ಮಾಜಿ ಟ್ರೈನಿ IAS ಅಧಿಕಾರಿ ಪೂಜಾ ಖೇಡ್ಕರ್​ ತಂದೆ ವಿರುದ್ಧ ಎಫ್​ಐಆರ್​​; ಪ್ರಕರಣ ಹೀಗಿದೆ..

Untitled-design-62
Published on

ಮುಂಬೈ: ವಿವಾದಿತ ಮಾಜಿ ಟ್ರೈನಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್​​ ಅವರ ತಂದೆ ದಿಲೀಪ್ ಖೇಡ್ಕರ್ ವಿರುದ್ಧ ಪುಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಹಾಗೂ ನೌಕರನಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಈ ಪ್ರಕರಣ ದಾಖಲಾಗಿದೆ. ಪುಣೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಕಚೇರಿಯ ತಹಸೀಲ್ದಾರ್ ಮಟ್ಟದ ಅಧಿಕಾರಿ ನೀಡಿದ ದೂರಿನ ಆಧಾರದ ಮೇಲೆ ಬಂಡ್‌ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ಶುಕ್ರವಾರ(ಆಗಸ್ಟ್​​ 17) ತಿಳಿಸಿದ್ದಾರೆ.

ಪೂಜಾ ಖೇಡ್ಕರ್ ಅವರನ್ನು ಅಸಿಸ್ಟೆಂಟ್ ಕಲೆಕ್ಟರ್ ಆಗಿ ಪೋಸ್ಟಿಂಗ್ ಮಾಡುವಾಗ ದಿಲೀಪ್ ಖೇಡ್ಕರ್ ಅವರು ತಹಸೀಲ್ದಾರ್ ದೀಪಕ್ ಆಕಾಡೆ ಅವರಿಗೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಆಡಳಿತಾತ್ಮಕ ಕೆಲಸದಲ್ಲಿ ಹಸ್ತಕ್ಷೇಪ ಮಾಡುವ ಹಕ್ಕು ಅವರಿಗಿಲ್ಲದಿದ್ದರು, ದೀಲಿಪ್​ ಅವರು ತಮ್ಮ ಮಗಳಿಗೆ ಕ್ಯಾಬಿನ್​ ಮಂಜೂರು ಮಾಡುವಂತೆ ಹೇಳಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ

ಜಿಲ್ಲಾಡಳಿತದಿಂದ ದೂರನ್ನು ಸ್ವೀಕರಿಸಿದ ನಂತರ, ನಾವು ದಿಲೀಪ್ ಖೇಡ್ಕರ್ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 186 (ಅಧಿಕೃತ ಕಾರ್ಯಗಳಿಗೆ ಸಾರ್ವಜನಿಕ ಸೇವಕರಿಗೆ ಅಡ್ಡಿಪಡಿಸುವುದು), IPC 504 (ಉದ್ದೇಶಪೂರ್ವಕ ಅವಮಾನ) ಮತ್ತು IPC 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದೇವೆ ಎಂದು ಪುಣೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿವಾದಗಳಲ್ಲಿ ಸಿಲುಕಿದ್ದ ಪೂಜಾ ಖೇಡ್ಕರ್ ವಿರುದ್ಧ ಇತ್ತೀಚೆಗೆ ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್​ಸಿ) ಪ್ರಮುಖ ಕ್ರಮಕೈಗೊಂಡಿದ್ದು ಅವರ ಉಮೇದುವಾರಿಕೆಯನ್ನು ರದ್ದುಗೊಳಿಸಿತ್ತು. ಇದರೊಂದಿಗೆ ಆಯೋಗವು ಮುಂದೆ ಯಾವುದೇ ಸರ್ಕಾರಿ ಪರೀಕ್ಷೆಗೆ ಹಾಜರಾಗದಂತೆ ಪೂಜಾ ಅವರನ್ನು ನಿಷೇಧಿಸಿದೆ.

ನಿರೀಕ್ಷಣಾ ಜಾಮೀನನ್ನು ನಿರಾಕರಿಸಿದ ಜಿಲ್ಲಾ ನ್ಯಾಯಾಲಯ ಆದೇಶವನ್ನು ಪ್ರಶ್ನಿಸಿ ಪೂಜಾ ಖೇಡ್ಕರ್ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ದೆಹಲಿ ಹೈಕೋರ್ಟ್​​ ಆಗಸ್ಟ್ 12ರಂದು ನಿಗದಿಪಡಿಸಿದೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net