ಗುಜರಿ ಅಂಗಡಿಯಲ್ಲಿ ಬೆಂಕಿ ಆವಘಡ : ತಪ್ಪಿದ ಭಾರಿ ಅನಾಹುತ : ಸಮಯಪ್ರಜ್ಞೆ ಮೆರೆದ ಸ್ಥಳೀಯರು

New Project (49)
Published on

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ರಾಷ್ಟ್ರೀಯ ಹೆದ್ದಾರಿ 66ರ ತಲಪಾಡಿ ಸಮೀಪದ ಉಚ್ಚಿಲ ಹೆದ್ದಾರಿಯಲ್ಲಿರುವ ಗುಜರಿ ಅಂಗಡಿಯಲ್ಲಿ ಭಾನುವಾರ ಮಧ್ಯಾಹ್ನ ಬೆಂಕಿ ಅವಘಡ ಸಂಭವಿಸಿದೆ. ಪರಿಸರದಾದ್ಯಂತ ದಟ್ಟಹೊಗೆ ಹಬ್ಬಿ ಸಾರ್ವಜನಿಕರು ಸಂಕಷ್ಟಕ್ಕೀಡಾಗಿದರು. ಪಕ್ಕದಲ್ಲೇ ಪೆಟ್ರೋಲ್ ಬಂಕ್‌ಗಳು ಇದ್ದು ಸ್ಥಳೀಯರ ಸಮಯಪ್ರಜ್ಞೆ ಮತ್ತು ಅಗ್ನಿಶಾಮಕದಳದ ಕಾರ್ಯಾಚರಣೆಯಿಂದಾಗಿ ಭಾರಿ ಅನಾಹುತ ತಪ್ಪಿದೆ.

ಮಧ್ಯಾಹ್ನ ಉಚ್ಚಿಲದ ಅಂಡರ್‌ಪಾಸ್ ಬಳಿಯ ಇಕ್ಬಾಲ್ ಹಾಗೂ ಇಬ್ರಾಹಿಂ ಎಂಬುವರ ಗುಜುರಿ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಸಂದರ್ಭ ಕಾರ್ಮಿಕರು ಕೆಲಸದಲ್ಲಿ ನಿರತರಾಗಿದ್ದರು. ಬಿಸಿಲು ಕೂಡ ಇದ್ದ ಹಿನ್ನೆಲೆ ಬೆಂಕಿ ಏಕಾಏಕಿ ವ್ಯಾಪಿಸಿ ನಿಯಂತ್ರಣಕ್ಕೆ ಸಿಗದಂತಾಯಿತು. ನೋಡನೋಡುತ್ತಿದ್ದಂತೆಯೇ ಭಾರಿ ಪ್ರಮಾಣದ ಬೆಂಕಿಯಿಂದ ಉಚ್ಚಿಲ, ತಲಪಾಡಿ, ತೊಕ್ಕೊಟ್ಟು ಪ್ರದೇಶಗಳಿಗೆ ದಟ್ಟ ಹೊಗೆ ವ್ಯಾಪಿಸಿದೆ. ಇದರಿಂದ ಹೆದರಿದ ಸಾರ್ವನಿಕರು ಘಟನಾ ಸ್ಥಳಕ್ಕೆ ದೌಡಾಯಿಸಿದ್ದಾರೆ. ಸ್ಥಳೀಯರು ಬಕೆಟ್‌ಗಳಿಂದ ನೀರು ಚೆಲ್ಲಿ ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ಮಾಹಿತಿ ಪಡೆದ ಅಗ್ನಿಶಾಮಕದಳ ವಾಹನ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವಲ್ಲಿ ಸಫಲವಾಗಿದೆ.

ತಪ್ಪಿದ ಭಾರಿ ಅನಾಹುತ

ಇಲ್ಲಿರುವ ವಿಶಾಲ ಜಾಗದಲ್ಲಿ ಭಾರಿ ಪ್ರಮಾಣದ ಥರ್ಮಾಕೋಲ್, ಪ್ಲಾಸ್ಟಿಕ್ ಸಹಿತ ಗುಜರಿ ವಸ್ತು ರಾಶಿ ಹಾಕಲಾಗಿತ್ತು. ಕಬ್ಬಿಣದ ವಸ್ತು ಬೇರ್ಪಡಿಸಲು ಗ್ಯಾಸ್ ಕಟ್ಟಿಂಗ್ ಬಳಸಲಾಗುತ್ತಿದ್ದು ಇದರಿಂದಲೇ ಅಹಾನುತ ಸಂಭವಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಘಟನೆಯಿಂದಾಗಿ ದಾಸ್ತಾನು ಇಡಲಾಗಿದ್ದ ಲಕ್ಷಾಂತರ ರೂ. ಮೌಲ್ಯದ ಗುಜರಿ ವಸ್ತು ಸುಟ್ಟು ಕರಕಲಾಗಿವೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಉಳ್ಳಾಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅಪಾಯದಲ್ಲಿದ್ದ ಪೆಟ್ರೋಲ್ ಬಂಕ್‌ಗಳು

ಗುಜರಿ ಅಂಗಡಿಯ ಸನಿಹದಲ್ಲೇ ಉಚ್ಚಿಲದ ಹೆದ್ದಾರಿಯಲ್ಲಿ ಎರಡು ಪೆಟ್ರೋಲ್ ಬಂಕ್‌ಗಳಿವೆ. ಒಂದು ವೇಳೆ ಬೆಂಕಿಯ ಕಿಡಿ ಪೆಟ್ರೋಲ್ ಬಂಕ್ ಕಡೆ ಹಾರಿದ್ದರೂ ಭಾರಿ ಅನಾಹುತವಾಗುವ ಆತಂಕ ಎದುರಾಗಿತ್ತು. ಗುಜರಿ ಅಂಗಡಿ ಮಾಲೀಕರಿಗೆ ಸುರಕ್ಷತೆಯ ಬಗ್ಗೆ ಪುರಸಭೆಯಲ್ಲಿ ಯಾವುದೇ ನಿರ್ದೇಶನಗಳಿಲ್ಲ. ಆದರೂ ಹಲವು ಬಾರಿ ನೋಟಿಸ್ ಮೂಲಕ ನಿರ್ದೇಶನ ನೀಡಲಾಗಿದ್ದರೂ ಗುಜರಿ ಅಂಗಡಿಯವರು ನಿರ್ಲಕ್ಷಿಸಿದ್ದರಿಂದಲೇ ಅಗ್ನಿ ಅವಘಡ ಸಂಭವಿಸಿದೆ ಎಂದು ಸೋಮೇಶ್ವರ ಪುರಸಭಾ ಉಪಾಧ್ಯಕ್ಷ ರವಿಶಂಕರ್ ದೂರಿದ್ದಾರೆ.

ಅಗ್ನಿಶಾಮಕ ವಾಹನಕ್ಕೆ ಕಾಡಿದ ಅಂಡರ್‌ಪಾಸ್!

ಬೆಂಕಿ ಅವಘಡ ಸಂಭವಿಸಿದ ಸಂದರ್ಭ ಮಧ್ಯಾಹ್ನ 1.36ಕ್ಕೆ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದರೂ ವಾಹನ ಆಗಮಿಸಲು 45 ನಿಮಿಷ ಹಿಡಿದಿದೆ. ಕಳೆದ 6 ವರ್ಷಗಳಿಂದ ಮಹಾಕಾಳಿಪಡ್ಪು ರೈಲ್ವೆ ಕೆಳಸೇತುವೆ ಕಾಮಗಾರಿ ಕುಂಟುತ್ತಾ ಸಾಗಿರುವುದರಿಂದ ಪಾಂಡೇಶ್ವರದಿಂದ ಆಗಮಿಸುವ ಅಗ್ನಿಶಾಮಕ ವಾಹನಗಳು ಸಂಚಾರ ದಟ್ಟಣೆಯಿರುವ ಮಂಗಳೂರು ನಗರಕ್ಕೆ ಸುತ್ತು ಹೊಡೆದು ಬರುವಾಗ ವಿಳಂಬವಾಗುತ್ತಿದೆ ಎಂದು ರಹೀಂ ಎಂಬುವರು ಅಸಮಾಧಾನ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net