ಸಿಎಂ ಮಮತಾ ಬ್ಯಾನರ್ಜಿ ಹೇಳಿರುವುದು ಸುಳ್ಳು; ಸಚಿವೆ ನಿರ್ಮಲಾ ಸೀತಾರಾಮನ್

Untitled-design-2024-07-27T150441.845
Published on

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ನೀತಿ ಆಯೋಗದ ಒಂಬತ್ತನೇ ಆಡಳಿತ ಮಂಡಳಿ ಸಭೆಯಿಂದ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಮಧ್ಯದಲ್ಲೇ ಹೊರಬಂದು ತಮಗೆ ಅವಮಾನ ಮಾಡಲಾಗಿದೆ. 5 ನಿಮಿಷಗಳ ಕಾಲ ಮಾತನಾಡಲು ಅವಕಾಶ ನೀಡಿ, ಬಳಿಕ ಮಾತನಾಡುತ್ತಿದ್ದರು ಮೈಕ್​ ಸ್ವಿಚ್​ ಆಫ್​​ ಮಾಡಲಾಯಿತು ಎಂದು ಆರೋಪಿಸಿದ್ದರು. ಮಮತಾ ಬ್ಯಾನರ್ಜಿ ಅವರ ಈ ಆರೋಪವನ್ನು ಕೇಂದ್ರಸರ್ಕಾರ ತಳ್ಳಿ ಹಾಕಿದೆ.

ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​​, ಮಮತಾ ಬ್ಯಾನರ್ಜಿ ಅವರು ಮೈಕ್ ಸ್ವಿಚ್ ಆಫ್ ಆಗಿದೆ ಎಂದು ಹೇಳುವುದು ಸರಿಯಲ್ಲ. ಅವರಿಗೆ ಮಾತನಾಡಲು ನೀಡಿದ್ದ ಸಮಯ ಮುಗಿದಿತ್ತು ಎಂದು ಹೇಳಿದ್ದಾರೆ.

ಸಭೆಯಲ್ಲಿ ಪ್ರತಿ ಸಿಎಂಗೂ ಸಮಯ ನಿಗದಿ ಮಾಡಲಾಗಿತ್ತು. ಪ್ರತಿ ಟೇಬಲ್ ಮುಂದೆ ಇರುವ ಪರದೆಯ ಮೇಲೆ ಇದನ್ನು ತೋರಿಸಲಾಗಿದೆ. ಮಮತಾ ಬ್ಯಾನರ್ಜಿ ಅವರ ಮಾತುಗಳನ್ನು ಎಚ್ಚರಿಕೆಯಿಂದ ಆಲಿಸಲಾಯಿತು. ಆದರೆ ಅವರು ಮೈಕ್ ಸ್ವಿಚ್ ಆಫ್ ಆಗಿದೆ ಎಂದು ಹೇಳಿದ್ದಾರೆ. ಇದು ಸಂಪೂರ್ಣ ಸುಳ್ಳು. ಪ್ರತಿಯೊಬ್ಬ ಸಿಎಂಗೂ ಮಾತನಾಡಲು ಸೂಕ್ತ ಸಮಯ ನೀಡಲಾಗಿದೆ. ತಮ್ಮ ಮೈಕ್ ಸ್ವಿಚ್ ಆಫ್ ಆಗಿದೆ ಎಂದು ಮಮತಾ ಬ್ಯಾನರ್ಜಿ ಹೇಳಿರುವುದು ದುರದೃಷ್ಟಕರ, ಇದು ನಿಜವಲ್ಲ. ಸುಳ್ಳನ್ನು ಆಧರಿಸಿ ಕಥೆಯನ್ನು ರಚಿಸುವ ಬದಲು, ಅದರ ಹಿಂದಿನ ಸತ್ಯವನ್ನು ಅವರು ಹೇಳಬೇಕು ಎಂದು ಸಚಿವೆ ನಿರ್ಮಲಾ ಸೀತಾರಾಮನ್​ ಹೇಳಿದರು.

ಇದೇ ವಿಚಾರವಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಪ್ರತಿಕ್ರಿಯಿಸಿ ಸಭೆಯಲ್ಲಿ ಏನಾಯಿತು ಎಂದು ನೋಡಿಲ್ಲ ಎಂದು ಹೇಳಿದರು.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net