ಒಂದು ಕೆಜಿ ಚಿನ್ನದ ನಾಣ್ಯ ಕೊಡ್ತೀವಿ ಎಂದು ಕೇರಳ ಮೂಲದ ವ್ಯಕ್ತಿಗೆ ವಂಚನೆ; ಖದೀಮರು ಅಂದರ್​…

crime
Published on

ಹಾವೇರಿ: 'ಒಂದು ಕೆಜಿ ಚಿನ್ನದ ನಾಣ್ಯ ಕೊಡ್ತೀವಿ' ಎಂದು ಹೇಳಿ ಕೇರಳ ಮೂಲದ ವ್ಯಕ್ತಿಗೆ ವಂಚಿಸಿದ್ದ ಖದೀಮರನ್ನು ಹಾನಗಲ್ ಪೊಲೀಸರು ಭರ್ಜರಿ ಕಾರ್ಯಚರಣೆ ಮಾಡಿ ಸೆರೆ ಹಿಡಿದಿದ್ದಾರೆ.

'ಮನೆ ಕಟ್ಟುವಾಗ ಬಂಗಾರದ ನಾಣ್ಯಗಳು ಸಿಕ್ಕಿದ್ದವು. ಈಗ ಮಗಳ ಮದುವೆ ಮಾಡಿಸಬೇಕು. ಆದರೆ ಈ ಚಿನ್ನದ ನಾಣ್ಯಗಳನ್ನು ಅಂಗಡಿಗೆ ಮಾರುವುದಕ್ಕೆ ಬಿಲ್​ ತೋರಿಸಬೇಕಾಗುತ್ತೆ. ಇದಕ್ಕೆ ಬಿಲ್​ ಇಲ್ಲ. ನಮ್ಮನ್ನು ಈ ಸಮಸ್ಯೆಯಿಂದ ಪಾರು ಮಾಡಿ' ಎಂದು ಕೇರಳ ಮೂಲದ ವ್ಯಕ್ತಿಯೊಬ್ಬರಿಗೆ ಖದೀಮರು ನಂಬಿಸಿದ್ದಾರೆ. ನಂತರ ಕೇರಳದಿಂದ ಸುನೀಲ್ ಮ್ಯಾಥೊ ಕುಡಕಪರಂಬೀಲ್ ಎನ್ನುವವರನ್ನು ಕರೆಸಿ ಬಂಗಾರದ ನಾಣ್ಯಗಳನ್ನು ನೀಡುವುದಾಗಿ ನಂಬಿಸಿದ್ದಾರೆ.

ಮೊದಲು ಅಸಲಿ ಚಿನ್ನದ ನಾಣ್ಯ ನೀಡಿದ ವಂಚಕರು ಪ್ರತಿ ಕಾಯಿನ್​ಗೆನ 500 ರೂ. ಕೊಟ್ಟರೆ ಸಾಕು ಎಂದು ಹೇಳಿದ್ದಾರೆ. ಇದನ್ನು ನಂಬಿದ ಸುನೀಲ್​, ಒಂದು ಕೆಜಿ ಚಿನ್ನ ಕೇವಲ ಹತ್ತು ಲಕ್ಷ ರೂ.ಗೆ ಸಿಗುತ್ತೆ ಅಂತ ಹಣ ನೀಡಿದ್ದಾರೆ. ಆದರೆ ನಂತರ ಪರಿಶೀಲಿಸಿದಾಗ ಅದು ನಕಲಿ ಚಿನ್ನ ಎನ್ನುವುದು ಅರಿವಿಗೆ ಬಂದಿದೆ. ನಂತರ ಸುನೀಲ್​ ಈ ಬಗ್ಗೆ ಹಾನಗಲ್​ನ ಶಿಕಾರಿಪುರದ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದೂರು ದಾಖಲಿಸಿಕೊಂಡ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಒಟ್ಟು ನಾಲ್ಕು ಜನರನ್ನು ಬಂಧಿಸಿದ್ದಾರೆ. ಸದ್ಯ ಓರ್ವ ವ್ಯಕ್ತಿ ತಪ್ಪಿಸಿಕೊಂಡಿದ್ದು ಆತನಿಗೂ ಪೊಲಿಸರು ಬಲೆ ಬೀಸಿದ್ದಾರೆ. ಹಾನಗಲ್​ನ ಶಿಕಾರಿಪುರ ಮೂಲದ ಐವರು ವಂಚನೆ ನಡೆಸಿದ್ದರು. ಓರ್ವ ಮಹಿಳೆ ಕೂಡ ಈ ಗ್ಯಾಂಗ್​ನಲ್ಲಿದ್ದಳು.

ಆರೋಪಿಗಳಾದ ಕೃಷ್ಣಪ್ಪ ತಿಮ್ಮಣ್ಣ ಕಡೇಮನಿ, ಸಣ್ಣನಿಂಗಪ್ಪ ಗಂಗಪ್ಪ ಕೊರಚರ, ಶಿವಪ್ಪ ಹನುಮಂತಪ್ಪ ಬೋವಿ, ರೇಣುಕ ಸಣ್ಣನಿಂಗಪ್ಪ ಕೊರಚರ ಮತ್ತು ಇನ್ನೋರ್ವ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಪಿ.ಎಸ್.ಐ ಶ್ರೀಶೈಲ್ ಪಟ್ಟಣಶೆಟ್ಟಿ, ಕ್ರೈಂ ಎಸ್.ಐ ಕೆನ್ ಹಳ್ಳಿಯವರ ಮತ್ತು ಸಿಬ್ಬಂದಿ ಭರ್ಜರಿ ಕಾರ್ಯಚರಣೆ ನಡೆಸಿ ಖದೀಮರನ್ನು ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net