

ಬಂಗಾರಪೇಟೆ : ಮೂರು ದಶಕಗಳಿಂದ ರಸ್ತೆ ಸಂಪರ್ಕ ಸಮಸ್ಯೆ ಎದುರಿಸುತ್ತಿದ್ದ ತಾಲೂಕಿನ ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಸಂಸದ ಮಲ್ಲೇಶ್ಬಾಬು ಪರ್ಯಾಯ ರಸ್ತೆ ವ್ಯವಸ್ಥೆ ಕಲ್ಪಿಸಿಕೊಡುವ ಮೂಲಕ ಸಮಸ್ಯೆಗೆ ಮುಕ್ತಿ ದೊರಕಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಯೋಗದಿಂದ ಭಿಕ್ಷುಕರಿಗೆ ಸ್ವಾಭಿಮಾನಿ ಜೀವನ ಕಲ್ಪಿಸುವ ಉದ್ದೇಶದಿಂದ 30 ವರ್ಷಗಳ ಹಿಂದೆ ಕೋಲಾರ ಮುಖ್ಯರಸ್ತೆಯಲ್ಲಿರುವ ತಾಲೂಕಿನ ಬೀರಂಡಹಳ್ಳಿ ಸಮೀಪ 23 ಎಕರೆ ಪ್ರದೇಶದಲ್ಲಿ ಕೋಟ್ಯಂತರ ರೂ. ವೆಚ್ಚದಲ್ಲಿ ಮೂಲ ಸೌಕರ್ಯಗಳೊಂದಿಗೆ ನಿರಾಶ್ರಿತರ ಪರಿಹಾರ ಕೇಂದ್ರ ಸ್ಥಾಪಿಸಲಾಗಿದೆ. ಜಿಲ್ಲೆ, ರಾಜ್ಯ ಸೇರಿ ಇತರ ರಾಜ್ಯಗಳ ಭಿಕ್ಷುಕರು ಈ ಕೇಂದ್ರದಲ್ಲಿ ಆಶ್ರಯ ಪಡೆದುಕೊಂಡು ಜೀವನ ನಡೆಸುತ್ತಿದ್ದಾರೆ.
ಸುಮಾರು 150 ಕ್ಕೂ ಹೆಚ್ಚು ಮಹಿಳಾ ಮತ್ತು ಪುರುಷ ನಿರಾಶ್ರಿತರು ಆಶ್ರಯ ಪಡೆದುಕೊಂಡಿದ್ದಾರೆ. ಆದರೆ, ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಹೋಗಿ ಬರಲು ಈವರೆಗೂ ರಸ್ತೆ ಸಂಪರ್ಕವಿರಲಿಲ್ಲ. ಕೋಲಾರ ಮುಖ್ಯ ರಸ್ತೆಯಿಂದ ರೈಲ್ವೆ ಹಳಿ ದಾಟಿ ಹೋಗಿ ಬರಬೇಕಾದ ಪರಿಸ್ಥಿತಿ ಇತ್ತು. ನಿರಾಶ್ರಿತರನ್ನು ಆಸ್ಪತ್ರೆಗೆ ಕರೆದೊಯ್ಯಲು ಮತ್ತು ಸಿಬ್ಬಂದಿ ಕಚೇರಿಗೆ ಓಡಾಡಲು ತೀವ್ರ ಸಮಸ್ಯೆ ಎದುರಿಸಬೇಕಾಗಿತ್ತು.
ಇತ್ತೀಚೆಗೆ ಜಿಲ್ಲಾಧಿಕಾರಿ ಎಂ.ಆರ್.ರವಿ ಅವರು ಕೇಂದ್ರಕ್ಕೆ ಭೇಟಿ ನೀಡಿದ್ದ ವೇಳೆ ರೈಲ್ವೆ ಹಳಿ ದಾಟಿಕೊಂಡು ಹೋಗಿ ಬಂದಿದ್ದರು. ರಸ್ತೆ ಸಂಪರ್ಕ ಇಲ್ಲದೇ ಇರುವ ಬಗ್ಗೆಯೂ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಅದೇ ವೇಳೆ ರಸ್ತೆ ಸಂಪರ್ಕಕ್ಕಾಗಿಜಮೀನು ಸರ್ವೇಗೆ ತಹಸೀಲ್ದಾರ್ಗೆ ಸೂಚಿಸಿದ್ದರು. ಆದರೂ ಪರಿಹಾರ ದೊರಕಿರಲಿಲ್ಲ. ಈ ಹಿನ್ನೆಲೆಯಲ್ಲಿ ಮಲ್ಲೇಶ್ಬಾಬು ಪ್ರಥಮ ಆದ್ಯತೆಯನ್ನಾಗಿಸಿಕೊಂಡು ಕಂದಾಯ ಹಾಗೂ ರೈಲ್ವೆ ಇಲಾಖೆ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರ್ಯಾಯ ರಸ್ತೆ ನಿರ್ಮಿಸುವ ಕುರಿತು ಮೂರು ಗಂಟೆಗೂ ಹೆಚ್ಚು ಹೊತ್ತಿನ ಸಭೆ ಬಳಿಕ ಯಶಸ್ವಿಯಾದರು. ಇದುವರೆಗೂ ರಸ್ತೆ ಸಂಪರ್ಕಕ್ಕೆ ಯಾವ ಜನಪ್ರತಿನಿಧಿಗಳು, ಅಧಿಕಾರಿಗಳು ಕಾಳಜಿ ವಹಿಸದ ಕಾರಣ ನಿರಾಶ್ರಿತರ ಕೇಂದ್ರಕ್ಕೆ ರಸ್ತೆ ಸಮಸ್ಯೆಯೇ ದೊಡ್ಡ ಸಮಸ್ಯೆಯಾಗಿತ್ತು. ಈಗ ಅದು ಬಗೆಹರಿದಂತಾಗಿದೆ.ತಹಸೀಲ್ದಾರ್ ವೆಂಕಟೇಶಪ್ಪ, ಜಂಟಿ ನಿರ್ದೇಶಕರಾದ ಶ್ರೀನಿವಾಸ್, ನಿರಾಶ್ರಿತರ ಕೇಂದ್ರ ಅಧೀಕ್ಷಕ ಮಂಜುನಾಥ್, ಸಿಬ್ಬಂದಿ ಸುನೀತಾ, ರಾಜಸ್ವ ನಿರೀಕ್ಷಕರಾದ ಅಜಯ್, ರೈಲ್ವೆ ಇಲಾಖೆಯ ಅಧಿಕಾರಿ ಪ್ರಭಾಕರ್, ಲೋಕೋಪಯೋಗಿ ಇಲಾಖೆ ಎಇಇ ರವಿ, ಜಿಪಂ ಮಾಜಿ ಸದಸ್ಯರಾಮಚಂದ್ರಪ್ಪ, ಪುರಸಭೆ ಸದಸ್ಯ ಸುನೀಲ್, ಕೀಲುಕೊಪ್ಪ ಯಲ್ಲಪ್ಪ, ವಾಜೀದ್ ಇದ್ದರು.
600 ಮೀ. ಉದ್ದದ ರಸ್ತೆ ನಿರ್ಮಾಣ : ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಸೂಕ್ತ ರಸ್ತೆ ಸಂಪರ್ಕ ಇಲ್ಲದ ಕಾರಣ ಖಾಸಗಿ ಜಮೀನು ಮಾಲೀಕರೊಂದಿಗೆ ಚರ್ಚಿಸಲಾಗಿದ್ದು, ಶೀಘ್ರ ರಸ್ತೆ ನಿಮಾರ್ಣ ಮಾಡಲಾಗುವುದು ಎಂದು ಸಂಸದ ಮಲ್ಲೇಶ್ ಬಾಬು ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರದೇಶದಲ್ಲಿ ಬೆಂಗಳೂರು&ಚೆನೈ ಕಾರಿಡಾರ್ ನಿಮಾರ್ಣವಾದ ಕಾರಣ ಭೂ ಒತ್ತುವರಿ ಮತ್ತು ಖಾಸಗಿ ಜಮೀನುಮಾಲೀಕರು ಹಿಂದೆ ಇದ್ದ ರಸ್ತೆ ಬಂದ್ ಮಾಡಿದ್ದರಿಂದ ರಸ್ತೆ ಸಂಪರ್ಕಕ್ಕೆ ಅಡ್ಡಿ ಉಂಟಾಗಿತ್ತು. ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಸ್ಥಳಕ್ಕೆ ಭೇಟಿ ನೀಡಿ ಖಾಸಗಿ ಜಮೀನುಮಾಲೀಕ ಇಂದರ್ ಚಂದ್ ಸೇಠ್ ಅವರೊಂದಿಗೆ ಚರ್ಚೆ ನಡೆಸಿದ್ದು, ಒಟ್ಟು 600 ಮೀಟರ್ ಉದ್ದದ ರಸ್ತೆ ನಿಮಾರ್ಣ ಮಾಡಲಾಗುವುದು ಎಂದರು. ಚೆನ್ನೆ$ ಎಕ್ಸ್ ಪ್ರೆಸ್ ಕಾರಿಡಾರ್ ಹೈವೇಗೆ ಸಂಪರ್ಕ ಕಲ್ಪಿಸಲು ಈಗಾಗಲೇ ವಿ.ಕೋಟೆ ರಸ್ತೆಯಲ್ಲಿರುವ ಕೃಷ್ಣಾವರಂ ಬಳಿ ಅವಕಾಶ ನೀಡಲಾಗಿದೆ. ತಾಲೂಕಿನ ಜನತೆಗೆ ಹೈವೇ ಸಂಪರ್ಕಿಸಲು 7 ಕಿ.ಮೀ. ಸಂಚರಿಸಬೇಕಾಗಿದೆ. ಬೀರಂಡಹಳ್ಳಿ ಸಮೀಪ ಹೈವೇಗೆ ಸಂಪರ್ಕ ಕಲ್ಪಿಸಲು ವರ್ತುಲ ರಸ್ತೆ ನಿಮಾರ್ಣ ಮಾಡುವ ಗುರಿ ಹೊಂದಿದೆ. ಈ ಬಗ್ಗೆ ಉನ್ನತ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ ಎಂದರು.
ಯಾವ ಮಾರ್ಗ ಅಂತಿಮ? : ನಿರಾಶ್ರಿತರ ಕೇಂದ್ರದ ಒಳಗಡೆಯಿಂದ ಬೀರಂಡಹಳ್ಳಿ ರೈಲ್ವೆ ಕೆಳ ಸೇತುವೆ ಮಾರ್ಗವಾಗಿಕೋಲಾರ ಮುಖ್ಯರಸ್ತೆಗೆ ಕಲ್ಪಿಸುವ ಪ್ರದೇಶವನ್ನು ಪತ್ತೆ ಹಚ್ಚಿ ಸುಮಾರು ನಾಲ್ಕು ಮೀಟರ್ ಅಗಲದ ರಸ್ತೆ ನಿಮಾರ್ಣಕ್ಕೆ ಸ್ಥಳ ಪರಿಶೀಲಿಸಿದರು. ಈ ಭಾಗದ ಮಧ್ಯೆ ಬರುವ ಖಾಸಗಿ ಜಮೀನು ಮಾಲೀಕ ಇಂದರ್ ಜೈನ್ ಅವರನ್ನುಸ್ಥಳಕ್ಕೆ ಕರೆಯಿಸಿ ಮಾತನಾಡಿ, ರೈಲ್ವೆ ಲೈನ್ ಪಕ್ಕದಲ್ಲಿ ಬರುವ ತಮ್ಮ ಜಮೀನಿನಲ್ಲಿ ಎರಡು ಮೀಟರ್ ಅಗಲ ರಸ್ತೆಗಾಗಿ ಜಾಗ ಬಿಡಲು ಕೋರಿದಾಗ ಸಮ್ಮತಿ ವ್ಯಕ್ತಪಡಿಸಿದ್ದಾರೆ. ರೈಲ್ವೆ ಇಲಾಖೆಯ ಎರಡು ಮೀಟರ್ ಜಾಗ ಸೇರಿಸಿ ಒಟ್ಟು ನಾಲ್ಕು ಮೀಟರ್ ಅಗಲದ ರಸ್ತೆ ನಿಮಾರ್ಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಪರ್ಯಾಯವಾಗಿ ಈ ರಸ್ತೆ ನಿಮಾರ್ಣವಾದರೆ ನಿರಾಶ್ರಿತರ ಕೇಂದ್ರಕ್ಕೆ ಕುಪ್ಪನಹಳ್ಳಿ ರೈಲ್ವೆ ಕೆಳ ಸೇತುವೆ ಮೂಲಕ ಹೋಗಿ ಬರಬಹುದಾಗಿದೆ.