

School Fire: ಅರುಣಾಚಲ ಪ್ರದೇಶದ ಶಿ-ಯೋಮಿ ಜಿಲ್ಲೆಯ ಸರ್ಕಾರಿ ವಸತಿ ಯೊಂದರಲ್ಲಿ ಅಗ್ನಿಅವಘಡ ಸಂಭವಿಸಿದೆ. ಘಟನೆಯಲ್ಲಿ 3ನೇ ತರಗತಿಯ ಓರ್ವ ವಿದ್ಯಾರ್ಥಿನಿ ಸಜೀವ ದಹನಗೊಂಡಿದ್ದು, ಮೂವರಿಗೆ ಗಾಯಗಳಾಗಿವೆ ಎಂದು ಭಾನುವಾರ (ಆಗಸ್ಟ್ 24) ವರದಿಯಾಗಿದೆ.
ಈ ಕುರಿತು ಮಾತನಾಡಿರು ಶಿ-ಯೋಮಿ ಎಸ್ಪಿ ಎಸ್‌ಕೆ ಥೋಂಗ್‌ಡಾಕ್, ಪಾಪಿಕ್ರುಂಗ್ ಸರ್ಕಾರಿ ವಸತಿ ಶಾಲೆಯ ಬಾಲಕಿಯರ ಹಾಸ್ಟೆಲ್‌ನಲ್ಲಿ ಇಂದು ಬೆಳಗಿನ ಜಾವ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಚಾಂಗೊ ಗ್ರಾಮದ ಎಂಟು ವರ್ಷದ ತಾಶಿ ಜೆಂಪೆನ್ ಮೃತಪಟ್ಟಿದ್ದು, ಲುಖಿ ಪುಜೆನ್, ತನು ಪುಜೆನ್, ತಾಯಿ ಪುಜೆನ್ ಗಾಯಗೊಂಡಿದ್ದು, ತಕ್ಷಣ 85 ಕಿಮೀ ದೂರದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಮೋನಿಗಾಂಗ್ ಪಟ್ಟಣದಿಂದ 17 ಕಿ.ಮೀ ದೂರದಲ್ಲಿರುವ ದೂರದ ಹಳ್ಳಿಗೆ ಈ ವಿಷಯದ ತನಿಖೆಗಾಗಿ ಪೊಲೀಸ್ ತಂಡವನ್ನು ಕಳುಹಿಸಲಾಗಿದೆ. ಗ್ರಾಮಕ್ಕೆ ವಿದ್ಯುತ್ ಸಂಪರ್ಕವಿಲ್ಲದ ಕಾರಣ ಬೆಂಕಿಗೆ ಕಾರಣವೇನೆಂದು ತಿಳಿಯಲು ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.
ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಶಿಕ್ಷಣ ಸಚಿವ ಪಸಂಗ್ ದೋರ್ಜಿ ಸೋನಾ ಎಕ್ಸ್ನಲ್ಲಿ ಪೋಸ್ಟ ಮಾಡಿ, ಶಾರ್ಟ್ ಸರ್ಕ್ಯೂಟ್ ನಿಂದ ಅವಘಡ ನಡೆದಿದೆ. ಘಟನೆಯ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ಜಿಲ್ಲಾಡಳಿತ ಮತ್ತು ಶಾಲಾ ಆಡಳಿತ ಮಂಡಳಿಗೆ ಸಂಪೂರ್ಣ ತನಿಖೆ ನಡೆಸುವಂತೆ ಮತ್ತು ಬಾಧಿತ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಗಳಿಗೆ ತಕ್ಷಣದ ನೆರವು ನೀಡುವಂತೆ ಸೂಚಿಸಿದ್ದೇನೆ ಎಂದು ಹೇಳಿದ್ದಾರೆ.
ಈ ಕಷ್ಟದ ಸಮಯದಲ್ಲಿ ಮೃತರ ಮತ್ತು ಅವರ ಕುಟುಂಬಗಳಿಗೆ ಅಗತ್ಯವಿರುವ ಎಲ್ಲಾ ಪರಿಹಾರ ಮತ್ತು ಸಹಾಯವನ್ನು ರಾಜ್ಯ ಸರ್ಕಾರ ಮಾಡಲಿದೆ. ದುಃಖಿತ ಕುಟುಂಬಕ್ಕೆ ನನ್ನ ಹೃತ್ಪೂರ್ವಕ ಸಂತಾಪಗಳು. ಗಾಯಗೊಂಡ ವಿದ್ಯಾರ್ಥಿಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)