ಬಿಬಿಎಂಪಿ ಸಹಾಯವಾಣಿಗೆ ದೂರುಗಳ ಮಹಾಪೂರ:ಭಾರಿ ಮಳೆಗೆ ಮರ,ಕೊಂಬೆ ಮುರಿದ ಕುರಿತು

tree fallen
Published on

ಬೆಂಗಳೂರು:ರಾಜಧಾನಿಯಲ್ಲಿ ಬಿರುಗಾಳಿ ಮಳೆಗೆ ಮರ, ಕೊಂಬೆಗಳು ಮುರಿದು ಬಿದ್ದಿರುವ ಸಂಬಂಧಪಟ್ಟಂತೆ ಬಿಬಿಎಂಪಿ ಸಹಾಯವಾಣಿಗೆ ಸಾರ್ವಜನಿಕರಿಂದ ದೂರುಗಳ ಮಹಾಪೂರವೇ ಹರಿದು ಬಂದಿದೆ. ಜೂ 2ರಿಂದ ಜೂ 7ರವರೆಗೆ ಮರಗಳ ಧರಾಶಾಹಿ ಬಗ್ಗೆ 447, ಕೊಂಬೆಗಳ ಮುರಿದಿರುವ ಕುರಿತು 1,126 ಸೇರಿ ಒಟ್ಟು 1573 ದೂರುಗಳು ದಾಖಲಾಗಿವೆ. ಭಾರಿ ಮಳೆಯಿಂದಾಗಿ ರಸ್ತೆಗಳ ಮೇಲೆ ತ್ಯಾಜ್ಯ ಹರಿದಿರುವ ಸಂಬಂಧ ನಗರದ ವಿವಿಧ ಭಾಗಗಳಿಂದ 1,573 ದೂರುಗಳು ಸ್ವೀಕೃತವಾಗಿವೆ.

ಕಳೆದ ಭಾನುವಾರ ಸುರಿದ ಧಾರಾಕಾರ ಮಳೆಗೆ ಒಂದೇ ದಿನದಂದು 574 ಮರ,ಟೊಂಗೆಗಳು ಧರೆಗುರುಳಿ ಭಾರೀ ಅನಾಹುತ ಉಂಟಾಗಿತ್ತು. ಬುಧವಾರದಿಂದ ಶುಕ್ರವಾರದವರೆಗೆ ನಗರದಲ್ಲಿ ನಿರಂತರವಾಗಿ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಹತ್ತಾರು ಮರ, ಕೊಂಬೆಗಳು ಮುರಿದಿವೆ. ಮುಂಗಾರು ಮುನ್ನ ಒಣಗಿದ, ಬೀಳುವ ಹಂತದಲ್ಲಿರುವ ಮರಗಳನ್ನು ಗುರುತಿಸಿ ಅವುಗಳನ್ನು ತೆರವು ಮಾಡುವಲ್ಲಿ ನಿರ್ಲಕ್ಷ್ಯವಹಿಸಿದ ಪರಿಣಾಮ ಸಾರ್ವಜನಿಕರ ಆಸ್ತಿ,ಪಾಸ್ತಿ ಸೇರಿ ಮರಗಳು ಧರೆಗುರುಳಿದ ಸಂದರ್ಭದಲ್ಲಿ ಮನೆಗಳ ಮುಂದೆ ನಿಲ್ಲಿಸಿದ್ದ ಕಾರು, ಬೈಕ್​, ಆಟೋ ರಿಕ್ಷಾಗಳಿಗೂ ಹಾನಿಯಾಗಿದೆ. ಮಳೆಯಿಂದ ರಕ್ಷಣೆ ಪಡೆಯಲು ರಸ್ತೆಬದಿ ವಾಹನ ನಿಲ್ಲಿಸಿ ಮಳಿಗೆ ಬಳಿಗೆ ತೆರಳಿದ್ದವರ ವಾಹನಗಳು ಮರ ಬಿದ್ದ ರಭಸಕ್ಕೆ ಜಖಂಗೊಂಡಿವೆ. ಹೀಗಾಗಿ, ಮಳೆ ಬೀಳುವ ಸಂದರ್ಭದಲ್ಲಿ ವಾಹನ ಸವಾರರು, ಪಾದಚಾರಿಗಳು ಪ್ರಾಣ ಭಯದಲ್ಲೇ ಸಂಚರಿಸುವಂತಾಗಿದೆ.

ರಾಜಧಾನಿಯಲ್ಲಿ ಪ್ರವಾಹ ಸಾಮಾನ್ಯ

ಬಿಬಿಎಂಪಿ ಇತಿಹಾಸದಲ್ಲಿ ಒಂದೇ ದಿನ ಇಷ್ಟೊಂದು ಸಂಖ್ಯೆಯ ಮರಗಳು ಧರೆಗುರುಳಿದ ಉದಾಹರಣೆ ಇಲ್ಲ. ಮಳೆ ಜತೆಗೆ ಬಿರುಗಾಳಿ ಬೀಸಿದರೂ ಇಷ್ಟು ಸಂಖ್ಯೆಯಲ್ಲಿ ಮರಗಳು ಉರುಳುವುದು ಅಪರೂಪ. ಮಳೆಗಾಲದ ಮುನ್ನ ಶಿಥಿಲವಾದ, ಗೆದ್ದಲು ಹಿಡಿದ, ರಸ್ತೆಗೆ ಬಾಗಿ ಜನ, ವಾಹನ ಸಂಚಾರಕ್ಕೆ ಅಡ್ಡಿಯಾಗುವ ಮರ, ಟೊಂಗೆಗಳನ್ನು ತೆರವು ಮಾಡುವುದು ಅರಣ್ಯ ವಿಭಾಗಕ್ಕೆ ಕರ್ತವ್ಯ. ಆದರೆ, ಕೆಲ ವರ್ಷದಿಂದೀಚಿಗೆ ಈ ವಿಭಾಗದ ಅಧಿಕಾರಿಗಳು ನಾಗರಿಕರ ದೂರುಗಳಿಗೆ ಸ್ಪಂದಿಸುತ್ತಿಲ್ಲ. ಸ್ವತ: ಹಿರಿಯ ಅಧಿಕಾರಿಗಳು ಸೂಚಿಸಿದರೂ, ನಿಯಮ ನೆಪಮಾಡಿ ಶಿಥಿಲ ಮರಗಳನ್ನು ತೆರವು ಮಾಡುತ್ತಿಲ್ಲ ಎಂಬ ಆಕ್ಷೇಪ ನಾಗರಿಕ ವಲಯದಿಂದ ಕೇಳಿಬಂದಿದೆ. ಭಾನುವಾರ ಒಂದೇ ದಿನ ಸುರಿದ ಭಾರೀ ಮಳೆ ವೇಳೆ ಪ್ರವಾಹ, ಅಂಡರ್​ಪಾಸ್​ಗಳಲ್ಲಿ ನೀರು ನಿಂತಿರುವುದು, ಮರ/ಟೊಂಗೆ ಹಾಗೂ ವಿದ್ಯುತ್​ ಕಂಬಗಳು ನೆಲಕ್ಕುರುಳಿರುವುದು ಸೇರಿ ಒಟ್ಟು 926 ದೂರುಗಳು ದಾಖಲಾಗಿವೆ. ಇತ್ತೀಚಿನ ದಶಕದಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ದೂರು ದಾಖಲಾಗಿರಲಿಲ್ಲ ಎಂದು ಬಿಬಿಎಂಪಿ ತಿಳಿಸಿದೆ. ಅಲ್ಲದೆ, ಸಣ್ಣ ಮಳೆಗೆ ರಾಜಧಾನಿಯಲ್ಲಿ ಪ್ರವಾಹ ಉಂಟಾಗುವುದು, ಅಂಡರ್​ಪಾಸ್​ಗಳಲ್ಲಿ ನೀರು ನಿಲ್ಲುವುದು ಸಾಮಾನ್ಯವಾಗಿದೆ.

ಅರಣ್ಯ ವಿಭಾಗದ ವೈಫಲ್ಯ:

ಧರೆಗುರುಳಿದ ಬಹುತೇಕ ಮರಗಳು ವಿದೇಶಿ ಪ್ರಭೇದಗಳಾಗಿದ್ದು, ನೆಲದಾಳಕ್ಕೆ ಬೇರುಗಳು ಇಳಿಯದೆ ಮೇಲ್ಭಾಗದಲ್ಲೇ ಹರಡಿಕೊಂಡಿರುತ್ತದೆ. ಜತೆಗೆ ರಸ್ತೆ, ಫುಟ್​​ಪಾತ್​ ಬದಿಯಲ್ಲಿ ಮರಗಳು ಬೆಳವಣಿಗೆ ಹೊಂದಲು ಮಣ್ಣಿನ ಆಸರೆ ಇರುವುದಿಲ್ಲ. ಇಂತಹ ಸ್ಥಳಗಳಲ್ಲಿ ಬಾಗಿದ ಮರಗಳನ್ನು ತೆರವುಗೊಳಿಸುವಂತೆ ಜನರು ಅರಣ್ಯ ವಿಭಾಗದ ಅಧಿಕಾರಿಗಳಿಗೆ ತಿಳಿಹೇಳಿದರೂ, ತೆರವು ಮಾಡುವ ಗೋಜಿಗೆ ಹೋಗುವುದಿಲ್ಲ.ಸುಸ್ಥಿತಿಯಲ್ಲಿರುವ ಮರಗಳ ತೆರವು ಮಾಡಬಾರದೆಂಬ ನಿಯಮವನ್ನು ಶಿಥಿಲ ಮರಗಳಿಗೂ ಅನ್ವಯಿಸುತ್ತಿರುವ ಕಾರಣ ಭಾರೀ ಮಳೆ ವೇಳೆ ಮರಗಳು ನೆಲಕ್ಕುರುಳುತ್ತಿವೆ. ಸಿಎಂ, ಡಿಸಿಎಂ ಸಿಟಿ ರೌಂಡ್ಸ್​ ಕೈಗೊಂಡಿದ್ದ ವೇಳೆ ಮುಂಗಾರು ಸಂದರ್ಭದಲ್ಲಿ ಮಳೆ ಅನಾಹುತ ತಡೆಗಟ್ಟಲು ಹಳೆಯ ಹಾಗೂ ಶಿಥಿಲ ಮರಗಳನ್ನು ತೆರವು ಮಾಡಬೇಕು. ಈ ಕೆಲಸವನ್ನು ಆಯಾ ವಿಭಾಗ, ವಲಯದ ಅಧಿಕಾರಿಗಳು ಆದ್ಯತೆ ಮೇಲೆ ಪರಿಗಣಿಸಿ ತೆರವುಗೊಳಿಸಬೇಕು ಎಂದು ಸೂಚಿಸಿದ್ದರು. ಆದರೆ, ಈ ಸೂಚನೆ ನೀಡಿ ಮೂರು ವಾರ ಸಮೀಪಿಸುತ್ತಿದ್ದರೂ ಅರಣ್ಯ ವಿಭಾಗ ಮರಗಳ ತೆರವು ಮಾಡಲು ನಿರ್ಲಕ್ಷ್ಯವಹಿಸಿರುವುದು ಅನಾಹುತದಿಂದ ದೃಢಪಟ್ಟಿದೆ.

ಹತ್ತಾರು ಕೋಟಿ ನಷ್ಟ: ಭಾರೀ ಮಳೆಯಿಂದ ಮರ, ಟೊಂಗೆಗಳು ಧರೆಗುರುಳಿದ ವೇಳೆ ಹಲವು ವಿದ್ಯುತ್​ ಕಂಬಗಳ ಮೇಲೆ ಬಿದ್ದಿವೆ. ಇದರಿಂದ ಆ ಭಾಗದಲ್ಲಿ ಬಡಾವಣೆಗಳಲ್ಲಿ ವಿದ್ಯುತ್​ ಸಂಪರ್ಕ ಕಡಿತವಾಗಿದ್ದಲ್ಲದೆ ಬರೋಬರಿ 261 ಕಂಬಗಳು ನೆಲಕ್ಕುರುಳಿವೆ. ದಣ ವಲಯ 137, ದಾಸರಹಳ್ಳಿ 50, ಆರ್​ಆರ್​ ನಗರ 44, ಪಶ್ಚಿಮ ವಲಯದಲ್ಲಿ 21 ಕಂಬಗಳಿಗೆ ಹಾನಿಯಾಗಿದ್ದು, ಹತ್ತಾರು ಕೋಟಿ ರೂ. ನಷ್ಟವಾಗಿದೆ.

ದೂರುಗಳ ವಿವರ

ವಲಯ                     ಮರ             ಕೊಂಬೆ            ತ್ಯಾಜ್ಯ

ದಕ್ಷಿಣ                     136             415               551

ಪಶ್ಚಿಮ                    132             324               456

ದಾಸರಹಳ್ಳಿ                47              45                  92

ಬೊಮ್ಮನಹಳ್ಳಿ             32              43                   75

ಯಲಹಂಕ                 29             83                   112

ಆರ್​.ಆರ್​.ನಗರ          27             67                     94

ಪೂರ್ವ                  25             113                   138

ಮಹದೇವಪುರ          19            36                         55

ಒಟ್ಟು                 447            1,126                 1,573

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net