

ವಿಜಯಪುರ: ಪ್ರವಾಹವೂ ತಗ್ಗಿದೆ-ಪರಿಹಾರವೂ ಕೊಟ್ಟಾಗಿದೆ, ಇದೀಗ ಪ್ರವಾಸ ಕೈಗೊಂಡಿರುವ ಬಿಜೆಪಿ ನಾಯಕರ ನಡೆ ಟ್ರೇನ್ ಹೋದ ಮೇಲೆ ಟಿಕೆಟ್ ತೆಗೆದುಕೊಂಡಂತಾಗಿದೆ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಡಾ.ಎಂ.ಬಿ. ಪಾಟೀಲ ವ್ಯಂಗ್ಯವಾಡಿದರು.
ಮುಖ್ಯಮಂತ್ರಿಗಳು ವೈಮಾನಿಕ ಸಮೀಕ್ಷೆ ನಡೆಸಿ ತ್ವರಿತವಾಗಿ ಪರಿಹಾರ ಘೋಷಣೆ ಮಾಡಿದ್ದಾರೆ. ಎನ್‌ಡಿಆರ್‌ಎಫ್ ನಿಯಮವಾಳಿಗಿಂತ ಹೆಚ್ಚಾಗಿ ಅಂದರೆ ಒಂದು ಹೆಕ್ಟರ್‌ಗೆ ಸುಮಾರು 17 ಸಾವಿರ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದೇವೆ. ಬಿಜೆಪಿಗರಿಗೆ ತಾಕತ್ ಇದ್ದರೆ ದೆಹಲಿಗೆ ತೆರಳಿ ಕೇಂದ್ರದಿಂದ ಪರಿಹಾರ ಒದಗಿಸಲಿ ಎಂದು ಶುಕ್ರವಾರ ಸುದ್ದಿಗಾರರಿಗೆ ಅವರು ಪ್ರತಿಕ್ರಿಯಿಸಿದರು.
ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ ಅನುದಾನ ಬರುತ್ತಿಲ್ಲ. 14 ಮತ್ತು 15ನೇ ಹಣಕಾಸು ಯೋಜನೆಯಡಿ ಸುಮಾರು 70 ಸಾವಿರ ಕೋಟಿ ರೂಪಾಯಿ ಬಾರದೆ ರಾಜ್ಯಕ್ಕೆ ಅನ್ಯಾಯವಾಗಿದೆ. ಭದ್ರಾ ಮೇಲ್ದಂಡೆ ಯೋಜನೆಯಡಿ 5800 ಕೋಟಿ ಕ್ಯಾಬಿನೆಟ್‌ನಲ್ಲಿ ಘೋಷಣೆಯಾಗಿದ್ದ ಹಣದಲ್ಲಿ ಒಂದು ರೂಪಾಯಿಯಾದರೂ ಬಂದಿದೆಯಂತಾ? ಎಂದು ಮರು ಪ್ರಶ್ನೆ ಎಸೆದರು.
ಎನ್‌ಡಿಆರ್‌ಎಫ್ ನಿಯಮಾವಳಿಯಲ್ಲಿ ಪರಿಹಾರ ಮೊತ್ತ ಕಡಿಮೆ ಇದೆ. ಒಂದು ಹೆಕ್ಟರ್ ಒಣಬೇಸಾಯಕ್ಕೆ 8500 ಮಾತ್ರವಿದ್ದು, ಅದನ್ನು 20 ಸಾವಿರ ರೂಪಾಯಿಗೆ ಹೆಚ್ಚಿಸಿ. ಈ ತಾಕತ್ತು-ಧೈರ್ಯವೂ ಬಿಜೆಪಿಗರಿಗೆ ಇಲ್ಲ. ಹೀಗಾಗಿ ರಾಜ್ಯದಲ್ಲೇ ಸುಮ್ಮನೇ ಸುತ್ತಾಡುತ್ತಿದ್ದಾರೆ. ಬಿಜೆಪಿಯಲ್ಲಿ ಮನೆಯೊಂದು ನೂರು ಬಾಗಿಲುಗಳಿವೆ. ಏಳೆಂಟು ತಂಡಗಳಿವೆ. ಆರ್.ಅಶೋಕ, ಬಿ.ವೈ. ವಿಜಯೇಂದ್ರ, ಪ್ರಲ್ಹಾದ್ ಜೋಶಿ, ವಿ.ಸೋಮಣ್ಣ ಇನ್ನು ನಮ್ಮವರೊಬ್ಬರು ಹೊರಗೆ ಹೋದರು(ಯತ್ನಾಳ)...ಹೀಗೆ 20 ಟೀಮ್ ಇವೆ. ಯಾವ ಟೀಮ್ ಬರುತ್ತಿದೆ ಎಂದು ಸ್ಪಷ್ಟತೆ ಇಲ್ಲ ಎಂದು ಎಂ.ಬಿ. ಪಾಟೀಲ ಲೇವಡಿ ಮಾಡಿದರು.
ರಾಜ್ಯದಲ್ಲಿ ಮತ್ತೆ ಮಾರ್ದನಿಸಿದ ಪವರ್ ಶೇರಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಎಂ.ಬಿ. ಪಾಟೀಲರು, ನಮ್ಮ ಪಕ್ಷದಲ್ಲಿ ಎಲ್ಲ ವಿಚಾರ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಯಾರು ಹೇಳಿದರೂ ಸಂಬಂಧವಿಲ್ಲ. ಯಾರಿಗೂ ಹೇಳುವ ಅಧಿಕಾರವಿಲ್ಲ. ಹೈಕಮಾಂಡ್ ನಿರ್ಧಾರವೇ ಅಂತಿಮ. ಹೀಗಾಗಿ ಆ ಕುರಿತ ಚರ್ಚೆ ಅಪ್ರಸ್ತುತ ಎಂದರಲ್ಲದೇ ಮುಂದಿನ ಎರಡೂವರೆ ವರ್ಷವೂ ನಾನೇ ಸಿಎಂ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸುತ್ತಾ, ಜನ ಕೇಳಿದರೆ ಏನು ಹೇಳಬೇಕು? ಅವರು ಮುಖ್ಯಮಂತ್ರಿ ಇದ್ದುದ್ದರಿಂದ ಹಾಗೆ ಹೇಳಿದ್ದಾರೆಂದರು.
ರಾಜ್ಯದಲ್ಲಿ ಅಕ್ಟೋಬರ್ ಕ್ರಾಂತಿ ಎಂದರೆ ಬಳಿಕ, ನವೆಂಬರ್ ಬಂತು...ಹೀಗೆ ಡಿಸೆಂಬರ್...ಜನವರಿ ಕ್ರಾಂತಿ ಬರುತ್ತಲೇ ಇರುತ್ತವೆ ಎಂದು ವ್ಯಂಗ್ಯವಾಡಿದ ಸಚಿವರು, ಕ್ರಾಂತಿಗಳ ಬಗ್ಗೆ ನನಗೆ ಗೊತ್ತಿಲ್ಲ. ಹೈಕಮಾಂಡ್ ಹೇಳಬೇಕು ಎಂದರು.