

ಕಾಬೂಲ್: ಅಫ್ಘಾನಿಸ್ತಾನದಲ್ಲಿ ಭಾರಿ ಮಳೆಯಾಗುತ್ತಿದ್ದು, ಹಠಾತ್ ಪ್ರವಾಹ ಉಂಟಾಗಿ 300 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. 1ಸಾವಿರಕ್ಕೂ ಕ್ಕೂ ಹೆಚ್ಚು ಮನೆಗಳು ನಾಶವಾಗಿವೆ.
ಪ್ರವಾಹ ಪರಿಸ್ಥಿತಿಯಿಂದ ಸಹಸ್ರಾರು ಮಂದಿ ಮನೆ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಉತ್ತರದ ಬಾಗ್ಲಾನ್ ಮೇಲೆ ಮಳೆ ತೀವ್ರ ಪರಿಣಾಮ ಬೀರಿದೆ. ಶುಕ್ರವಾರ ಸಂಭವಿಸಿದ ಪ್ರವಾಹವು ರಸ್ತೆ, ಮನೆಗಳಿಗೆ ತೀವ್ರ ಹಾನಿಯನ್ನುಂಟುಮಾಡಿದೆ, ನೆರೆಯ ತಖರ್ ಪ್ರಾಂತ್ಯದಲ್ಲೂ ಕನಿಷ್ಠ 20 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ.
ತಾಲಿಬಾನ್ ಸರ್ಕಾರದ ಮುಖ್ಯ ವಕ್ತಾರ ಜಬಿಹುಲ್ಲಾ ಮುಜಾಹಿದ್ ತನ್ನ ಸಾಮಾಜಿಕ ಮಾಧ್ಯಮ ಎಕ್ಸ್ ಪ್ಲಾಟ್‌ಫಾರ್ಮ್ ನಲ್ಲಿ "ನೂರಾರು ಮಂದಿ ಈ ದುರಂತ ಪ್ರವಾಹಕ್ಕೆ ಬಲಿಯಾಗಿದ್ದಾರೆ, ಗಣನೀಯ ಸಂಖ್ಯೆಯ ಜನರು ಗಾಯಗೊಂಡಿದ್ದಾರೆ" ಎಂದು ಪೋಸ್ಟ್ ಮಾಡಿದ್ದಾರೆ.
ಮುಜಾಹಿದ್ ಬಡಾಕ್ಷಣ್, ಬಘ್ಲಾನ್, ಘೋರ್ ಮತ್ತು ಹೆರಾತ್ ಪ್ರಾಂತ್ಯಗಳು ಪ್ರವಾಹದ ಪ್ರಭಾವಕ್ಕೆ ಒಳಪಟ್ಟಿವೆ. ಇದು ಹೆಚ್ಚಿನ ಆರ್ಥಿಕ ನಷ್ಟಕ್ಕೆ ಕಾರಣವಾಗಿದೆ. ಜನರನ್ನು ರಕ್ಷಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಅಫ್ಘಾನಿಸ್ತಾನದ ವಾಯುಪಡೆಯು ಪ್ರವಾಹ ಪೀಡಿತ ಬಾಗ್ಲಾನ್‌ನಲ್ಲಿ ಜನರನ್ನು ಸ್ಥಳಾಂತರಿಸುವ ಪ್ರಯತ್ನಗಳನ್ನು ಪ್ರಾರಂಭಿಸಿದೆ ಎಂದು ತಾಲಿಬಾನ್ ರಕ್ಷಣಾ ಸಚಿವಾಲಯ ಶನಿವಾರ ಪ್ರಕಟಿಸಿದೆ. ವಿಶ್ವಸಂಸ್ಥೆ ಸಂತ್ರಸ್ತರಿಗೆ ಆಹಾರ ಪೂರೈಸಲು ಕ್ರಮ ತೆಗೆದುಕೊಂಡಿದೆ.