ಸಿನಿಮಾ ಗೀತೆಗಳಿಂದ ಜನಪದಕ್ಕೆ ಧಕ್ಕೆ: ಜಾನಪದ ಗಾಯಕ ಮಳವಳ್ಳಿ ಮಹದೇವಸ್ವಾಮಿ ಕಳವಳ

8
Published on

ಮೈಸೂರು: ಸಿನಿಮಾ ಗೀತೆಗಳಲ್ಲಿ ಈಗ ಜಾನಪದ ಗೀತೆಯ ಸಾಲುಗಳು ಸೇರಿಕೊಂಡು ಮೂಲ ಜನಪದಕ್ಕೆ ಧಕ್ಕೆ ಅಗುತ್ತಿದೆ. ಮೂಲವನ್ನು ಉಳಿಸಬೇಕಾದ ಕರ್ತವ್ಯ ಜಾನಪದ ಕಲಾವಿದರ ಮೇಲಿದೆ ಎಂದು ಜಾನಪದ ಗಾಯಕ ಮಳವಳ್ಳಿ ಮಹದೇವಸ್ವಾಮಿ ಹೇಳಿದರು.

ಮೈಸೂರು ವಿಶ್ವವಿದ್ಯಾಲಯದ ಮಾಳವಿಯ ಮಿಷನ್ ಶಿಕ್ಷಕರ ತರಬೇತಿ ಕೇಂದ್ರದಿಂದ ಆಯೋಜಿಸಿರುವ 52ನೇ ಪುನಶ್ಚೇತನ ಶಿಬಿರದಲ್ಲಿ ಬುಧವಾರ ಶಿಬಿರಾರ್ಥಿಗಳೊಂದಿಗೆ ಸಂವಾದ ನಡೆಸಿ ಅವರು ಮಾತನಾಡಿದರು.

ಜಾನಪದ ಗೀತೆಯ ಸಾಲುಗಳು ಸಿನಿಮಾ ಗೀತೆಗಳಾಗಿ ಬಹಳಷ್ಟು ಸೇರಿಕೊಂಡು ಬದಲಾಗಿವೆ. ಇದರಿಂದ ಮೂಲ ಜನಪದ ಗೀತೆಗಳು ಯಾವುವು ಎನ್ನುವುದೇ ಯುವ ಜನಾಂಗಕ್ಕೆ ತಿಳಿಯದಂತಾಗಿದೆ. ಹಾಗಾಗಿ ಜನಪದ ಗಾಯಕರು ಮೂಲ ಜಾನದಪ ಗೀತೆಗಳನ್ನು ಉಳಿಸಬೇಕಾದ ಕರ್ತವ್ಯವಿದೆ ಎಂದು ಹೇಳಿದರು.

ಪ್ರಾರಂಭದ ದಿನಗಳಲ್ಲಿ ಜನಪದ ಗೀತೆ ಹಾಡಲು ಸ್ವರವಿತ್ತು ವರಮಾನ ಇರಲಿಲ್ಲ. ಆದರೆ ಇಂದು ವರಮಾನವಿದೆ ಸ್ವರವಿಲ್ಲ. ಬದುಕು ಬದಲಾದಂತೆ ಎಲ್ಲವೂ ಬದಲಾಗಿದೆ. ಅಂದು ಮಂಟೇಸ್ವಾಮಿ ಹೇಳಿದಂತೆ ಕಲಿಯುಗ ಬದಲಾಗಿದೆ ಎಂದರು.

ನಮ್ಮ ಹಸಿವನ್ನು ನೀಗಿಸಿಕೊಳ್ಳಲು ಜನಪದ ಗೀತೆಗಳನ್ನು ಹಾಡುತ್ತಿದ್ದೆವು. ಅದರೆ ಇಂದು ಆ ಪದವೇ ನಮಗೆ ಬದುಕು ಕಟ್ಟಿಕೊಟ್ಟಿದೆ. ಜಾನಪದದಿಂದ ಸಿನಿಮಾವರೆಗೂ ಹಾಡುಗಳನ್ನು ಹಾಡಿದ್ದೇನೆ. ಜನ, ಸರ್ಕಾರ ಪ್ರಶಸ್ತಿ, ಬಹುಮಾನ ನೀಡಿ ಗೌರವಿಸಿವೆ ಎಂದರು.

ನಾನು ಹಾಡಿದ ಅರ್ಜುನ್ ಜೋಗಿಯ ಅನ್ಯಾಯಕಾರಿ ಬ್ರಹ್ಮ ಈ ಸುಂದರನ ನೋಡಬಹುದೇ ಹಾಡಿಗೆ ನೃತ್ಯ ಮಾಡಿ ಹೆಣ್ಣು ಮಕ್ಕಳು ಫೇಸ್‌ಬುಕ್ ಮತ್ತು ಯೂಟ್ಯೂಬ್ಗಳಲ್ಲಿ ಸಾಕಷ್ಟು ಟ್ರೆಂಡ್ ಮಾಡಿದರು. ಅದರಿಂದ ನನಗೆ ಹಣ ಬಾರಾದಿದ್ದರೂ ನನ್ನನ್ನು ಇಷ್ಟು ಹೆಸರಾಗುವಂತೆ ಮಾಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ತಲೆ ತಗ್ಗಿಸಿ ಮೊಬೈಲ್ ನೋಡಿದರೆ ಜೀವನ ಪೂರ್ತಿ ತಲೆ ತಗ್ಗಿಸಿಯೇ ಇರಬೇಕಾಗುತ್ತದೆ. ತಲೆ ಎತ್ತಿ ನಿಲ್ಲಲು ಪುಸ್ತಕಗಳು ಹಾಗೂ ಶಿಕ್ಷಕರು ಹೇಳಿಕೊಟ್ಟ ಪಾಠ ಮುಖ್ಯವಾಗುತ್ತದೆ. ನಾವು ಮಾಡಿದ ದಾನ-ಧರ್ಮ ನಮ್ಮನ್ನು ಕಾಪಾಡುತ್ತದೆ. ಯಾರು ಏನನ್ನು ತೆಗೆದುಕೊಂಡು ಹೋಗುವುದಿಲ್ಲ, ಸೂರ್ಯ, ಚಂದ್ರ, ಭೂಮಿ ಬದಲಾಗುವುದಿಲ್ಲ, ನಾವು ಮಾತ್ರ ಬದಲಾಗುತ್ತಿದ್ದೇವೆ ಎಂದರು.

ಇದೇ ವೇಳೆ ಮಂಟೇಸ್ವಾಮಿ ಕಾವ್ಯ, ಮಹದೇಶ್ವರ ಕಾವ್ಯ ಹಾಗೂ ಬಿಳಿಗಿರಿ ರಂಗನ ಕಾವ್ಯಗಳ ಆಯ್ದ ಭಾಗಗಳನ್ನು ಹಾಡಿ, ಕನ್ನಡದ ಜನಪದ ಮಹಾಕಾವ್ಯಗಳ ಪರಂಪರೆಯನ್ನು ಕಟ್ಟಿಕೊಟ್ಟರು.

ಅಲ್ಲದೇ ಶಿಬಿರಾರ್ಥಿ ಅಧ್ಯಾಪಕರು ಕೇಳಿದ ಪ್ರಶ್ನೆಗಳಿಗೆ ಕಾವ್ಯಾತ್ಮಕವಾಗಿ ಉತ್ತರಿಸಿದರು. ಗಾದೆ ಮಾತುಗಳು, ನುಡಿಗಟ್ಟುಗಳು ಸಣ್ಣ, ಸಣ್ಣ ಕತೆಗಳನ್ನು ಹೇಳುವ ಮೂಲಕ ಎಲ್ಲರ ಗಮನ ಸೆಳೆದರು.

ಶಿಬಿರದ ಸಂಯೋಜಕರಾದ ಪ್ರಸಾರಾಂಗದ ನಿರ್ದೇಶಕ ಪ್ರೊ.ಎಂ. ನಂಜಯ್ಯ ಹೊಂಗನೂರು, ಮಾಳವಿಯ ಮಿಷನ್ ಶಿಕ್ಷಕರ ತರಬೇತಿ ಕೇಂದ್ರದ ನಿರ್ದೇಶಕಿ ಪ್ರೊ. ಎಚ್.ಪಿ. ಜ್ಯೋತಿ, ಸಹಾಯಕ ಪ್ರಾಧ್ಯಾಪಕರಾದ ಎಲ್. ನಂಜುಂಡಸ್ವಾಮಿ, ಪ್ರೊ.ಆರ್. ರಾಮಕೃಷ್ಣ, ದೇವನೂರು ಶಂಕರ್ ದಂಪತಿ, ಸಂಶೋಧಕ ಎಚ್.ಎಸ್. ಶಂಕರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net