

ಬೆಂಗಳೂರು: ಪುನೀತ್ ರಾಜಕುಮಾರ್ ಅಭಿನಯದ ಕೊನೆಯ ಚಿತ್ರವಾದ 'ಗಂಧದ ಗುಡಿ' ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಅದ್ಭುತ ಸ್ಪಂದನೆ ಸಿಕ್ಕಿದೆ. ಚಿತ್ರಕ್ಕೆ ಯಾವ ರೀತಿ ಸ್ಪಂದನೆ ಸಿಕ್ಕಿದೆ, ಜನರು ಹೇಗೆ ಪ್ರತಿಕ್ರಿಯಿಸಿದ್ದಾರೆ ಎಂಬ ಸಣ್ಣ ವಿಡಿಯೋವಂದನ್ನು ಇದೀಗ ಪಿಆರ್ಕೆ ಪ್ರೊಡಕ್ಷನ್ಸ್ ಬಿಡುಗಡೆ ಮಾಡಿದೆ.
ಇದನ್ನೂ ಓದಿ: ತೆರೆ ಮೇಲೆ ಪುನೀತ್ ನೋಡಿ ಕಣ್ಣೀರಿಟ್ಟ ಅಭಿಮಾನಿಗಳು
'ಗಂಧದ ಗುಡಿ' ಚಿತ್ರವು ಶುಕ್ರವಾರ ರಾಜ್ಯಾದ್ಯಂತ 223ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ದೊಡ್ಡ ಬಿಡುಗಡೆ ಕಂಡಿದ್ದು, ಬೆಳಿಗ್ಗೆಯಿಂದಲೇ ಚಿತ್ರವು ಎಲ್ಲ ಕಡೆಗಳಲ್ಲಿ ಹೌಸ್ಫುಲ್ ಆಗಿವೆ. ಬೆಂಗಳೂರಿನಲ್ಲೇ ಗುರುವಾರ ಸಂಜೆಯಿಂದ ಹಲವು ಪ್ರೀಮಿಯರ್ ಶೋಗಳು ನಡೆದಿದ್ದು, ಈ ಪ್ರೀಮಿಯರ್ ಶೋಗಳಲ್ಲಿ ಸುಧಾ ಮೂರ್ತಿ, ರಮ್ಯಾ, ರಿಷಭ್ ಶೆಟ್ಟಿ, ಗುರುಕಿರಣ್ ಸೇರಿದಂತೆ ಹಲವರು ಚಿತ್ರವನ್ನು ನೋಡಿ ಮೆಚ್ಚಿಕೊಂಡಿದ್ದಾರೆ.
ಇನ್ನು, ಶುಕ್ರವಾರ ಬೆಳಿಗ್ಗೆ ಬೆಂಗಳೂರಿನ ನರ್ತಕಿ ಚಿತ್ರಮಂದಿರದಲ್ಲಿ ದೊಡ್ಡ ಮಟ್ಟದಲ್ಲಿ ಸಂಭ್ರಮಾಚರಣೆ ನಡೆದಿದೆ. ಡಾ. ರಾಜ್ ಕುಟುಂಬದವರು ಚಿತ್ರವನ್ನು ವೀಕ್ಷಿಸಿದ್ದಾರೆ. ರಾಘವೇಂದ್ರ ರಾಜಕುಮಾರ್ ಅವರು ಈ ಹಿಂದೆಯೇ ತಾವು ಜನರ ಜತೆಗೆ ಕುಳಿತು ಚಿತ್ರ ನೋಡುವುದಾಗಿ ಹೇಳಿದ್ದರು. ಅದರಂತೆ, ಅವರು ಚಿತ್ರ ನೋಡಿ ಕಣ್ತುಂಬಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅವರು, 'ಈ ಸಿನಿಮಾ ನೋಡಿದ ಮೇಲೆ ಪುನೀತ್ ಅಭಿನಯದ ಯಾವ ಸಿನಿಮಾಗಳು ನೆನೆಪು ಬರುತ್ತಿಲ್ಲ. ಮುಂಚೆ 'ಗಂಧದ ಗುಡಿ' ಅಂದರೆ ಡಾ. ರಾಜಕುಮಾರ್ ಚಿತ್ರ ಎನ್ನುತ್ತಿದ್ದರು. ಈಗ 'ಗಂಧದ ಗುಡಿ' ಎಂದರೆ ಪುನೀತ್ ಅನ್ನಬೇಕು ಎನ್ನುವ ರೀತಿಯಲ್ಲಿದೆ. ಈ ಸಿನಿಮಾ ನನ್ನ ತಮ್ಮನ ಜೊತೆ ಕಾಡಿಗೆ ಹೋಗಿ ಬಂದಂತಿದೆ' ಎಂದು ರಾಘವೇಂದ್ರ ರಾಜಕುಮಾರ್ ಹೇಳಿದ್ದಾರೆ.
ಬರೀ ರಾಜ್ ಕುಟುಂಬದವರಷ್ಟೇ ಅಲ್ಲ, '777 ಚಾರ್ಲಿ' ಖ್ಯಾತಿಯ ನಟಿ ಸಂಗೀತಾ ಶೃಂಗೇರಿ ಇಂದು ನರ್ತಕಿ ಚಿತ್ರಮಂದಿರದಲ್ಲಿ ಮೂರು ಬಾರಿ ಚಿತ್ರ ವೀಕ್ಷಿಸಿದ್ದಾರೆ. ಇದಲ್ಲದೆ ಇನ್ನಷ್ಟು ಸೆಲೆಬ್ರಿಟಿಗಳು ಚಿತ್ರ ನೋಡಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.