

ವಿಜಯವಾಣಿ ಸುದ್ದಿಜಾಲ ಉಡುಪಿ
ಮಲ್ಪೆ ಮೀನುಗಾರಿಕಾ ಬಂದರಿನಲ್ಲಿರುವ ಹಲವು ಸಮಸ್ಯೆ ನಿವಾರಣೆ ಹಾಗೂ ಮೀನುಗಾರಿಕೆಗೆ ಸಂಬಂಧಿಸಿ ತುರ್ತು ಬೇಡಿಕೆ ಈಡೇರಿಸುವಂತೆ ಹಾಗೂ ಮೀನುಗಾರಿಕಾ ಚಟುವಟಿಕೆಗೆ ಅಗತ್ಯ ಸೌಕರ್ಯ ಕಲ್ಪಿಸಿಕೊಡಬೇಕು ಎಂದು ಮೀನುಗಾರಿಕಾ ಸಚಿವ ಮಂಕಾಳ ವೈದ್ಯ ಅವರಿಗೆ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಒತ್ತಾಯಿಸಿದರು.
ಮಂಗಳೂರಿನ ಕುಳಾಯಿಯಲ್ಲಿರುವ ಮೊಗವೀರ ಭವನದಲ್ಲಿ ಬುಧವಾರ ಆಯೋಜಿಸಿದ್ದ ಮಲ್ಪೆ ಮೀನುಗಾರರ ಸಂಘದ ನಿಯೋಗ ಸಭೆಯಲ್ಲಿ ಮಾತನಾಡಿದರು.
ಮಲ್ಪೆ ಮಹಿಳಾ ಮೀನುಗಾರ ಸಂಘದವರಿಗೆ ಒಣ ಮೀನು ವ್ಯಾಪಾರಕ್ಕೆ ನಿವೇಶನ ಮಂಜೂರು, ಬಂದರಿನಲ್ಲಿ ಸುಗಮ ಮೀನುಗಾರಿಕೆಗೆ ಅನುಕೂಲವಾಗಲು ಡ್ರೆಜ್ಜಿಂಗ್ ನಡೆಸಿ ಹೂಳು ತೆರವು ಮಾಡಬೇಕು. ಮೀನುಗಾರಿಕೆ ಸಂದರ್ಭದಲ್ಲಿ ಅವಘಡ ಉಂಟಾದಾಗ ವಿಮಾ ಪರಿಹಾರ ಮೊತ್ತ ಬಿಡುಗಡೆ ಪ್ರಕ್ರಿಯೆಯ ನಿಯಮಾವಳಿ ಸರಳೀಕರಣಗೊಳಸಬೇಕು. ನಾಡದೋಣಿ ಹಾಗೂ ಯಾಂತ್ರೀಕೃತ ಬೋಟ್ಗಳಿಗೆ ಸ್ಥಳದ ಕೊರತೆಯಾಗಿದ್ದು, ಪ್ರಸ್ತಾವಿತ ನೂತನ ಜೆಟ್ಟಿ ನಿಮಾರ್ಣಕ್ಕೆ ಆದ್ಯತೆ ನೀಡಬೇಕು ಎಂದರು.
ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ ಸುವರ್ಣ ಮಾತನಾಡಿ, ಮಲ್ಪೆ ಮೀನುಗಾರಿಕಾ ಬಂದರಿನ ಸಮಸ್ಯೆ ಹಾಗೂ ಬೇಡಿಕೆಗಳ ಕುರಿತು ಮಾಹಿತಿ ನೀಡಿದರು. ನಿಯೋಗದ ಮನವಿಗೆ ಸಚಿವ ಮಂಕಾಳ ವೈದ್ಯ ಪೂರಕವಾಗಿ ಸ್ಪಂದಿಸಿದರು.
ಸಭೆಯಲ್ಲಿ ಮೀನುಗಾರಿಕಾ ಇಲಾಖೆಯ ನಿರ್ದೇಶಕ ದಿನೇಶ್ ಕಲ್ಲೇರ್, ಕುಳೂರು ಮೊಗವೀರ ಸಂಘದ ಅಧ್ಯಕ್ಷ ಭರತ್, ಮಲ್ಪೆ ಯಾಂತ್ರಿಕ ಟ್ರಾಲ್ ಬೋಟ್ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ರಾಮಚಂದ್ರ ಕುಂದರ್, ಪರ್ಸೀನ್ ಮೀನುಗಾರರ ಸಂಘದ ಅಧ್ಯಕ್ಷ ನಾಗರಾಜ ಸುವರ್ಣ, ಡೀಪ್ಸೀ ಟ್ರಾಲ್ ಬೋಟ್ ಸಂಘದ ಅಧ್ಯಕ್ಷ ಸುಭಾಷ್ ಮೆಂಡನ್, ಮಹಿಳಾ ಮೀನುಗಾರರ ಸಂಘದ ಅಧ್ಯಕ್ಷೆ ಸುಮಿತ್ರಾ, ಮೀನುಗಾರರ ಸಂಘದ ಕಾರ್ಯದರ್ಶಿ ಜಗನ್ನಾಥ, ಮೀನುಗಾರರ ಪ್ರಕೋಷ್ಠದ ಅಧ್ಯಕ್ಷ ಮಂಜುನಾಥ ಸಾಲ್ಯಾನ್, ಯಾಂತ್ರಿಕ ಟ್ರಾಲ್ ಸಹಕಾರಿ ಸಂಘದ ಉಪಾಧ್ಯಕ್ಷ ಪ್ರಕಾಶ್ ಬಂಗೇರ ಹಾಗೂ ಮೀನುಗಾರರ ಸಂಘದ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಗೋವಾ-ಮಹಾರಾಷ್ಟ್ರ ಹಾಗೂ ಕೇರಳ ಸಹಿತ ಪಕ್ಕದ ರಾಜ್ಯಗಳೊಂದಿಗೆ ಸಮನ್ವಯತೆ ಮೂಡಿಸಬೇಕಿದೆ. ಆ ನಿಟ್ಟಿನಲ್ಲಿ ಸುಗಮ ಮೀನುಗಾರಿಕೆಗಾಗಿ ಏಕರೂಪ ಮೀನುಗಾರಿಕಾ ನೀತಿ ಜಾರಿಯ ಅಗತ್ಯತೆ ಇದೆ. 4ನೇ ಹಂತದ ಬಂದರು ಅಭಿವೃದ್ಧಿಗಾಗಿ ಟೆಬ್ಮಾ ಶಿಪ್ ಯಾರ್ಡ್ ಬಳಿಯ ಸ್ಥಳವನ್ನು ಮೀನುಗಾರಿಕೆಗಾಗಿ ಮೀಸಲಿಡಬೇಕು ಎಂದು ಮೀನುಗಾರರ ಪರವಾಗಿ ಶಾಸಕ ಯಶ್ಪಾಲ್ ಅವರು ಸಚಿವ ಮಂಕಾಳ ಅವರಲ್ಲಿ ಮನವಿ ಮಾಡಿದರು.
ಮೀನುಗಾರರ ಬೇಡಿಕೆ ಈಡೇರಿಸಲು ಹಾಗೂ ಅವರು ಅನುಭವಿಸುತ್ತಿರುವ ಸಮಸ್ಯೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಆದ್ಯತೆಯ ಮೇರೆಗೆ ಎಲ್ಲವನ್ನೂ ಪರಿಹರಿಸಲು ಬದ್ಧನಿದ್ದೇನೆ. ಶೀಘ್ರದಲ್ಲಿ ಮಲ್ಪೆ ಬಂದರಿಗೆ ಭೇಟಿ ನೀಡಿ, ಮೀನುಗಾರಿಕೆಗೆ ಪೂರಕ ಯೋಜನೆಗಳ ಅನುಷ್ಠಾನಕ್ಕೆ ಕ್ರಮ ವಹಿಸುತ್ತೇನೆ. | ಮಂಕಾಳ ವೈದ್ಯ. ಮೀನುಗಾರಿಕಾ ಸಚಿವ