

ಹೈದರಾಬಾದ್: ರಾಜಮೌಳಿ ನಿರ್ದೇಶನದ 'ಆರ್ಆರ್ಆರ್' ಚಿತ್ರದ ಒಂದು ಹಾಡಿನ ಚಿತ್ರೀಕರಣ ಮುಗಿದಿದ್ದು, ಇನ್ನೊಂದು ಹಾಡು ಮಾತ್ರ ಬಾಕಿ ಇದೆ. ಅದು ಸಹ ಇನ್ನೆರೆಡು ವಾರಗಳ ಅಂತರದಲ್ಲಿ ಮುಗಿಯುವ ಸಾಧ್ಯತೆ ಇದೆ. ಈ ಮಧ್ಯೆ, 'ಆರ್ಆರ್ಆರ್' ಚಿತ್ರದ ಮೊದಲ ಹಾಡು ಆಗಸ್ಟ್ 01ರಂದು ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಬೆಳಿಗ್ಗೆ 11ಕ್ಕೆ ಯೂಟ್ಯೂಬ್ನ ಟಿ-ಸೀರೀಸ್ ಮತ್ತು ಲಹರಿ ಚಾನಲ್ಗಳಲ್ಲಿ ಹಾಡು ಬಿಡುಗಡೆಯಾಗಲಿದೆ.
ಇದನ್ನೂ ಓದಿ: ಕಾಜೋಲ್ ಹಳೆ ಫೋಟೋಗೆ ಫಿದಾ ಆದ ಅಭಿಮಾನಿಗಳು..
ಇಂದು ಬೆಳಿಗ್ಗೆ ಸೋಷಿಯಲ್ ಮೀಡಿಯಾ ಮೂಲಕ ಹಾಡು ಬಿಡುಗಡೆಯ ವಿಷಯವನ್ನು ಸ್ವತಃ ಚಿತ್ರತಂಡ ದೃಢಪಡಿಸಿದೆ. ಅಷ್ಟೇ ಅಲ್ಲ, ಹೊಸದೊಂದು ಪೋಸ್ಟರ್ ಸಹ ಬಿಡುಗಡೆ ಮಾಡಿದೆ. ವಿಶೇಷವೆಂದರೆ, ಈ ಹಾಡನ್ನು ಐವರು ಗಾಯಕರು ಹಾಡಿದ್ದಾರೆ. ಅಮಿತ್ ತ್ರಿವೇದಿ, ಅನಿರುದ್ಧ್ ರವಿಚಂದರ್, ಯಾಝಿನ್ ನಾಜಿರ್, ಹೇಮಚಂದ್ರ ಮತ್ತು ವಿಜಯ್ ಯೇಸುದಾಸ್ ಈ ಹಾಡನ್ನು ಹಾಡಿದ್ದು, ಎಂ.ಎಂ. ಕೀರವಾಣಿ ಸಂಗೀತ ಸಂಯೋಜಿಸಿದ್ದಾರೆ. ಈ ಆರು ಜನ ಇರುವ ಒಂದು ಫೋಟೋ ಶೇರ್ ಮಾಡಲಾಗಿದ್ದು, ಹಾಡು ಹೇಗಿರಬಹುದು ಎಂಬ ಕುತೂಹಲ ಹೆಚ್ಚಾಗಿದೆ.
ಜ್ಯೂನಿಯರ್ ಎನ್ಟಿಆರ್ ಮತ್ತು ರಾಮ್ಚರಣ್ ತೇಜ ಮೊದಲ ಬಾರಿಗೆ ಜತೆಯಾಗಿ ನಟಿಸುತ್ತಿರುವ ಈ ಚಿತ್ರದ ಚಿತ್ರೀಕರಣ ಎರಡು ವರ್ಷಗಳಿಂದ ನಡೆಯುತ್ತಲೇ ಇದೆ. ಕಳೆದ ವರ್ಷ ಲಾಕ್ಡೌನ್ನಿಂದ ಹಲವು ತಿಂಗಳುಗಳ ಬ್ರೇಕ್ ನೀಡಲಾಗಿತ್ತು. ಲಾಕ್ಡೌನ್ ಮುಗಿದ ನಂತರ ಮತ್ತೆ ಚಿತ್ರೀಕರಣ ಪ್ರಾರಂಭಿಸಲಾಗಿತ್ತು, ಇನ್ನೇನು ಈ ಬಾರಿ ಚಿತ್ರೀಕರಣ ಮುಗಿದೇ ಹೋಯಿತು ಎನ್ನುವಷ್ಟರಲ್ಲಿ ಮತ್ತೆ ಲಾಕ್ಡೌನ್ ಶುರುವಾಯಿತು. ಈಗ ಮತ್ತೆ ಚಿತ್ರೀಕರಣ ಪ್ರಾರಂಭವಾಗಿದ್ದು, ಮಾತಿನ ಭಾಗದ ಚಿತ್ರೀಕರಣ ಮುಗಿದಿದೆ.
ಈಗಾಗಲೇ, ಚಿತ್ರದ ಇಬ್ಬರೂ ಹೀರೋಗಳು ಎರಡು ಭಾಷೆಗಳ ಡಬ್ಬಿಂಗ್ ಮುಗಿಸಿದ್ದು, ಸದ್ಯದಲ್ಲೇ ಮಿಕ್ಕ ಭಾಷೆಗಳ ಡಬ್ಬಿಂಗ್ ಮುಗಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಕ್ಟೋಬರ್ 13ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿರುವ ಈ ಚಿತ್ರದಲ್ಲಿ ಜ್ಯೂನಿಯರ್ ಎನ್ಟಿಆರ್ ಮತ್ತು ರಾಮ್ಚರಣ್ ತೇಜ ಜತೆಗೆ ಆಲಿಯಾ ಭಟ್, ಸಮುದ್ರಕಣಿ, ಅಜಯ್ ದೇವಗನ್ ಮುಂತಾದವರು ನಟಿಸಿದ್ದಾರೆ.