ವಿರಾಟ್​, ಜಡೇಜಾ ಬಳಿಕ Rohit ಶರ್ಮರನ್ನು ಟಾರ್ಗೆಟ್​ ಮಾಡಿದ ಆಸೀಸ್​ ಮಾಧ್ಯಮಗಳು; Crybaby ಪೋಸ್ಟ್​ ವೈರಲ್​

Rohit Sharma
Published on

ಮೆಲ್ಬೋರ್ನ್​​: ಬಾರ್ಡರ್​-ಗವಾಸ್ಕರ್​ ಟ್ರೋಫಿ (Border-Gavaskar Trophy) ಟೆಸ್ಟ್​ ಸರಣಿಯ ನಾಲ್ಕನೇ ಪಂದ್ಯವು ಮೆಲ್ಬೋರ್ನ್​ನಲ್ಲಿ ನಡೆಯುತ್ತಿದ್ದು, ಆತಿಥೇಯರು ಪ್ರವಾಸಿ ತಂಡಕ್ಕೆ 340ರನ್​ಗಳ ಗುರಿಯನ್ನು ನೀಡಿದ್ದಾರೆ.  ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫಿನಾಲೆ (World Test Championship Finale) ದೃಷ್ಠಿಯಲ್ಲಿ ಈ ಪಂದ್ಯ ಉಭಯ ತಂಡಗಳಿಗೂ ಮಹತ್ವದಾಗಿದ್ದು, ಗೆಲ್ಲುವ ನಿಟ್ಟಿನಲ್ಲಿ ಉಭಯ ತಂಡಗಳು ಸೆಣಸಾಡುತ್ತಿವೆ.

ಭಾರತ (Team India) ಹಾಗೂ ಆಸ್ಟ್ರೇಲಿಯಾ (Australia) ನಡುವಿನ ಟೆಸ್ಟ್​​ ಸರಣಿ ಆರಂಭವಾದಾಗಿನಿಂದಲೂ ಸ್ಲೆಡ್ಜಿಂಗ್​ ನಡೆಯುತ್ತಿರುವುದನ್ನು ನಾವು ನೋಡಿದ್ದೇವೆ. ಮೈದಾನದ ಹೊರಗೆ ಹಾಗೂ ಒಳಗೆ ಆಸ್ಟ್ರೇಲಿಯಾ ತಂಡದ ಆಟಗಾರರು ಟೀಮ್​ ಇಂಡಿಯಾದವರನ್ನು ಗುರಿಯಾಗಿಸಿ ಸ್ಲೆಡ್ಜಿಂಗ್​​ ಮಾಡುವುದನ್ನು ನಾವು ಗಮನಿಸಿದ್ದೇವೆ. ಇದೀಗ ಈ ತಂತ್ರವನ್ನು ಆಸ್ಟ್ರೇಲಿಯಾದ ಮಾಧ್ಯಮಗಳು ಅನುಸರಿಸುತ್ತಿದ್ದು, ಭಾರತೀಯ ಆಟಗಾರರ ಆತ್ಮವಿಶ್ವಾಸವನ್ನು ಕುಗ್ಗಿಸುವ ಕೆಲಸವನ್ನು ಮಾಡುತ್ತಿವೆ. ಇದಕ್ಕೆ ಸಂಬಂಧಿಸಿದ ಪೋಸ್ಟ್​ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಮೊದಲಿಗೆ ವಿರಾಟ್​ ಕೊಹ್ಲಿ, ಆ ಬಳಿಕ ರವೀಂದ್ರ ಜಡೇಜಾರನ್ನು ಟಾರ್ಗೆಟ್​ ಮಾಡಿದ್ದ ಆಸ್ಟ್ರೇಲಿಯಾ ಮಾಧ್ಯಮಗಳು ಇದೀಗ ಟೀಮ್​ ಇಂಡಿಯಾ ನಾಯಕ ರೋಹಿತ್​ ಶರ್ಮರನ್ನು (Rohit Sharma) ಗುರಿಯಾಗಿಸಿಕೊಂಡು ಪೋಸ್ಟ್​​ ಮಾಡುತ್ತಿದ್ದು, ಹಿಟ್​ಮ್ಯಾನ್​ನ ಫೋಟೋಗಳನ್ನು ಅವಹೇಳನಕಾರಿಯಾಗಿ ಎಡಿಟ್​ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದಾರೆ.

ಮೊದಲಿಗೆ ವಿರಾಟ್​ ಕೊಹ್ಲಿಯನ್ನು ಹಾಡಿ ಹೊಗಳಿದ್ದ ಆಸ್ಟ್ರೇಲಿಯಾದ ಮಾಧ್ಯಮಗಳು ಆ ಬಳಿಕ ಸ್ಯಾಮ್​ ಕೊನ್​ಸ್ಟಾಸ್ ಜತೆಗಿನ ಭುಜಬಲದ ಕಾಳಗದ ವಿಚಾರವಾಗಿ ನಿಂದಿಸಲು ಶುರು ಮಾಡಿದವು. ಅದು ಎಷ್ಟಮಟ್ಟಿಗೆ ಎಂದರೆ ಆಸೀಸ್ ಮಾಧ್ಯಮಗಳು ವಿರಾಟ್‌ಗೆ ಜೋಕರ್ ಎಂಬ ಪದವನ್ನು ಸಹ ಬಳಸಿದ್ದು, ಅವರ ದಿವಂಗತ ತಂದೆಯವರನ್ನು ಸಹ ಗೇಲಿ ಮಾಡಿ ಸರಣಿ ಪೋಸ್ಟ್​ಗಳನ್ನು ಮಾಡಿವೆ. ಇದೀಗ ರೋಹಿತ್​ ಶರ್ಮರ (Rohit Sharma) ಫೋಟೋವನ್ನು ಟ್ಯಾಂಪರ್​ ಮಾಡಿರುವ ಆಸೀಸ್​ ಮಾಧ್ಯಮಗಳು ಕ್ಯಾಪ್ಟನ್ ಕ್ರೈ ಬೇಬಿ ಎಂಬ ಅಡಿಬರಹವನ್ನು ನೀಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿವೆ.

ಇದಲ್ಲದೆ ಸ್ಯಾಮ್​ ಕೊನ್​ಸ್ಟಾಸ್ ಅವರ ಫೋಟೋ ಬಳಿ ವಿರಾಟ್​ ನಾನು ನಿನ್ನ ತಂದೆ ಎಂಬ ಪೋಸ್ಟ್​ ಸಹ ಹಂಚಿಕೊಳ್ಳಲಾಗಿತ್ತು. ಈ ವಿಚಾರವಾಗಿ ಮಾಜಿ ಕ್ರಿಕೆಟಿಗರಾದ ಸುನಿಲ್​ ಗವಾಸ್ಕರ್ ಹಾಗೂ ಇರ್ಫಾನ್​ ಪಠಾಣ್​ ಆಸ್ಟ್ರೇಲಿಯಾದ ಮಾಧ್ಯಮಗಳ ನಡೆಗೆ ಕಿಡಿಕಾರಿದ್ದರು. ಇದೀಗ ರೋಹಿತ್​ರನ್ನು ಟಾರ್ಗೆಟ್​ ಮಾಡಿರುವ ಆಸೀಸ್​ ಮಾಧ್ಯಮಗಳು ಒಂದಲ್ಲ ಒಂದು ಕಾರಣಕ್ಕೆ ಭಾರತೀಯರ ಕೆಂಗಣ್ಣಿಗೆ ಗುರಿಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇದು ಯಾವ ಹಂತ ತಲುಪಲಿದೆ ಎಂದು ಕಾದು ನೋಡಬೇಕಿದೆ.

ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಮೆಲ್ಬೋರ್ನ್ ಟೆಸ್ಟ್ ಪಂದ್ಯದಲ್ಲಿ ಇಲ್ಲಿಯವರೆಗೆ 4 ದಿನಗಳ ಆಟ ಪೂರ್ಣಗೊಂಡಿದ್ದು, ಐದನೇ ದಿನಕ್ಕೆ ಕಾಲಿರಿಸಿದೆ. ಭಾರತಕ್ಕೆ 340 ರನ್​ಗಳ ಗುರಿಯನ್ನು ನೀಡಲಾಗಿದ್ದು, ಪಂದ್ಯದ ಕೊನೆಯ ದಿನವಾದ ಇಂದು ಅತ್ಯಂತ ರೋಚಕತೆಯಿಂದ ಕೂಡಿದೆ. ಅಂತಿಮ ವಿಜಯಲಕ್ಷ್ಮಿ ಯಾರ ಪಾಲಾಗಳಿದ್ದಾಳೆ ಎಂಬುದನ್ನು ಕಾದುನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net