

ಹರಿಪ್ರಸಾದ್ ನಂದಳಿಕೆ ಕಾರ್ಕಳ
ಬೇಸಿಗೆಯಲ್ಲಿ ಅಗ್ನಿ ಅವಘಡಗಳು ಹೆಚ್ಚಾಗುವುದು ಸರ್ವೇ ಸಾಮಾನ್ಯ. ಬೆಂಕಿ ಅವಘಡದಿಂದಾಗಿ ಕಾಡು ಪ್ರದೇಶಗಳು ಗಿಡಮರಗಳು ನಾಶವಾಗುತ್ತಿವಲೆ. ಆದರೆ ಬೆಂಕಿ ನಂದಿಸುವ ಕಾರ್ಯ ಮಾಡುವ ಅಗ್ನಿಶಾಮಕದಲ್ಲಿ ಸರಿಯಾದ ವಾಹನದ ವ್ಯವಸ್ಥೆ ಇಲ್ಲದೆ ಸಂಕಷ್ಟ ಅನುಭವಿಸುವಂತಾಗಿದೆ.
ಉಡುಪಿ ಜಿಲ್ಲೆಯಲ್ಲಿ ಒಟ್ಟು 7 ತಾಲೂಕುಗಳಿದ್ದರೂ ಉಡುಪಿ, ಮಲ್ಪೆ, ಕಾರ್ಕಳ, ಕುಂದಾಪುರ ಹಾಗೂ ಬೈಂದೂರಿನಲ್ಲಿ ಮಾತ್ರ ಅಗ್ನಿಶಾಮಕ ಠಾಣೆಗಳಿವೆ. ಹೆಬ್ರಿ, ಬ್ರಹ್ಮಾವರ, ಕಾಪು ತಾಲೂಕುಗಳಲ್ಲಿ ಅಗ್ನಿಶಾಮಕ ಠಾಣೆಗಳೇ ಇಲ್ಲ. ಇರುವ ಠಾಣೆಗಳಲ್ಲೂ ತಲಾ ಒಂದೊಂದು ವಾಹನಗಳಿದ್ದು, ಇದನ್ನು ಬಳಸಿಕೊಂಡು ತುರ್ತು ಸಂದರ್ಭದಲ್ಲಿ ಬೆಂಕಿ ನಂದಿಸುವ ಕೆಲಸವನ್ನು ಸಿಬ್ಬಂದಿ ಮಾಡಬೇಕಾದ ಅನಿವಾರ್ಯತೆ ಇದೆ.
ಕಾರ್ಕಳ ತಾಲೂಕಿನಲ್ಲಿ ಒಟ್ಟು ಮೂರು ಅಗ್ನಿಶಾಮಕ ವಾಹನಗಳಿವೆ. ಆದರೆ ಎರಡು ವಾಹನಗಳು 35 ವರ್ಷ ಹಳೆಯದಾಗಿದೆ. ಈ ವಾಹನಗಳ ನೋಂದಣಿ ಪತ್ರ ರದ್ದಾಗಿದ್ದು, ಸುಪ್ರಿಂಕೋರ್ಟ್ ಆದೇಶದ ಪ್ರಕಾರ ರಸ್ತೆಗಿಳಿಸುವಂತಿಲ್ಲ. ಪ್ರಸ್ತುತ ಠಾಣೆಯಲ್ಲಿ 4,500 ವಂಡರ್ ಸಾಮರ್ಥ್ಯದ ಬೆಂಕಿ ನಂದಿಸುವ ವಾಹನವಿದೆ. ಈ ಒಂದು ವಾಹನ ಇಡೀ ತಾಲೂಕಿನಲ್ಲಿ ಎಲ್ಲೇ ಬೆಂಕಿ ಅವಘಡ ಸಂಭವಿಸಿದರೆ ಅಲ್ಲಿಗೆ ತೆರಳಬೇಕಾಗಿದೆ. ಕೆಲವೊಂದು ಬಾರಿ ಏಕಕಾಲಕ್ಕೆ ಎರಡು ಕಡೆ ಅವಘಡ ನಡೆದಾಗ ಸಿಬ್ಬಂದಿ ಸಂಕಟ ಎದುರಿಸುವಂತಾಗಿದೆ.
ಕಾರ್ಕಳ ತಾಲೂಕಿನಲ್ಲಿ ಪ್ರತಿ ವರ್ಷ 250ಕ್ಕೂ ಅಧಿಕ ಹೆಕ್ಟೆರ್ ಪ್ರದೇಶಕ್ಕೆ ಬೆಂಕಿ ಅವಘಡಗಳು ನಡೆಯುತ್ತಿದ್ದು, ಈ ವರ್ಷದ ಜನವರಿ ತಿಂಗಳ ಅಂತ್ಯದವರೆಗೆ ಒಟ್ಟು 12 ಅಗ್ನಿ ಅವಘಡಗಳು ಸಂಭವಿಸಿವೆ. ಮಾರ್ಚ್, ಏಪ್ರಿಲ್‌ನಲ್ಲಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿದ್ದು, ಇರುವ ಸಿಬ್ಬಂದಿ ಹಾಗೂ ವಾಹನ ಬಳಸಿಕೊಂಡು ನಂದಿಸುವ ಕಾರ್ಯಕ್ಕೆ ಅಗ್ನಿಶಾಮಕ ದಳ ಸಜ್ಜಾಗಿದೆ.
ಮೂರು ತಾಲೂಕಿನ ಜವಾಬ್ದಾರಿ: ಕಾರ್ಕಳ ತಾಲೂಕಿನ ಅಗ್ನಿಶಾಮಕ ದಳದಲ್ಲಿ ಪ್ರಸ್ತುತ ಒಂದು ಅಗ್ನಿಶಾಮಕ ವಾಹನವಿದ್ದು, ಹಗಲು ರಾತ್ರಿ ಪಾಳಿಯಲ್ಲಿ ಒಟ್ಟು 16 ಜನ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅದರಲ್ಲೂ 2023-24ರಲ್ಲಿ ಒಟ್ಟು 428 ಅಗ್ನಿ ಕರೆಗಳು ಬಂದಿವೆ. ಈ ಪೈಕಿ ಕಾಪು ಹಾಗೂ ಹೆಬ್ರಿ ತಾಲೂಕಿನಲ್ಲಿ ಸಂಬಂಧಿಸಿದ ಕರೆಗಳು ಹೆಚ್ಚಿನ ಪ್ರಮಾಣದಲ್ಲಿವೆ. ಕಾರ್ಕಳ ತಾಲೂಕಿನಲ್ಲಿರುವ ಒಂದು ವಾಹನವೇ ಸಮೀಪದ ಹೆಬ್ರಿ ಹಾಗೂ ಕಾಪು ತಾಲೂಕಿಗೂ ತೆರಳುವ ಅನಿವಾರ್ಯ ಸ್ಥಿತಿ ಇಲ್ಲಿದೆ. ಹೆಬ್ರಿ ಹಾಗೂ ಕಾರ್ಕಳದಲ್ಲಿ ಏಕಕಾಲದಲ್ಲಿ ಅಗ್ನಿ ಅವಘಡಗಳು ಸಂಭವಿದರೆ ಅಸಹಾಯಕ ಪರಿಸ್ಥಿತಿ ಎದುರಾಗಲಿದೆ. ಈಗಾಗಲೇ ಹೆಬ್ರಿ ತಾಲೂಕಿನ ಶೇಡಿಮನೆ, ಆಗುಂಬೆ, ಮಡಾಮಕ್ಕಿ, ಶಿವಪುರ, ಕಾರ್ಕಳ ತಾಲೂಕಿನ ನಾರಾವಿ, ಇನ್ನಾ, ಹಿರಿಯಡ್ಕ, ಕುದುರೆಮುಖ ರಸ್ತೆಯ ಎಸ್.ಕೆ. ಬಾರ್ಡರ್, ಕಾಪು ತಾಲೂಕಿನ ಶಿರ್ವ, ಮುದರಂಗಡಿ, ಪಡುಬಿದ್ರಿ ಸೇರಿದಂತೆ ಕಾರ್ಕಳದಿಂದ ಒಟ್ಟು 60 ಕಿ.ಮೀ. ದೂರದವರೆಗೆ ಕಾರ್ಯಾಚರಣೆ ನಡೆಸುತ್ತಿದೆ. ಹೀಗಾಗಿ ಕಾಪು, ಬ್ರಹ್ಮಾವರ, ಹೆಬ್ರಿ ತಾಲೂಕುಗಳಲ್ಲಿ ಪ್ರತ್ಯೇಕ ಅಗ್ನಿಶಾಮಕ ಠಾಣೆಗಳು ನಿರ್ಮಾಣ ಮಾಡಬೇಕೆಂಬುದು ಸಾರ್ವಜನಿಕರ ಆಗ್ರಹ.
ಕಾರ್ಕಳ ಅಗ್ನಿಶಾಮಕ ಠಾಣೆಯಲ್ಲಿ ಈಗಿರುವ ಅಗ್ನಿಶಾಮಕ ವಾಹನ ಮುಂದಿನ ನಾಲ್ಕು ವರ್ಷಗಳಲ್ಲಿ ನೋಂದಣಿ ಕೊನೆಗೊಳ್ಳಲಿದೆ. ಬಳಿಕ ಈ ವಾಹನವೂ ಮೂಲೆ ಸೇರುವುದರಲ್ಲಿ ಯಾವುದೇ ಸಂದೇಹವಿಲ್ಲ. ಹೀಗಾಗಿ ಪ್ರತಿ ತಾಲೂಕು ಕೇಂದ್ರಕ್ಕೆ ಹೊಸ ಅಗ್ನಿಶಾಮಕ ವಾಹನ ಹಾಗೂ ಕಾರ್ಕಳಕ್ಕೆ ಹೊಸ ವಾಹನ ನೀಡುವಲ್ಲಿ ಸರ್ಕಾರ ಮನಸ್ಸು ಮಾಡಬೇಕಾಗಿದೆ. ಅದರಲ್ಲೂ ಎರಡು ಅಗ್ನಿಶಾಮಕ ವಾಹನಗಳು ನೀಡಿದರೆ ಏಕಕಾಲದಲ್ಲಿ ಎರಡು ಅಗ್ನಿ ಅನಾಹುತ ತಡೆಯಲು ಸಹಕಾರಿಯಾಗಲಿದೆ.
ಇರುವ ಒಂದು ವಾಹನ ಬಳಸಿಕೊಂಡು ಮೂರು ತಾಲೂಕು ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವುದು ಕಷ್ಟ. ಕೆಲವೊಂದು ಬಾರಿ ಒಂದೇ ಸಮಯದಲ್ಲಿ ಎರಡು ಕಡೆಗಳಲ್ಲಿ ಅಗ್ನಿ ಅವಘಡ ನಡೆದಾಗ ಸಮಸ್ಯೆಯಾಗುತ್ತದೆ. ಹೀಗಾಗಿ ಕಾರ್ಕಳ ಠಾಣೆಗೆ ಎರಡು ವಾಹನವನ್ನು ನೀಡುವ ಅಗತ್ಯವಿದೆ. ಇಲ್ಲವೇ ಹೆಬ್ರಿ ಹಾಗೂ ಕಾಪುವಿಗೆ ಅಗ್ನಿಶಾಮಕ ಠಾಣೆ ತೆರೆಯುವಲ್ಲಿ ಸರ್ಕಾರ ಮನಸ್ಸು ಮಾಡಬೇಕಿದೆ. ಸುಪ್ರೇಶ್ ಕುಲಾಲ್, ಕಾರ್ಕಳ ನಾಗರಿಕರು ಕಾಪು, ಹೆಬ್ರಿ ಹಾಗೂ ಬ್ರಹ್ಮಾವರ ತಾಲೂಕು ವ್ಯಾಪ್ತಿಯಲ್ಲಿ ಅಗ್ನಿಶಾಮಕ ಠಾಣೆ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಸದ್ಯದಲ್ಲೇ ಒಪ್ಪಿಗೆ ಸಿಗುವ ಸಾಧ್ಯತೆಯಿದೆ. ಡಾ.ಕೆ.ವಿದ್ಯಾಕುಮಾರಿ, ಜಿಲ್ಲಾಧಿಕಾರಿ, ಉಡುಪಿ