ಫಲಿತಾಂಶ ಸುಧಾರಣೆಗೆ ಒತ್ತು ಕೊಡಿ

h21-gurudev college
Published on

ಹುಬ್ಬಳ್ಳಿ: ಶಾಲಾ ಶಿಕ್ಷಣ ಇಲಾಖೆಯಡಿ (ಪದವಿಪೂರ್ವ) 2024-25ನೇ ಸಾಲಿನ ಪದವಿಪೂರ್ವ ಉಪನ್ಯಾಸಕರ ಜೀವಶಾಸ್ತ್ರ ವಿಷಯ ಕುರಿತು ಒಂದು ದಿನದ ಕಾರ್ಯಾಗಾರವು ಧಾರವಾಡ ಭಾರತಿನಗರದ ಗುರುದೇವ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ಮಂಗಳವಾರ ಏರ್ಪಾಟಾಗಿತ್ತು.

ಎಂಎಲ್‌ಸಿ ಪ್ರೊ.ಎಸ್.ವಿ. ಸಂಕನೂರ ಉದ್ಘಾಟಿಸಿ ಮಾತನಾಡಿ, ಪ್ರತಿಭೆ, ಜ್ಞಾನವುಳ್ಳ ಉಪನ್ಯಾಸಕರು ಇದ್ದಾರೆ. ಇವರೆಲ್ಲರೂ ಈ ಭಾಗದ ವಿದ್ಯಾರ್ಥಿಗಳಿಗೆ ನೀಟ್ ಪರೀಕ್ಷೆ ಪಾಸ್ ಆಗಲು ತರಬೇತಿ ಕೊಡಬೇಕು. ಫಲಿತಾಂಶ ಸುಧಾರಣೆಗೆ ಒತ್ತು ಕೊಡಬೇಕು ಎಂದು ಸಲಹೆ ನೀಡಿದರು.

ಧಾರವಾಡ ಜಿಲ್ಲೆಯ ಉಪನಿರ್ದೇಶಕ ಕೆ.ಪಿ. ಸುರೇಶ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ, ಶಿಕ್ಷಕರು ಕಲಿಸಿದ ಅಕ್ಷರ ವಿದ್ಯಾರ್ಥಿಗಳ ಬದುಕಿನುದ್ದಕ್ಕೂ ಅಚ್ಚಳಿಯದಂತೆ ಉಳಿಯುತ್ತದೆ. ನಾವು ಕಲಿತಿರುವುದನ್ನು ಸಮಾಜದ ಒಳಿತಿಗೆ ವಿನಿಯೋಗಿಸಬೇಕು. ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಯಲ್ಲಿ ಉಪನ್ಯಾಸಕರ ಶ್ರಮ ಬಹಳ ಮುಖ್ಯ. ಮಕ್ಕಳಿಗೆ ಹತ್ತಿರವಾಗಿ ಕರ್ತವ್ಯ ನಿರ್ವಹಿಸಬೇಕು. ಧಾರವಾಡದಲ್ಲಿ ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಮುಂದಾಗಬೇಕು ಎಂದರು.

ಗುರುದೇವ ಮಹಾವಿದ್ಯಾಲಯದ ಪ್ರಾಚಾರ್ಯ ಮದನ ಇ.ಜಿ. ಅಧ್ಯಕ್ಷತೆ ವಹಿಸಿ ಉಪನ್ಯಾಸಕರ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದರು.

ಸಂಪನ್ಮೂಲ ವ್ಯಕ್ತಿಗಳಾದ ಶೀತಲ ಎಸ್. ನಾರ್ವೆಕರ ಮತ್ತು ಶ್ಯಾಮ ಡಿ. ಶ್ಯಾವಿ ಮಾತನಾಡಿ, ಪ್ರಶ್ನೆ ಪತ್ರಿಕೆಯಲ್ಲಿ ಪ್ರಶ್ನೆಗಳನ್ನು ಯಾವ ರೀತಿ ಕೇಳುತ್ತಾರೆ? ಮಾದರಿ ಪ್ರಶ್ನೆಪತ್ರಿಕೆಯ ರೂಪುರೇಷೆ, ಪ್ರಯೋಗಾಲಯ ಪರೀಕ್ಷೆ, ನೀಲಿ ನಕ್ಷೆ, ಉಪನ್ಯಾಸಕರ ಸಂದೇಹಗಳನ್ನು ಪರಿಹರಿಸಿದರು.

ಪದಾಧಿಕಾರಿಗಳಾದ ಸೈಯದ್ ಫಯಾಜ್ ಅಹ್ಮದ್, ನಿರ್ಮಲಾ ಅಣ್ಣಿಗೇರಿ, ಡಾ. ಶಶಿಕಲಾ ಲಿಗಾಡೆ, ಸತ್ಯನಾರಾಯಣ ಹೆಬ್ಬಾರ, ಮೋನಿಕಾ ಸ್ಟೀವನ ಹಾಗೂ ಉಪನ್ಯಾಸಕರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net