

ಮೈಸೂರು: ಕರ್ಮ ಸಿದ್ಧಾಂತವನ್ನು ಪಾಲನೆ ಮಾಡುವವರು ನಿಜವಾದ ಬಸವಾದಿ ಶರಣರ ಅನುಯಾಯಿಗಳಾಗಲು ಸಾಧ್ಯ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಕಲಾಮಂದಿರದಲ್ಲಿ ಶುಕ್ರವಾರ ಸಂಜೆ ಆಯೋಜಿಸಿದ್ದ ‘ಪ.ಮಲ್ಲೇಶ್: 90 ಭಾರತ ಜನತಂತ್ರದ ಸಮಕಾಲೀನ ತಲ್ಲಣಗಳು’ ಕುರಿತು ರಾಷ್ಟ್ರೀಯ ವಿಚಾರಸಂಕಿರಣದಲ್ಲಿ ಆಶಯ ಭಾಷಣ ಮಾಡಿದರು.
ಹಣೆಬರಹ, ಮರುಜನ್ಮ, ಶಾಪದಂತಹ ವಿಷಯವನ್ನು ಪ್ರತಿಪಾದನೆ ಮಾಡುವ ಕರ್ಮ ಸಿದ್ಧಾಂತವನ್ನು 12ನೇ ಶತಮಾನದಲ್ಲೇ ಬಸವಾದಿ ಶರಣರು ತಿರಸ್ಕಾರ ಮಾಡಿದ್ದರು. ವಿದ್ಯಾವಂತರು, ವೈದ್ಯರು ಸೇರಿದಂತೆ ಬಹುತೇಕರು ಇದನ್ನೇ ಈಗಲೂ ನಂಬುತ್ತಾರೆ, ಪಾಲನೆಯನ್ನೂ ಮಾಡುತ್ತಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಕರ್ಮ ಸಿದ್ಧಾಂತವನ್ನು ಹುಟ್ಟು ಹಾಕಲಾಗಿದೆ. ಈ ಮೂಲಕ ಜನರನ್ನು ಇರುವಲ್ಲೇ ಇರಿಸಲಾಗಿದೆ. ಆದರೆ, ಹಿಂದಿನ ಜನ್ಮ, ಮರುಜನ್ಮ ಎಂಬುದೇ ಇಲ್ಲ. ಹೊಟ್ಟೆ ಹಸಿದುಕೊಂಡು ಇರುವಂತೆ ಯಾರನ್ನೂ ಬ್ರಹ್ಮ ಸೃಷ್ಟಿ ಮಾಡುತ್ತಿರಲಿಲ್ಲ. ಎಲ್ಲವನ್ನೂ ಸಿಎಂ ಮಾಡಿಯೇ ಬಿಡುತ್ತಿದ್ದ ಎಂದು ಹೇಳಿದಾಗ ಸಭಾಂಗಣದಲ್ಲಿ ನಗೆ ಉಕ್ಕಿತು.
ಗಟ್ಟಿ ಹಿಂದುತ್ವ, ಮೃದು ಹಿಂದುತ್ವ ಎಂಬುದಿರಲು ಸಾಧ್ಯವೇ? ಇಲ್ಲವೇ ಇಲ್ಲ. ಹಿಂದುತ್ವ ಎಂದರೆ ಹಿಂದುತ್ವವೇ. ಕೆಲವರು ಅಡ್ಡಗೋಡೆ ಮೇಲೆ ದೀಪ ಇಟ್ಟು ದಾರಿ ತಪ್ಪಿಸುವ ಕೆಲಸ ಮಾಡುತ್ತಾರೆ. ಸಂವಿಧಾನ, ಪ್ರಜಾಪ್ರಭುತ್ವಕ್ಕೆ ಬೆದರಿಕೆ ಎದುರಾಗಿದೆ. ಯಾರು ಈ ಬೆದರಿಕೆ ಹಾಕುತ್ತಿದ್ದಾರೆ ಎಂಬುದನ್ನು ಜನರು ತಿಳಿದುಕೊಳ್ಳಬೇಕು ಎಂದರು.
ಕೇಂದ್ರ ಸರ್ಕಾರದಿಂದ ತೆರಿಗೆ ಹಂಚಿಕೆಯಲ್ಲಿ ಅನ್ಯಾಯವಾಗುತ್ತಿದೆ. ರಾಜ್ಯದಿಂದ 100 ರೂ. ಅಷ್ಟು ತೆರಿಗೆ ಸಂಗ್ರಹಿಸಿ ರಾಜ್ಯಕ್ಕೆ ಕೇವಲ 12 ರೂ. ನೀಡುತ್ತಿದೆ. ಇದು ಅನ್ಯಾಯ ಅಲ್ವೇ? ಇದನ್ನು ಕೇಳುವುದು ತಪ್ಪೇ? ಎಂದು ಪ್ರಶ್ನಿಸಿದರು.
ಜಾತಿ ವ್ಯವಸ್ಥೆಯಿಂದ ಸಾಮಾಜಿಕ, ಆರ್ಥಿಕ ಅಸಮಾನತೆ ನಿರ್ಮಾಣವಾಗಿದೆ. ಮನು ಸ್ಮತಿವಾದಿಗಳು ಶೂದ್ರರು, ಮಹಿಳೆಯರಿಗೆ ಅಕ್ಷರ ಸಂಸ್ಕೃತಿಯನ್ನು ವಂಚಿಸಿದರು. ಬ್ರಾಹ್ಮಣ್ಯ, ವೈಶ್ಯ, ಕ್ಷತ್ರೀಯ ಮಾತ್ರ ಶಿಕ್ಷಣ, ಆಸ್ತಿ ಹಕ್ಕು ಪಡೆದುಕೊಂಡರು. ಕಾಯಕ ಜೀವಿಗಳಾದ ಶೂದ್ರರು ಸಂಪತ್ತು ಉತ್ಪಾದನೆ ಮಾಡುವವರಾದರೂ ಅದನ್ನು ಅನುಭವಿಸಲಿಲ್ಲ. ಯಾರು ಸಂಪತ್ತು ಉತ್ಪಾದನೆ ಮಾಡಲಿಲ್ಲವೋ ಅವರು ಅದನ್ನು ಅನುಭವಿಸಿದರು. ಅಸಮಾನತೆಯಿಂದ ಪ್ರಜಾಪ್ರಭುತ್ವ, ಸಂವಿಧಾನ ಯಶಸ್ಸಿಯಾಗಲ್ಲ. ಸಾರ್ಥಕವೂ ಆಗಲ್ಲ ಎಂದರು.
ಕೈಗಾರಿಕೆಗಳಿಂದ ಕಾರ್ಮಿಕರು, ರೈತರಿಗೆ ಅನ್ಯಾಯವಾಗಿದ್ದರೆ ಅದನ್ನು ಸರಿಪಡಿಸುವ ಕೆಲಸ ಮಾಡಲಾಗುವುದು. ಅದಕ್ಕಾಗಿ ಕೈಗಾರಿಕಾ ಮಾಲೀಕರ ಸಭೆಯನ್ನು ಕರೆಯಲಾಗುವುದು ಎಂದು ಸಿಎಂ ಹೇಳುವ ಮೂಲಕ ರೈತರಿಗೆ ಭರವಸೆ ನೀಡಿದರು.
ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್‌ವಾಡ್, ಸವಿತಾ ಪ.ಮಲ್ಲೇಶ್ ಸೇರಿದಂತೆ ಇನ್ನಿತರರಿದ್ದರು.