ಪುತ್ತೂರು: ದರ್ಬೆ ವೃತ್ತದ ಬಳಿಯ ಕಟ್ಟಡವೊಂದರ ಮೊದಲ ಮಹಡಿಯ ಇಲೆಕ್ಟ್ರಿಕ್ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿಶಾಮಕದಳದ ಸಿಬ್ಬಂದಿ ಬಾಗಿಲು ಮುರಿದು ಒಳನುಗ್ಗಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆದ್ರಾಳ ನಿವಾಸಿ ಕೇಶವ ಅವರಿಗೆ ಸೇರಿದ ಅಂಗಡಿ ಇದಾಗಿದ್ದು, ಮಧ್ಯಾಹ್ನ ಊಟಕ್ಕೆಂದು ಎಲ್ಲರೂ ತೆರಳಿದ್ದರು. ಕೆಲಸಮಯದ ಬಳಿಕ ಸ್ಥಳೀಯರು ಅಂಗಡಿಯೊಳಗಿಂದ ಹೊಗೆ ಬರುವುದನ್ನು ಗಮನಿಸಿ ಅಗ್ನಿಶಾಮಕ ದಳಕ್ಕೆ ತಿಳಿಸಿದ್ದಾರೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ಅವಘಡ ಆಗಿರಬಹುದೆಂದು ಅಂದಾಜಿಸಲಾಗಿದೆ.
ಅಗ್ನಿಶಾಮಕ ಸಿಬ್ಬಂದಿ ಅಂಗಡಿ ಮಾಲೀಕರ ಆಗಮನಕ್ಕಾಗಿ ಕಾಯದೆ, ಬಾಗಿಲು ಒಡೆದು ಒಳ ನುಗ್ಗಿ ಕಾರ್ಯಾಚರಣೆ ನಡೆಸಿದ್ದರಿಂದ ಭಾರಿ ಹಾನಿಯಾಗಿಲ್ಲ ಎನ್ನಲಾಗಿದೆ. ಬೆಂಕಿ ಶಮನದ ಬಳಿಕ ಸ್ಥಳಕ್ಕೆ ಅಂಗಡಿ ಮಾಲೀಕರು ಆಗಮಿಸಿದ್ದಾರೆ.