ಸುಶಾಂತ್​ ಪ್ರೇಯಸಿ ರಿಯಾಗೆ ಅತ್ಯಾಚಾರ ಬೆದರಿಕೆ ಹಾಕಿದ ಇಬ್ಬರ ಸ್ಥಿತಿ ಏನಾಗಿದೆ ಗೊತ್ತಾ?

sushant-singh
Published on

ಸುಶಾಂತ್​ ಸಿಂಗ್​ ಸಾವಿನ ನಂತರ ಪ್ರೇಯಸಿ ರಿಯಾ ಚಕ್ರವರ್ತಿ ವಿರುದ್ಧ ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್​ ಮಾಡಿದ್ದರು. ಬರೀ ಟ್ರೋಲ್​ ಮಾಡುವುದಷ್ಟೇ ಅಲ್ಲ, ಅವರಿಗೆ ಅತ್ಯಾಚಾರ ಮತ್ತು ಕೊಲೆ ಬೆದರಿಕೆಯನ್ನೂ ಹಾಕಿದ್ದರು. ದಿನೇದಿನೆ ಟ್ರೋಲಿಗರ ಕಾಟ ಹೆಚ್ಚಾಗಿತ್ತು. ಇದೆಲ್ಲದರಿಂದ ಬೇಸತ್ತ ರಿಯಾ ಇತ್ತೀಚೆಗಷ್ಟೇ ಸೈಬರ್ ಪೊಲೀಸರಿಗೆ ದೂರು ಸಹ ನೀಡಿದ್ದರು. ದೂರಿನನ್ವಯ ಇಬ್ಬರ ವಿರುದ್ಧ ಎಫ್​ಐಆರ್​ ದಾಖಲಾಗಿದೆ.

‘ನನ್ನನ್ನ ಗೋಲ್ಡ್​ ಡಿಗ್ಗರ್​ ಎಂದು ಕರೆದರು ನಾನು ಸುಮ್ಮನಿದ್ದೆ. ನನ್ನನ್ನು ಕೊಲೆಗಾರ್ತಿ ಎಂದರು ಆಗಲೂ ಸುಮ್ಮನಿದ್ದೆ. ನನಗೆ ಇನ್ನೂ ಏನೇನೋ ಅಂದರು. ಆಗಲೂ ನಾನು ಮಾತನಾಡಲಿಲ್ಲ. ಆತ್ಮಹತ್ಯೆ ಮಾಡಿಕೊಳ್ಳಲಿಲ್ಲ ಎಂದರೆ ಕೊಲೆ ಮಾಡಿಸ್ತೀನಿ, ರೇಪ್​ ಮಾಡಿಸ್ತೀನಿ ಅಂತೆಲ್ಲಾ ಹೇಳುವುದಿದೆಯಲ್ಲಾ ಅದು ದೊಡ್ಡ ಕ್ರೈಮ್​’ ಎಂದು ರಿಯಾ ಸೋಷಿಯಲ್​ ಮೀಡಿಯಾದಲ್ಲಿ ಟ್ರೋಲಿಗರ ವಿರುದ್ಧ ಪ್ರಶ್ನೆ ಮಾಡಿದ್ದರು.

‘ನನಗೆ ಯಾರು ಈ ರೀತಿ ಹೇಳಿದರೋ, ಅವರಿಗೆ ಈ ಮಾತಿನ ಗಂಭಿರತೆ ಗೊತ್ತಿದೆಯಾ? ಇದು ದೊಡ್ಡ ಕ್ರೈಮ್​. ಈ ತರಹ ಯಾರನ್ನೂ ನಿಂದಿಸಬಾರದು. ದಯವಿಟ್ಟು ಸೈಬರ್​ ಕ್ರೈಮ್​ನವರು ಈ ವಿಷಯವಾಗಿ ಸೂಕ್ತ ಆಕ್ಷನ್​ ತೆಗೆದುಕೊಳ್ಳಬೇಕು. ತಾಳ್ಮೆಗೂ ಒಂದು ಮಿತಿ ಇದೆ’ ಎಂದು ಸೈಬರ್​ ಕ್ರೈಮ್​ ಪೊಲೀಸರಿಗೆ ಟ್ವಿಟರ್​ ಮೂಲಕವೇ ಟ್ಯಾಗ್​ ಮಾಡಿ ಮನವಿ ಮಾಡಿದ್ದರು.

ಅದರಂತೆ ಇದೀಗ ಇಬ್ಬರ ವಿರುದ್ಧ ಐಪಿಸಿ ಸೆಕ್ಷನ್​ 507 ಮತ್ತು 509 ಪ್ರಕಾರ ಸಾಂತಾಕ್ರೂಜ್​ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಈವರೆಗೂ ಯಾರನ್ನೂ ಬಂಧಿಸಲಾಗಿಲ್ಲ. ಶೀಘ್ರದಲ್ಲಿ ಆ ಕೆಲಸವನ್ನೂ ಮಾಡಲಿದ್ದೇವೆ ಎಂದು ಪೊಲೀಸ್​ ಇಲಾಖೆ ತಿಳಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net