ನವದೆಹಲಿ: ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯಬೇಕಾದರೂ ಜನರ ತೆರಿಗೆ ಹಣದಿಂದಲೇ ಆಗಬೇಕಿದ್ದು, ತೆರಿಗೆ ಜಾಲವನ್ನು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ವಿಸ್ತರಿಸುವುದನ್ನು ಗುರಿಯಾಗಿಸಿಕೊಂಡು ಯೋಜನೆ ರೂಪಿಸಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಚುನಾವಣೆಯ ನಂತರ 2024ನೇ ಸಾಲಿನ ಬಜೆಟ್ ಭಾಷಣದ ನಂತರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಮಧ್ಯಮ ವರ್ಗದವರಿಗೆ ಪರಿಹಾರ ಮತ್ತು ಉದ್ಯೋಗ ಸೃಷ್ಟಿಯನ್ನು ಉತ್ತೇಜಿಸುವ ಉದ್ದೇಶದಿಂದ ಹಲವಾರು ಯೋಜನೆಗಳನ್ನು ಘೋಷಿಸಲಾಗಿದೆ. ಬಜೆಟ್‌ನಲ್ಲಿ ಮುಂದಿನ ಐದು ವರ್ಷಗಳಲ್ಲಿ ಉದ್ಯೋಗ ಸೃಷ್ಟಿ ಯೋಜನೆಗಳಿಗೆ 2 ಲಕ್ಷ ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ ಎಂದರು.
ಎಲ್ಲಾ ಸ್ಟಾರ್ಟಪ್ ಹೂಡಿಕೆದಾರರಿಗೆ ’ಏಂಜೆಲ್ ಟ್ಯಾಕ್ಸ್’ ರದ್ದುಗೊಳಿಸುವುದು, ಮೊಬೈಲ್ ಫೋನ್‌ಗಳು ಮತ್ತು ಚಿನ್ನದ ಮೇಲಿನ ಕಸ್ಟಮ್ಸ್ ಸುಂಕವನ್ನು ಕಡಿತಗೊಳಿಸುವುದು ಹಾಗೂ ಬಂಡವಾಳದ ಮೇಲಿನ ಲಾಭದ ತೆರಿಗೆಯನ್ನು ಸರಳಗೊಳಿಸುವುದು ಸೇರಿದಂತೆ ತೆರಿಗೆ ಸುಧಾರಣೆಗಳನ್ನು ಹೊಸದಾಗಿ ಪರಿಚಯಿಸಲಾಗಿದೆ. ಇದರ ಹೊರತಾಗಿಯೂ ಸೆಕ್ಯುರಿಟೀಸ್ ವಹಿವಾಟು ತೆರಿಗೆ (ಎಸ್‌ಟಿಟಿ) ಯನ್ನು ಹೆಚ್ಚಳ ಮಾಡುವ ಭವಿಷ್ಯದ ಆಯ್ಕೆಗಳ ಲೆಕ್ಕಾಚಾರದ ಮೇಲೆ ಷೇರು ಮಾರುಕಟ್ಟೆಗಳಲ್ಲಿ ಕುಸಿತ ಕಂಡು ಬಂದಿದೆ ಎಂದು ಬಜೆಟ್ ಬೆಳವಣಿಗೆಗಳನ್ನು ವಿಶ್ಲೇಷಿಸಿದರು.