ಮರದ ಗೋದಾಮುಗಳಿಗೆ ಬೆಂಕಿ: ಭಾರತಿ ನಗರದ ಬಂಬೂ ಬಜಾರ್​ನಲ್ಲಿ ಅವಘಡ, ಲಕ್ಷಾಂತರ ರೂ. ನಷ್ಟ

Fire
Published on

ಬೆಂಗಳೂರು: ಬಂಬೂಬಜಾರ್​ನಲ್ಲಿ 12ಕ್ಕೂ ಹೆಚ್ಚು ಗೋದಾಮುಗಳಿಗೆ ಬೆಂಕಿ ತಗುಲಿ ಲಕ್ಷಾಂತರ ರೂ. ಮೌಲ್ಯದ ಮರದ ತುಂಡುಗಳು ಬೆಂಕಿಗೆ ಆಹುತಿಯಾಗಿವೆ.

ಗುರುವಾರ (ಏ.2) ನಸುಕಿನ 3 ಗಂಟೆಯಲ್ಲಿ ಭಾರತಿನಗರದ ಬಂಬೂಬಜಾರ್​ನಲ್ಲಿರುವ ಗೋದಾಮು ಗಳಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಬೆಂಕಿ ದಟ್ಟವಾಗಿ ಹೊತ್ತಿ ಉರಿಯುತ್ತಿದ್ದನ್ನು ಗಮನಿಸಿದ ಸ್ಥಳೀಯರು, ಅಗ್ನಿಶಾಮಕದಳಕ್ಕೆ ಮಾಹಿತಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ.

5 ತಾಸು ಕಾರ್ಯಾಚರಣೆ: ಗೋದಾಮುಗಳಲ್ಲಿ ಮರದ ಹಲಗೆ, ಪೀಠೋಪಕರಣಗಳ ತಯಾರಿಕೆ ಬಳಸುವ ಮರದ ತುಂಡು ಸೇರಿ ಮತ್ತಿತ್ತರ ವಸ್ತುಗಳನ್ನು ಸಂಗ್ರಹಿಸಲಾಗಿತ್ತು. ಲಾಕ್​ಡೌನ್ ಹಿನ್ನೆಲೆಯಲ್ಲಿ ಕಳೆದೊಂದು ವಾರದಿಂದ ಅಂಗಡಿಗಳನ್ನು ಮುಚ್ಚಲಾಗಿತ್ತು. ಬೆಳಗಿನ ಜಾವ ಏಕಾಏಕಿ ಬೆಂಕಿ ಉಂಟಾಗಿದೆ. ಬೆಂಕಿಯ ತೀವ್ರತೆ ಹೆಚ್ಚಾಗಿದ್ದರಿಂದ 20 ಅಗ್ನಿಶಾಮಕ ವಾಹನಗಳಿಂದ 5 ತಾಸು ಸತತ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಲಾಗಿದೆ.

ಮೊದಲಿಗೆ ಒಂದು ಮಳಿಗೆಯಲ್ಲಿ ಬೆಂಕಿ ಹೊತ್ತಿ ಕೊಂಡಿದೆ. ಅದನ್ನು ಯಾರೊಬ್ಬರೂ ಗಮನಿಸಿಲ್ಲ. ಹಾಗಾಗಿ ಸುತ್ತಮುತ್ತಲಿನ ಗೋದಾಮುಗಳಿಗೆ ವ್ಯಾಪಿಸಿದೆ. ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸುವ ವೇಳೆಗೆ 12ಕ್ಕೂ ಹೆಚ್ಚು ಮಳಿಗೆಗಳಿಗೂ ಬೆಂಕಿ ಆವರಿಸಿತ್ತು. ಶಾರ್ಟ್ ಸರ್ಕ್ಯೂಟ್​ನಿಂದ ಅಗ್ನಿ ಅವಘಡ ಸಂಭವಿಸಿರುವ ಬಗ್ಗೆ ಶಂಕಿಸಲಾಗಿದೆ. ಸ್ಥಳ ಪರಿಶೀಲಿಸಿದ್ದು, ಗೋದಾಮು ಮಾಲೀಕರ ಹೇಳಿಕೆ ಆಧರಿಸಿ ಪ್ರಕರಣ ದಾಖಲಿಸಲಾಗಿದೆ ಎಂದು ಭಾರತಿನಗರ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net