ಮೀನು ಮರಿ ಪಾಲನಾ ಘಟಕ

fish
Published on

ಪ್ರಕಾಶ್ ಮಂಜೇಶ್ವರ ಮಂಗಳೂರು

ಕರಾವಳಿಯಲ್ಲಿ ಸಾಕಷ್ಟು ರೈತರು ಒಳನಾಡು ಮೀನುಗಾರಿಕೆಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಇಂಥ ರೈತರನ್ನು ಒಗ್ಗೂಡಿಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಮೀನು ಮರಿ ಪಾಲನಾ ಕೇಂದ್ರಗಳ ಸ್ಥಾಪಿಸಲು ಮಂಗಳೂರು ಕೃಷಿ ವಿಜ್ಞಾನ ಕೇಂದ್ರ(ಕೆವಿಕೆ) ಮುಂದಾಗಿದೆ.

ಸಾಗಾಟ ಮತ್ತು ಕೃಷಿಯ ಒಟ್ಟು ನಿರ್ವಹಣಾ ವೆಚ್ಚ ಕಡಿಮೆ ಮಾಡುವುದು, ಸಕಾಲದಲ್ಲಿ ಆಸಕ್ತ ರೈತರಿಗೆ ಮರಿಗಳನ್ನು ಒದಗಿಸುವುದು ಈ ಯೋಜನೆಯ ಉದ್ದೇಶ. ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯ ರೈತರಿಗೆ ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ಒಡಿಶಾ, ಕೇರಳ ಹಾಗೂ ರಾಜ್ಯದ ಭದ್ರಾವತಿ, ಬೆಂಗಳೂರು, ಮೂಡಿಗೆರೆ, ಕಾರ್ಕಳ ಮುಂತಾದ ಪ್ರದೇಶಗಳಿಂದ ಮರಿ ಮೀನುಗಳನ್ನು ತರಿಸಿಕೊಳ್ಳಲಾಗುತ್ತಿದೆ.

ಮೀನು ಕೃಷಿ ಸುಲಭ ಹಾಗೂ ಕಡಿಮೆ ಖರ್ಚಿನಲ್ಲಿ ನಿರ್ವಹಿಸಬಹುದಾದ ಉದ್ಯಮ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೀನನ್ನು ಆಹಾರವಾಗಿ ಬಳಸುವವರು ಅಧಿಕವಿದ್ದರೂ ಒಳನಾಡು ಮೀನು ಕೃಷಿ ಮಾಡುವವರ ಸಂಖ್ಯೆ ಇಲ್ಲಿಯ ತನಕವೂ ಕಡಿಮೆ ಇತ್ತು. ಯೋಗ್ಯ ಕೆರೆಗಳ ಕೊರತೆ ಮತ್ತು ವೈಜ್ಞಾನಿಕ ಮೀನು ಕೃಷಿ ಕುರಿತು ನಿರೀಕ್ಷಿತ ಪ್ರಮಾಣದಲ್ಲಿ ಜನಜಾಗೃತಿ ಇಲ್ಲದಿರುವುದು ಮತ್ತು ಕರಾವಳಿಯಲ್ಲಿ ಯಥೇಚ್ಛ ಸಮುದ್ರ ಮೀನು ಲಭ್ಯವಿರುವುದರಿಂದ ಕರಾವಳಿ ಜನರು ಸ್ವಲ್ಪಮಟ್ಟಿನ ಉದಾಸೀನತೆ ತೋರಲು ಕಾರಣವಾಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಚಿತ್ರಣವೇ ಬದಲಾಗಿದೆ. ಅನೇಕ ಸಂದರ್ಭ ಕರಾವಳಿ ಜನರು ತಿನ್ನುವ ಮೀನಿಗೂ ಕಷ್ಟ ಪಡಬೇಕಾದ ಸ್ಥಿತಿ ಎದುರಾಗಿತ್ತು. ದಕ್ಷಿಣ ಕನ್ನಡ ಜಿಲ್ಲಾದ್ಯಂತ ನೀರು ನಿಲ್ಲುವ ತಗ್ಗು ಪ್ರದೇಶಗಳು, ಹಡಿಲು ಬಿಟ್ಟಿರುವ ಗದ್ದೆಗಳು ಸಾಕಷ್ಟು ಇವೆ. ಬಹಳಷ್ಟು ಕಿಂಡಿ ಅಣೆಕಟ್ಟುಗಳು, ಕೃಷಿ ಹೊಂಡಗಳಿವೆ. ಇವುಗಳನ್ನು ಕಡಿಮೆ ವೆಚ್ಚದಲ್ಲಿ ಕೃಷಿ ಕೊಳಗಳಾಗಿ ಪರಿವರ್ತಿಸಿಕೊಳ್ಳಬಹುದು.

ಎಲ್ಲ ತಾಲೂಕುಗಳಲ್ಲಿ ತಲಾ ಕನಿಷ್ಠ ಎರಡು ಅಥವಾ ಮೂರು ಮೀನು ಮರಿ ಪಾಲನಾ ಘಟಕಗಳನ್ನು ಸ್ಥಾಪಿಸಲು ಮಂಗಳೂರು ಕೃಷಿ ವಿಜ್ಞಾನ ಕೇಂದ್ರ ಸಿದ್ಧತೆ ನಡೆಸುತ್ತಿದೆ. ಅನೇಕ ರೈತರು ಸ್ವಯಂಪ್ರೇರಿತವಾಗಿ ಯೊಜನೆಗೆ ಕೈಜೋಡಿಸಲು ಮುಂದೆ ಬಂದಿದ್ದಾರೆ. ಜಿಲ್ಲೆಯಲ್ಲಿ ಎಷ್ಟು ಮಂದಿ ಒಳನಾಡು ಮೀನುಗಾರಿಕೆ ನಡೆಸುತ್ತಿದ್ದಾರೆ ಎಂಬ ಮಾಹಿತಿಯನ್ನೂ ಕಲೆ ಹಾಕಲಾಗುತ್ತದೆ. ಈ ವರ್ಷ ಕೆವಿಕೆಯಿಂದ 143 ರೈತರು ಮೀನು ಮರಿಗಳನ್ನು ಪಡೆದುಕೊಂಡಿದ್ದಾರೆ. ಡಾ.ಚೇತನ್ ಎನ್ ವಿಜ್ಞಾನಿ, ಕೆವಿಕೆ, ಮಂಗಳೂರು ಒಂಬತ್ತು ವರ್ಷಗಳಿಂದ ಮೀನು ಕೃಷಿ ಮಾಡುತ್ತಿದ್ದೇನೆ. ವ್ಯವಸ್ಥಿತವಾಗಿ ನಿರ್ವಹಿಸಿದರೆ ಲಾಭ ಖಂಡಿತ. ನಾವು ವಾಟ್ಸಾೃಪ್ ಮತ್ತಿತರ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರ ಮಾಡಿ ಗ್ರಾಹಕರಿಗೆ ನೇರವಾಗಿ ಒಳ್ಳೆಯ ದರಕ್ಕೆ ಮೀನು ಮಾರಾಟ ಮಾಡುತ್ತಿದ್ದೇವೆ. ಮೀನು ಮರಿಗಳ ಪಾಲನಾ ಕೇಂದ್ರ ಸ್ಥಾಪನೆಯಿಂದ ಸಕಾಲದಲ್ಲಿ ಒಳ್ಳೆಯ ದರಕ್ಕೆ ಗುಣಮಟ್ಟದ ಮೀನು ಮರಿಗಳು ರೈತರಿಗೆ ಲಭ್ಯವಾ ಗಬಹುದು. ರಿಜ್ವಾನ್ ಮೀನು ಕೃಷಿಕರು, ಬೆಳುವಾಯಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net