

ಬೆಂಗಳೂರು: ಚಳಿಗಾಲದಲ್ಲಿ ಬಹಳಷ್ಟು ಜನರಿಗೆ ಚರ್ಮ ಒಣಗುತ್ತದೆ. ಫ್ಲಾಕಿನೆಸ್, ಸುಕ್ಕುಗಟ್ಟುವುದು ಮತ್ತು ಅನೇಕ ರೀತಿಯ ಅನಾನುಕೂಲಗಳು ಆಗುತ್ತವೆ. ಸಾಕಷ್ಟು ನೀರು ಕುಡಿಯುವುದರಿಂದ ಚರ್ಮ ಒಣಗುವುದನ್ನು ತಪ್ಪಿಸಬಹುದು. ಸಾಧ್ಯವಾದಷ್ಟು ಮಾಯಿಶ್ಚರೈಸರ್ ಬಳಸುವುದರಿಂದ ಚರ್ಮವನ್ನು ಆರೋಗ್ಯವಾಗಿ ಇರಿಸಿಕೊಳ್ಳಬಹುದು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಬಾಹ್ಯವಾಗಿ ಮುಖಕ್ಕೆ, ತ್ವಚೆಗೆ ಹಚ್ಚುವ ಬಹಳಷ್ಟು ಉತ್ಪನ್ನಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ. ಆದರೆ ಚಳಿಗಾಲದಲ್ಲಿ ತ್ವಚೆ ಹೊಳೆಯುವಂತೆ, ಆರೋಗ್ಯಪೂರ್ಣವಾಗಿ ಇರುವಂತೆ ಮಾಡಲು ಕೆಲವು ಆಹಾರ ಪದಾರ್ಥಗಳು ಕೂಡ ಸಹಾಯ ಮಾಡುತ್ತವೆ ಎಂಬುದು ನಿಮಗೆ ಗೊತ್ತಿದೆಯೇ? ಅವುಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
1. ವಿಟಮಿನ್ ಎ ಗಾಗಿ ಗೆಣಸು
ವಿಟಮಿನ್ ಎ ನೈಸರ್ಗಿಕ ಮಾಯಿಶ್ಚರೈಸರ್ ಅನ್ನು ಉತ್ತೇಜಿಸುತ್ತದೆ. ಗೆಣಸಿನಲ್ಲಿರುವ ವಿಟಮಿನ್ ಎ ಮತ್ತು ಆಂಥೋಸಯಾನಿನ್ ಅಂಶವು ಎಲ್ಲಾ ರೀತಿಯ ಸೋಂಕುಗಳ ವಿರುದ್ಧ ಹೋರಾಡಿ ಚರ್ಮವನ್ನು ಮೃದುವಾಗಿಸುತ್ತದೆ. ಇದರೊಂದಿಗೆ ತ್ವಚೆಯ ಒಡೆಯುವಿಕೆಯನ್ನು ತಡೆಯುತ್ತದೆ. ಚರ್ಮದ ನೈಸರ್ಗಿಕ ಇಮ್ಯೂನ್ ಸಿಸ್ಟಮ್ ಇದಾಗಿದೆ.
2. ವಿಟಮಿನ್ ಸಿ ಗಾಗಿ ಕಿವಿ ಫ್ರೂಟ್
ಕೊಲಾಜೆನ್ ಉತ್ಪಾದನೆಯನ್ನು ವಿಟಮಿನ್ ಸಿ ಹೆಚ್ಚಿಸುತ್ತದೆ. ತ್ವಚೆ.ಮೂಳೆ, ನರ ಮತ್ತು ಅಂಗಾಂಶಗಳನ್ನ
ಕೊಲಾಜೆನ್ ಸುಸ್ಥಿತಿಯಲ್ಲಿಡುತ್ತದೆ. ಇದು ನೈಸರ್ಗಿಕ ಪ್ರೊಟೀನ್ ಆಗಿದೆ. ಕಡಿಮೆ ಮಟ್ಟದ ಕೊಲಾಜೆನ್ ಸೂಕ್ಷ್ಮ ರೇಖೆಗಳು ಮತ್ತು ಸುಕ್ಕುಗಳಿಗೆ ಕಾರಣವಾಗಬಹುದು. ಕಿವಿ ಹಣ್ಣು ತಿನ್ನುವುದರಿಂದ ವಿಟಮಿನ್ ಸಿ ವೃದ್ಧಿಯಾಗುತ್ತದೆ.
3. ರಕ್ತ ಶುದ್ಧಿಗಾಗಿ ಬೀಟ್ರೂಟ್
ಕಲೆಗಳಿಲ್ಲದ, ಮೃದುವಾದ ಮತ್ತು ಹೈಡ್ರೇಟೆಡ್ ಚರ್ಮ ನಿಮ್ಮದಾಗಬೇಕೆಂದರೆ ಬೀಟ್ರೂಟ್ ತಿನ್ನಬೇಕು ಅದು ರಕ್ತ ಶುದ್ಧಿಕಾರಕ. ಕೊತ್ತಂಬರಿ ಮತ್ತು ಆಮ್ಲಾ ಜ್ಯೂಸ್ ಕೂಡ ಈ ದಿಸೆಯಲ್ಲಿ ಸಹಕಾರಿ.
4. ಮೆಗ್ನೀಸಿಯಮ್ ಮತ್ತು ವಿಟಮಿನ್ ಇ ಗಾಗಿ ತುಳಸಿ ಮತ್ತು ಸಬ್ಜಾ ಬೀಜಗಳು
ಸಿಹಿ ತುಳಸಿ ಬೀಜಗಳು ಅಥವಾ ಸಬ್ಜಾ ಬೀಜಗಳನ್ನು ಒಂದು ಲೋಟ ನೀರಿನೊಂದಿಗೆ ಸೇವಿಸುವುದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ. ಉತ್ತಮ ಕೊಬ್ಬು ಮತ್ತು ಪ್ರೊಟೀನ್ ಅಂಶಕ್ಕಾಗಿ ನೆನೆಸಿದ ಮತ್ತು ಸಿಪ್ಪೆ ಸುಲಿದ ಬಾದಾಮಿಯನ್ನು ತಿನ್ನುವುದರಿಂದ ಚರ್ಮ ಹೊಳೆಯುವಂತೆ ಆಗುತ್ತದೆ.
5. ಉರಿಯೂತ ನಿಯಂತ್ರಿಸಲು ಅರಿಶಿನ
ಅರಿಶಿನದ ಫೇಸ್ ಮಾಸ್ಕ್ ಮಾಡಿಕೊಳ್ಳುವುದರಿಂದ ಮತ್ತು ಆಹಾರದಲ್ಲಿ ಅರಿಶಿನ ಪುಡಿ ಸೇರಿಸುವುದರಿಂದ ಚರ್ಮವು ಆರೋಗ್ಯಕರವಾಗಿರಲು ಸಹಾಯ ಮಾಡುತ್ತದೆ.
6. ಆರೋಗ್ಯಕರ ಕೊಬ್ಬಿಗಾಗಿ ತೆಂಗಿನಕಾಯಿ
ತೆಂಗಿನಕಾಯಿ ಚರ್ಮಕ್ಕೆ ಪ್ರಯೋಜನಕಾರಿ. ತೆಂಗಿನ ನೀರು ಪಿಗ್ಮೆಂಟೇಶನ್ ಕಡಿಮೆ ಮಾಡುತ್ತದೆ. ಮೊಡವೆ ಮತ್ತು ಶುಷ್ಕ ಚರ್ಮದ ಚಿಕಿತ್ಸೆಯಲ್ಲಿ ಕೂಡ ಇದು ಸಹಾಯಕ. ಏಜೆನ್ಸೀಸ್