

ಶಿಮ್ಲಾ: ಮಾನ್ಸೂನ್ ಹಿನ್ನೆಲೆ ದೇಶಾದ್ಯಂತ ಹಲವಾರು ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದೆ. ಇನ್ನೂ ಹಿಮಾಚಲ ಪ್ರದೇಶದ ಕುಲುವಿನಲ್ಲೂ ಅತೀ ಹೆಚ್ಚು ಮಳೆಯಾಗಿದೆ. ಪರಿಣಾಮ ಕುಲುವಿನಲ್ಲಿ ಮೇಘಸ್ಫೋಟ ಉಂಟಾಗಿದ್ದು, ಸೈಂಜ್ ವ್ಯಾಲಿಯಲ್ಲಿ ದಿಢೀರ್ ಪ್ರವಾಹ ಸಂಭವಿಸಿದೆ.
ಪಾರ್ವತಿ ನದಿ ಉಕ್ಕಿ ಹರಿಯುತ್ತಿದ್ದು, ದಡದಲ್ಲಿರುವ ಗ್ರಾಮಗಳ ಜನರನ್ನು ಸ್ಥಳಾಂತರ ಮಾಡಲಾಗ್ತಾ ಇದೆ. ಸೈಂಜ್ ಕಣಿವೆಯಲ್ಲಿ ನದಿ ನೀರು ಕೆಂಪಾಗಿ ಭೋರ್ಗರೆಯುತ್ತಾ ಹರಿದು, ಇಡೀ ಊರನ್ನೇ ಆಕ್ರಮಿಸಿಕೊಳ್ಳುತ್ತಿದೆ. ಸ್ಥಳೀಯ ಆಡಳಿತವು ಸುತ್ತಮುತ್ತಲಿನ ಪ್ರದೇಶಗಳಿಗೆ ಎಚ್ಚರಿಕೆ ನೀಡಿದೆ. ಪ್ರಸ್ತುತ ಸಾಮಾನ್ಯ ಮಟ್ಟಕ್ಕಿಂತ ಹೆಚ್ಚಾಗಿ ಹರಿಯುತ್ತಿರುವ ಪಾರ್ವತಿ ನದಿಯ ನೀರಿನ ಮಟ್ಟ ಏರಿಕೆಯಾಗುವ ಬಗ್ಗೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಸದ್ಯ ಘಟನೆಯಲ್ಲಿ ಇಲ್ಲಿಯವರೆಗೆ ಯಾವುದೇ ಸಾವುನೋವುಗಳು ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲವಾದರೂ, ಆಡಳಿತವು ನಿವಾಸಿಗಳು ಜಾಗರೂಕರಾಗಿರಿ ಮತ್ತು ನದಿ ದಂಡೆಗಳು ಅಥವಾ ಹೊಳೆಗಳ ಬಳಿ ಹೋಗುವುದನ್ನು ತಪ್ಪಿಸುವಂತೆ ಒತ್ತಾಯಿಸಿದೆ. ವಿಪತ್ತು ನಿರ್ವಹಣಾ ತಂಡಗಳೊಂದಿಗೆ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
(ಏಜೆನ್ಸೀಸ್)