

ಸಂದೀಪ್ ಸಾಲ್ಯಾನ್ ಬಂಟ್ವಾಳ
ಮಳೆಗಾಲ ಆರಂಭವಾದ ಬಳಿಕ ಮಳೆಯಿರಲಿ, ಇಲ್ಲದಿರಲಿ ಬಿ.ಸಿ.ರೋಡಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದುಕೊಂಡು ಹೋಗುವ ಪಾದಚಾರಿಗಳ ಮೇಲೆ, ದ್ವಿಚಕ್ರ ವಾಹನದಲ್ಲಿ ಹೋಗುವ ಸವಾರರ ಮೇಲೆ ಮೇಘಸ್ಫೋಟವಾದಂತೆ ಆಗಾಗ್ಗೆ ಮೇಲಿನಿಂದ ನೀರು ಚಿಮ್ಮುತ್ತಿರುತ್ತದೆ..!
ಬೇರೆ ಬೇರೆ ಕಾರ್ಯಕ್ರಮಗಳಿಗೆ ಬಿ.ಸಿ.ರೋಡಿಗೆ ಬಂದ ಅದೆಷ್ಟೋ ಮಂದಿ ಮೇಲಿಂದ ಚಿಮ್ಮಿದ ಈ ನೀರಿನಿಂದ ಒದ್ದೆಯಾಗಿ ತಾವು ಹೋಗಬೇಕಾದ ಕಾರ್ಯಕ್ಕೆ ಹೋಗಲಾಗದೆ ವಾಪಸ್ ಮನೆಗೆ ತೆರಳಿದ ಟನೆಗಳೂ ನಡೆದಿದೆ. ಕಳೆದ ಹಲವು ವರ್ಷಗಳಿಂದ ಈ ಸಮಸ್ಯೆ ಬಿ.ಸಿ.ರೋಡಿನಲ್ಲಿ ಸಾರ್ವಜನಿಕರನ್ನು ಕಾಡುತ್ತಿದ್ದು, ಈ ಬಾರಿಯೂ ಅನೇಕರನ್ನು ಒದ್ದೆಯಾಗಿಸಿದೆ.
ಬಿ.ಸಿ.ರೋಡಿನಲ್ಲಿರುವ ಫ್ಲೈಓವರ್ನ ಅವ್ಯವಸ್ಥೆಯಿಂದ ಈ ಸಮಸ್ಯೆ ಸೃಷ್ಟಿಯಾಗಿದೆ. ಮಳೆ ಬಂದ ಬಳಿಕ ಮೇಲ್ಸೆತುವೆಯ ಮಳೆನೀರು ಸರಾಗವಾಗಿ ಹರಿದು ಹೋಗದೆ ಒಂದೇ ಭಾಗದಲ್ಲಿ ಕೆರೆಯಂತೆ ನಿಲ್ಲುವುದರಿಂದ ಲಾರಿ, ಕಾರು ಮೊದಲಾದ ವಾಹನಗಳು ವೇಗವಾಗಿ ಸಂಚರಿಸಿದಾಗ ನೀರು ಕೆಳಭಾಗಕ್ಕೆ ರಭಸದಲ್ಲಿ ಚಿಮ್ಮಿ ಕೆಳಗೆ ರಸ್ತೆ ದಾಟುವವರು, ರಸ್ತೆ ಬದಿ ನಡೆದುಕೊಂಡು ಹೋಗುವವವರು, ದ್ವಿಚಕ್ರ ವಾಹನದಲ್ಲಿ ಸಂಚರಿಸುವವರು ಸಂಪೂರ್ಣ ಒದ್ದೆಯಾಗಿ ತೊಂದರೆ ಅನುಭವಿಸುತ್ತಾರೆ. ಹೊಸ ಬಟ್ಟೆ ಧರಿಸಿ ಶುಭಕಾರ್ಯಗಳಿಗೆ ಹೋಗುವವರು ಈ ಅವಾಂತರದಿಂದ ಒದ್ದೆಯಾಗಿ ಮತ್ತೆ ಮನೆಗೆ ವಾಪಸಾದ ಅನೇಕ ಉದಾಹರಣೆಗಳು ಇಲ್ಲಿವೆ.
ಇತ್ತ ಗಮನ ಹರಿಸುತ್ತಿಲ್ಲ
ಮಳೆಗೆ ಕೊಡೆ ಹಿಡಿದುಕೊಂಡು ಹೋಗುವವರೂ ಮೇಲಿಂದ ಏಕಾಏಕಿ ನೀರು ಬಿದ್ದಾಗ ತಬ್ಬಿಬ್ಬಾಗಿ ಒದ್ದೆಯಾಗುತ್ತಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಮಳೆಗಾಲದಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವಾಗಲಿ, ಸ್ಥಳೀಯಾಡಳಿತವಾಗಲಿ ಇದೊಂದು ಸಮಸ್ಯೆ ಎಂದು ಪರಿಗಣಿಸಿದಂತಿಲ್ಲ. ಮಳೆಗಾಲ ಬಂದಾಗ ಈ ಸಮಸ್ಯೆ ಜನರಿಗೆ ತೊಂದರೆ ಕೊಡುತ್ತದೆ ಎಂದು ಗೊತ್ತಿದ್ದರೂ ಸಂಬಂಧಪಟ್ಟವರು ಇತ್ತ ಗಮನ ಹರಿಸುತ್ತಿಲ್ಲ.
ಏನು ಸಮಸ್ಯೆ?
ಫ್ಲೈಓವರ್ ಮೇಲೆ ಸಂಗ್ರಹಗೊಳ್ಳುವ ನೀರು ಹರಿದು ಹೋಗಲು ರಂಧ್ರಗಳನ್ನು ಕೊರೆದಿದ್ದು, ಅದು ಪಿವಿಸಿ ಪೈಪ್ ಮೂಲಕ ಕೆಳಕ್ಕೆ ಹರಿಯುತ್ತದೆ. ಈ ಪೈಪ್ಗಳಲ್ಲಿ ಪ್ರಯಾಣಿಕರು ವಾಹನಗಳಲ್ಲಿ ಹೋಗುವಾಗ ಕುಡಿದು ಎಸೆದ ನೀರು, ಜ್ಯೂಸ್ ಬಾಟಲ್ಗಳು, ಪ್ಲಾಸ್ಟಿಕ್ ಚೀಲಗಳು ತುಂಬಿಕೊಳ್ಳುತ್ತವೆ. ಮೇಲ್ಸೆತುವೆ ಬದಿಗಳಲ್ಲಿ ಮರಳು ರಾಶಿ ತುಂಬಿಕೊಂಡು ನೀರು ಹರಿದು ಹೋಗುವ ರಂಧ್ರಗಳನ್ನು ಮುಚ್ಚಿದೆ. ಇದರಿಂದಾಗಿ ನೀರು ಮೇಲ್ಸೆತುವೆ ಮೇಲೆ ನಿಂತು ವಾಹನಗಳು ಚಲಿಸುವ ವೇಳೆ ಕೆಳಭಾಗಕ್ಕೆ ಚಿಮ್ಮಿ ಜನರನ್ನು ಒದ್ದೆಯಾಗಿಸುತ್ತದೆ.
ಸಮರ್ಪಕ ನಿರ್ವಹಣೆ ಕೊರತೆ
ಕಳೆದ ವರ್ಷ ಜೆಸಿಐ ಬಂಟ್ವಾಳದ ಸದಸ್ಯರು ಸುರಿಯುವ ಮಳೆಯಲ್ಲಿ ಹೂಳು ತೆರವುಗೊಳಿಸಿ ನೀರು ಹರಿದು ಹೋಗಲು ವ್ಯವಸ್ಥೆ ಕಲ್ಪಿಸಿದ್ದರು. ರಾಷ್ಟ್ರೀಯ ಹೆದ್ದಾರಿ ನಿರ್ವಹಣೆ ನೋಡಿಕೊಳ್ಳಬೇಕಾದ ಎನ್ಎಚ್ಎಐ, ಡಿವೈಡರ್ಗಳಲ್ಲಿದ್ದ ಹುಲ್ಲು, ರಸ್ತೆ ಬದಿಯ ಮರಳನ್ನು ತೆರವುಗೊಳಿಸಿ ಸ್ವಚ್ಛಗೊಳಿಸುತ್ತದೆ. ಆದರೆ ಮೇಲ್ಸೇತುವೆಯಲ್ಲಿ ಮರಳು ತುಂಬಿಕೊಂಡಿರುವುದನ್ನು ಸ್ವಚ್ಛಗೊಳಿಸದೆ ಇರುವುದರಿಂದ ಈ ಸಮಸ್ಯೆ ಪ್ರತಿವರ್ಷ ಪುನರಾವರ್ತನೆಯಾಗುತ್ತಿದೆ.
ಫ್ಲೈಓವರ್ನಿಂದ ನೀರು ಚಿಮ್ಮುವುದರಿಂದ ಅನೇಕ ಮಂದಿ ಪಾದಚಾರಿಗಳಿಗೆ ಕೆಟ್ಟ ಅನುಭವವಾಗಿದೆ. ಕಳೆದ ವರ್ಷ ನನ್ನ ಮೇಲೂ ನೀರು ಚಿಮ್ಮಿ ಸಂಪೂರ್ಣ ಒದ್ದೆಯಾಗಿದೆ. ಫ್ಲೈಓವರ್ನಲ್ಲಿ ನಿಂತ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡಿದರೆ ಈ ಸಮಸ್ಯೆ ಬಗೆಹರಿಯುತ್ತದೆ. ಎನ್ಎಚ್ಎಐ ಈ ಬಗ್ಗೆ ಗಮನ ಹರಿಸಬೇಕು. ಮಧುಕರ ಎ., ಬಿ.ಸಿ.ರೋಡು https://www.vijayavani.net/idkidu-samanya-sabhe https://www.vijayavani.net/summer-camp-14