ಹೋಟೆಲ್​ಬಳಿ ಮಲವಿಸರ್ಜನೆ..ಭಾರತೀಯನಿಗೆ 25 ಸಾವಿರ ದಂಡ!

merina
Published on

ಸಿಂಗಾಪುರ: ಕುಡಿದ ಅಮಲಿನಲ್ಲಿ ಸ್ಟಾರ್​ ಹೋಟೆಲ್​ ಎಂಟ್ರೆನ್ಸ್​ ನಲ್ಲಿ ಮಲವಿಸರ್ಜನೆ ಮಾಡಿದ ಭಾರತೀಯ ಕಾರ್ಮಿಕನಿಗೆ ನ್ಯಾಯಾಲಯ 25ಸಾವಿರ ದಂಡ ವಿಧಿಸಿರುವ ಘಟನೆ ಸಿಂಗಾಪುರದಲ್ಲಿ ನಡೆದಿದೆ.

ಸಿಂಗಾಪುರದಲ್ಲಿ ವರ್ಕ್ ಪರ್ಮಿಟ್ ಮೇಲೆ ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿರುವ ರಾಮು ಎಂಬ ವ್ಯಕ್ತಿ ಕ್ಯಾಸಿನೊ ಆಡಲು ಪ್ರಸಿದ್ಧ ಮರೀನಾ 'ಬೇ ಸ್ಯಾಂಡ್ಸ್' ರೆಸಾರ್ಟ್ ಮತ್ತು ಹೋಟೆಲ್‌ಗೆ ತೆರಳಿದ್ದ. ಆತ ಆಗಲೇ ಮದ್ಯ ಸೇವಿಸಿದ್ದು, ಸ್ವಲ್ಪ ಹೊತ್ತು ಜೂಜಾಡಿದ ನಂತರ ಶೌಚಗೃಹಕ್ಕೆ ಹೋಗಬೇಕೆನಿಸಿದೆ. ಆದರೆ, ಆತನಿಗೆ ಕಿಕ್​ ಏರಿದ್ದರಿಂದ ತಾನು ಎಲ್ಲಿದ್ದೇನೆಂದು ತಿಳಿಯುವುದು ಕಷ್ಟವಾಗಿತ್ತು. ಅಂತಿಮವಾಗಿ ಪ್ರವೇಶದ್ವಾರದಲ್ಲಿ ನೆಲದ ಮೇಲೆ ಮಲವಿಸರ್ಜನೆ ಮಾಡಿದ್ದಾನೆ.

ಬಳಿಕ ಆತ ಅಲ್ಲಿಂದ ನೇರವಾಗಿ ಹೊರಟು ಹೋಗಿದ್ದಾನೆ. ಇದನ್ನು ಗಮನಿಸಿದ ಭದ್ರತಾ ಸಿಬ್ಬಂದಿ, ಸಿಸಿಟಿವಿಯಲ್ಲಿ ಆತನನ್ನು ಗುರುತಿಸಿ ಸಾರ್ವಜನಿಕ ಆರೋಗ್ಯ ನಿಯಮಗಳ ಅಡಿಯಲ್ಲಿ ಪೊಲೀಸ್ ದೂರು ದಾಖಲಿಸಿದ್ದಾರೆ. ಈ ಘಟನೆ ಕಳೆದ ವರ್ಷ ಅಕ್ಟೋಬರ್ 30 ರಂದು ನಡೆದಿದ್ದು, ಇದಕ್ಕೆ ಸಂಬಂಧಿಸಿದ ಫೋಟೋ ಆಗ ವೈರಲ್ ಆಗಿತ್ತು.

ಜೂನ್ 4 ರಂದು ರಾಮು ಕ್ಯಾಸಿನೊಗೆಂದು ಮತ್ತೆ ಅದೇ ಹೋಟೆಲ್‌ಗೆ ಹಿಂತಿರುಗಿದ್ದಾನೆ. ಆಗ ಕೂಡಲೇ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ರಾಮು ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ನ್ಯಾಯಾಧೀಶರು ಆರೋಪಿಗೆ ತೀವ್ರ ಛೀಮಾರಿ ಹಾಕಿದ್ದು, 400 ಸಿಂಗಾಪುರ ಡಾಲರ್ (ಸುಮಾರು 25 ಸಾವಿರ ರೂ.) ದಂಡ ವಿಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net