

ಕಾರವಾರ: ಜಿಲ್ಲೆಯಲ್ಲಿ ಮಳೆಯ ಅಬ್ಬರ ಮತ್ತೆ ಹೆಚ್ಚಿದೆ. ಹಲವೆಡೆ ನೀರು ತುಂಬಿ ಅನಾಹುತಗಳು ಸಂಭವಿಸಿವೆ.
ಕಾರವಾರ ಅಣಶಿ ಘಟ್ಟದಲ್ಲಿ ಗುಡ್ಡ ಕುಸಿದಿದ್ದು, ಕುಸಿತ ಇನ್ನಷ್ಟು ಹೆಚ್ಚಿದರೆ, ಜೊಯಿಡಾ-ಕದ್ರಾ ನಡುವೆ ವಾಹನ ಸಂಪರ್ಕ ಕಡಿತವಾಗುವ ಸಾಧ್ಯತೆ ಇದೆ. ಚೆಂಡಿಯಾ ಈಡೂರಿನಲ್ಲಿ ನೀರು ತುಂಬಿ ಸಮಸ್ಯೆ ಉಂಟಾಯಿತು.
ಶಾಲೆಗಳಿಗೆ ರಜೆ:
ಜಿಲ್ಲೆಯ ಕರಾವಳಿ ಭಾಗದಲ್ಲಿ ವ್ಯಾಪಕ ಮಳೆ ಸುರಿಯುತ್ತಿರುವುದರಿಂದ, ಶಾಲಾ ಮಕ್ಕಳ ಹಿತದೃಷ್ಟಿಯಿಂದ ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲ ಮತ್ತು ಕಾರವಾರ ತಾಲೂಕಿನ ಎಲ್ಲಾ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ಜುಲೈ 8 ರಂದು ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ ತಿಳಿಸಿದ್ದಾರೆ.
ಭಟ್ಕಳ ವರದಿ:
ಭಟ್ಕಳ ರಂಗಿನಕಟ್ಟೆಯಲ್ಲಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನೀರು ತುಂಬಿ ವಾಹಮ ಸಂಚಾರ ದುಸ್ತರವಾಯಿತು. ಚತುಷ್ಪಥ ಕಾಮಗಾರಿ ಕೈಗೊಂಡ ಐಆರ್ ಬಿ ಕಂಪನಿಯ ಅವೈಜ್ಞಾನಿಕ ಕಾಮಗಾರಿಯಿಂದ ಸಮಸ್ಯೆ ಉಂಟಾಗುತ್ತಿದೆ ಎಂಬುದು ಸ್ಥಳೀಯರ ದೂರು.
ಮಳೆಯ ಪ್ರಮಾಣ:
ಭಾನುವರದ ಬೆಳಗಿನ ವರದಿಯಂತೆ ಹಿಂದಿನ 24 ಗಂಟೆಗಳ ಅವಧಿಯಲ್ಲಿ ಅಂಕೋಲಾ-83.4,ಭಟ್ಕಳ-60.8, ಹಳಿಯಾಳ-8.9,ಹೊನ್ನಾವರ- 75.4, ಕಾರವಾರ-80.4, ಕುಮಟಾ-60.1,ಮುಂಡಗೋಡ-10.6, ಸಿದ್ದಾಪುರ-31.8, ಶಿರಸಿ-32.4, ಜೊಯಿಡಾ-70, ಯಲ್ಲಾಪುರ-39.2, ದಾಂಡೇಲಿ-16.2 ಮಿಮೀ ಮಳೆಯಾಗಿದೆ.