ ತಾಜಾ ಪದಾರ್ಥಗಳನ್ನು ಖರೀದಿಸುವ ಪ್ರವೃತ್ತಿ ಹೆಚ್ಚುತ್ತಿದೆ. ಆಹಾರದಲ್ಲಿ ಬಳಸುವ ಕೆಲವು ಅಪಾಯಕಾರಿ ರಾಸಾ ಯನಿಕಗಳನ್ನು ಮತ್ತು ಬಣ್ಣಗಳನ್ನು ಕ್ಯಾಲಿಫೋರ್ನಿಯಾ ಸೇರಿದಂತೆ ಹಲವು ಅಮೆರಿಕನ್ ರಾಜ್ಯಗಳು ಸಂಪೂರ್ಣವಾಗಿ ನಿಷೇಧಿಸಿವೆ. ‘ಆಹಾರವೇ ಔಷಧ’ ಎನ್ನುವ ಜಾಗೃತಿ ಹೆಚ್ಚುತ್ತಿದ್ದು, ಸಾರ್ವಜನಿಕರು ಮತ್ತು ಆರೋಗ್ಯ ರಕ್ಷಣಾ ಸಂಸ್ಥೆಗಳು ಸಾವಯವ ಮತ್ತು ಕನಿಷ್ಠ ಸಂಸ್ಕರಿಸಿದ ಆಹಾರ ಉತ್ಪನ್ನಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ.

ತಂಬಾಕು ವಿರೋಧಿ ಹೋರಾಟದ ಪುನರಾವರ್ತನೆ?

ತಜ್ಞರ ಪ್ರಕಾರ, ಬ್ರೖೆಸ್ನ ಈ ಹೆಜ್ಜೆ 1950ರ ದಶಕದಲ್ಲಿ ತಂಬಾಕು ಕಂಪನಿಗಳ ವಿರುದ್ಧ ನಡೆದ ಬೃಹತ್ ಚಳವಳಿಯನ್ನೇ ಹೋಲುತ್ತದೆ. ಆ ಕಾಲದಲ್ಲೂ ತಂಬಾಕು ಕಂಪನಿಗಳ ವಿರುದ್ಧದ ನೂರಾರು ಪ್ರಕರಣಗಳು ವಜಾಗೊಂಡಿದ್ದವು, ಆದರೆ ಆಂತರಿಕ ರಹಸ್ಯ ದಾಖಲೆಗಳು ಹೊರಬಿದ್ದಾಗ ಕಂಪನಿಗಳ ಸುಳ್ಳು ಬಯಲಾಗಿತ್ತು. ಅಂತಿಮವಾಗಿ ಸರ್ಕಾರಗಳು ಕಠಿಣ ನಿಯಮಗಳನ್ನು ಜಾರಿಗೆ ತರಬೇಕಾಯಿತು.

ಗಂಭೀರ ಸಂಕಟ

ಅನಾರೋಗ್ಯಕರ ಆಹಾರ ಸೇವನೆಯಿಂದ ಶಾರೀರಿಕ ಮತ್ತು ಮಾನಸಿಕ ಫಿಟ್ನೆಸ್ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಸರ್ಕಾರದ ‘ಮೇಕ್ ಅಮೆರಿಕ ಹೆಲ್ದಿ ಅಗೇನ್’ನ 2025ರ ವರದಿಯಲ್ಲಿ ಪ್ರಸ್ತುತ ಪೀಳಿಗೆಯನ್ನು ಈವರೆಗಿನ ಅತ್ಯಂತ ಅನಾರೋಗ್ಯಕರ ಪೀಳಿಗೆ ಎಂದು ನಮೂದಿಸಲಾಗಿದೆ. 7.3 ಕೋಟಿ ಮಕ್ಕಳ ಪೈಕಿ ಶೇಕಡ 40ರಷ್ಟು ಮಕ್ಕಳು ಒಂದಿಲ್ಲ ಒಂದು ಗಂಭೀರ ಕಾಯಿಲೆ ಅಥವಾ ಆರೋಗ್ಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. 
ದೈಹಿಕ, ಮಾನಸಿಕ ಫಿಟ್ನೆಸ್ ಇಲ್ಲದಿರುವುದು ಮತ್ತು ಅಧಿಕ ಬೊಜ್ಜಿನಿಂದ ಶೇ.75ರಷ್ಟು ತರುಣರು ಸೇನೆ ಸೇರಲು ಅರ್ಹತೆಯೇ ಹೊಂದಿಲ್ಲ. ಬೇರೆ ದೇಶಗಳಿಗೆ ಹೋಲಿಸಿದರೆ ಅಮೆರಿಕದಲ್ಲಿ ಮಕ್ಕಳ ಆರೋಗ್ಯದ ಮೇಲೆ ಹೆಚ್ಚು ವೆಚ್ಚ ಮಾಡಲಾಗುತ್ತಿದ್ದರೂ, ಪರಿಸ್ಥಿತಿಯಲ್ಲಿ ಯಾವುದೇ ಸುಧಾರಣೆಯಾಗಿಲ್ಲ. ಅಮೆರಿಕದಲ್ಲಿ 6 ವರ್ಷ ಮೇಲ್ಪಟ್ಟ ಪ್ರತಿ 5 ಮಕ್ಕಳಲ್ಲಿ ಒಬ್ಬ ಸ್ಥೂಲಕಾಯ ಹೊಂದಿದ್ದಾನೆ/ಳೆ. 70ರ ದಶಕದಲ್ಲಿ 20 ಮಕ್ಕಳ ಪೈಕಿ ಒಬ್ಬನಿಗೆ ಬೊಜ್ಜಿನ ಸಮಸ್ಯೆ ಇರುತ್ತಿತ್ತು. ಅಂದರೆ, ಬೊಜ್ಜು ಸಮಸ್ಯೆ 270%ಕ್ಕಿಂತ ಹೆಚ್ಚು ಏರಿಕೆ ಕಂಡಿದೆ. ಮಕ್ಕಳಲ್ಲಿ ಈ ಸ್ಥಿತಿಗೆ ಫಾಸ್ಟ್​ಫುಡ್​ ಸೇವನೆ, ಅತಿಯಾದ ಔಷಧ ಸೇವನೆ ಮುಖ್ಯ ಕಾರಣ ಎನ್ನಲಾಗಿದೆ.

ಬ್ರ್ಯಾಂಡ್​ಗಳಿಗೆ ಹೊಡೆತ

ಜನರ ಆಕ್ರೋಶದಿಂದಾಗಿ ಪ್ರಮುಖ ಫಾಸ್ಟ್ಫುಡ್ ನೆಟ್​ವರ್ಕ್​ಗಳು ಹಾಗೂ ಸಾಂಪ್ರದಾಯಿಕ ಆಹಾರ ಬ್ರ್ಯಾಂಡ್​ಗಳ ಮಾರಾಟದಲ್ಲಿ ಕುಸಿತ ಕಂಡುಬಂದಿದೆ. ಗ್ರಾಹಕರನ್ನು ಸೆಳೆಯಲು ಈಗ ಕೆಲವು ಕಂಪನಿಗಳು ಬೆಲೆಗಳನ್ನು ಇಳಿಸಲು ಮತ್ತು ‘ವ್ಯಾಲ್ಯೂ ಮೀಲ್ಸ್’ ನೀಡಲು ಮುಂದಾಗಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net