ಚಲಿಸುವ ರೈಲಿನ ಮೇಲೆ ಗುಂಡು ಹಾರಿಸಿದ ಪ್ರಕರಣ, ಮುಸ್ಲಿಂ ಒಕ್ಕೂಟದಿಂದ ಪ್ರತಿಭಟನೆ

Screenshot_2023-08-04-19-31-14-97.jpg
Published on

ಬೆಳಗಾವಿ: ಮಹಾರಾಷ್ಟ್ರ ಪಾಲ್ಘರ್ ರೈಲು ನಿಲ್ದಾಣದ ಬಳಿ ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್‌) ಪೇದೆ ಸೋಮವಾರ (ಜು.31) ಚಲಿಸುವ ರೈಲಿನ ಮೇಲೆ ಗುಂಡು ಹಾರಿಸಿ ರೈಲಿನಲ್ಲಿದ್ದ 4 ಜನರನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಖಂಡಿಸಿ ಮುಸ್ಲಿಂ ಒಕ್ಕೂಟದಿಂದ ಶುಕ್ರವಾರ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ಜೈಪುರ-ಮುಂಬೈ ಸೆಂಟ್ರಲ್‌ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಮೇಲೆ ಗುಂಡು ಹಾರಿಸಿದ್ದು, ಮೃತರಲ್ಲಿ ಸಹಾಯಕ ಸಬ್ ಇನ್‌ಸ್ಪೆಕ್ಟರ್‌ (ಎಎಸ್ಐ) ಮತ್ತು ಮೂವರು ಪ್ರಯಾಣಿಕರು ಸೇರಿದ್ದಾರೆ. ಉದ್ದೇಶಪೂರ್ವಕವಾಗಿ ಆದಿವಾಸಿ, ಮುಸ್ಲಿಮರನ್ನು ಗುರಿಯಾಗಿಸಿ ಸರ್ವಿಸ್ ಗನ್ ನಿಂದ ಗುಂಡು ಹಾರಿಸಿ ಹತ್ಯೆ ಮಾಡಿದ್ದು, ಬಳಿಕ ಬಿಜೆಪಿ ಮತ್ತು ಆರ್.ಎಸ್.ಎಸ್. ಪರ ಘೋಷಣೆ ಕೂಗಿದ್ದಾನೆ. ಈಗಾಗಲೇ ಬಂಧನವಾಗಿರುವ ಆರೋಪಿ ಚೇತನ್ ಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಅಲ್ಲದೇ ಮಣಿಪುರದ ಆದಿವಾಸಿ ಕುಕಿ ಸಮಾಜದ ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ನಡೆಸಲಾಗಿದೆ. ಇನ್ನೂ ಹರಿಯಾಣದ ಮೇವಾತ್ ನಲ್ಲಿ ಮುಸ್ಲಿಮರ ಮನೆಗಳ ಮೇಲೆ ಕಲ್ಲು ತೂರಾಟ ನಡೆದಿದ್ದು, ಬೆಂಕಿ ಹಚ್ಚಿ ಲೂಟಿ ಮಾಡಲಾಗಿದೆ. ಈ ಎಲ್ಲ ಘಟನೆಗಳನ್ನು ಗಮನಿಸಿದರೆ ದೇಶದಲ್ಲಿ ಮುಸ್ಲಿಮ, ದಲಿತ ಮತ್ತು ಆದಿವಾಸಿ ಸಮಾಜಗಳನ್ನು ಗುರಿಯಾಗಿಸಿ  ದಾಳಿ ಮಾಡುತ್ತಿರುವುದು ಸ್ಪಷ್ಟವಾಗಿದೆ. ತಕ್ಷಣವೇ ರಾಷ್ಟ್ರಪತಿಗಳು ಮಧ್ಯಪ್ರವೇಶಿಸಿ ಈ ರೀತಿ ಶೋಷಣೆ, ದಬ್ಬಾಳಿಕೆ ಮಾಡುತ್ತಿರುವ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಿ, ದೇಶದಲ್ಲಿ ಶಾಂತಿ ನೆಲೆಸುವಂತೆ ಮಾಡಬೇಕೆಂದು ಆಗ್ರಹಿಸಿ ಜಿಲ್ಲಾಡಳಿತ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.
ತಬರೇಜ್ ಬಡೇಬಾಯಿ, ಇಮಾಮಕಾಶಿಂ ಬಾಗೇವಾಡಿ, ಫಜಲ್ ಪಠಾಣ, ಮಕಸೂದ್ ಮಕಾನದಾರ್ ಸೇರಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net