

ಬೆಂಗಳೂರು: 24ರ ಜೂ.06 ರಂದು ಬೆಂಗಳೂರಿನಲ್ಲಿ ನಡೆದ ಸರ್ವ ಸದಸ್ಯರ ಸಭೆಯ ತೀರ್ಮಾನದಂತೆ, 2023 ನೇ ಸಾಲಿನಲ್ಲಿ ರಾಜ್ಯದ 30 ಹಿರಿಯ ಜಾನಪದ ಕಲಾವಿದರಿಗೆ ವಾರ್ಷಿಕ ಗೌರವ ಪ್ರಶಸ್ತಿಯನ್ನು ಕರ್ನಾಟಕ ಜಾನಪದ ಅಕಾಡೆಮಿ(folk Academy) ಘೋಷಿಸಿದೆ.
ಇದರ ಜತೆಗೆ ಇಬ್ಬರು ಜಾನಪದ ತಜ್ಞರಿಗೆ ತಜ್ಞ ಪ್ರಶಸ್ತಿ, 22ನೇ ಸಾಲಿನ 03 ಮಂದಿಗೆ ಹಾಗೂ 23ನೇ ಸಾಲಿನ 02 ಮಂದಿಗೆ ಪುಸ್ತಕ ಬಹುಮಾನವನ್ನು ನೀಡಲಾಗುವುದು ಎಂದು ಕರ್ನಾಟಕ ಜಾನಪದ ಅಕಾಡೆಮಿ ಪ್ರಕಟಣೆ ತಿಳಿಸಿದೆ.
ಪ್ರಶಸ್ತಿ ಮೊತ್ತ
ಕಲಾವಿದರಿಗೆ ನೀಡುವ ಗೌರವ ಪ್ರಶಸ್ತಿಯ ಮೊತ್ತ 25 ಸಾವಿರ ರೂ. ಆಗಿದ್ದು, ಇಬ್ಬರು ಕ್ಷೇತ್ರ ತಜ್ಞರಿಗೆ ತಲಾ 50 ಸಾವಿರ ರೂ.ಗಳು ಹಾಗೂ ಪುಸ್ತಕ ಬಹುಮಾನಿತರಿಗೆ ತಲಾ 25 ಸಾವಿರ ರೂ. ಮತ್ತು ಪ್ರಶಸ್ತಿ ಮೊತ್ತದ ಜತೆಗೆ ಸ್ಮರಣಿಕೆ, ಶಾಲು, ಹಾರ, ಫಲತಾಂಬೂಲ ನೀಡಿ ಗೌರವಿಸಲಾಗುವುದು.
ಇನ್ನೂ 1980ರಿಂದ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಜಾನಪದ ಅಕಾಡೆಮಿಯ ಯೋಜನೆಗಳಲ್ಲಿ, ಜಾನಪದ ಕಲೆಗಳಿಗೆ ತಮ್ಮನ್ನು ತಾವು ಅರ್ಪಿಸಿಕೊಂಡಿರುವ ಜಾನಪದ ಕಲಾವಿದರಿಗೆ, ಜಾನಪದ ಕ್ಷೇತ್ರ ತಜ್ಞರಿಗೆ ವಾರ್ಷಿಕ ಪ್ರಶಸ್ತಿಗಳನ್ನು ನೀಡಿ ಗೌರವಿಸುವುದು ಬಹು ಮುಖ್ಯ ಭಾಗವಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಜಾನಪದ ಅಕಾಡೆಮಿಯು 1980ರಿಂದ 2022ರ ಸಾಲಿನ ವರೆಗೆ 1044 ಜಾನಪದ ಕಲಾವಿದರು, 111 ವಿದ್ವಾಂಸರು ಸೇರಿದಂತೆ ಅಕಾಡೆಮಿಯು ಒಟ್ಟಾರೆ 1155 ಗೌರವ ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸಿದೆ ಎಂದು ತಿಳಿಸಿದೆ.