

ಮುಂಬೈ: ಸಿನಿಇಂಡಸ್ಟ್ರಿ ನನ್ನನ್ನು ಬಹಿಷ್ಕರಿಸಿದೆ. ಇಂಥ ಪರಿಸ್ಥಿತಿಯಲ್ಲಿ ನನ್ನ ಜೊತೆ ಕಲಾವಿದರು ಸೇರಿದಂತೆ ಯಾರಾದರೂ ನಿಲ್ಲುವುದು ಸುಲಭವಲ್ಲ ಎಂದು ನಟಿ-ರಾಜಕಾರಣಿ ಕಂಗನಾ ರನೌತ್ ಹೇಳಿದರು.
ಕಂಗನಾ ತಮ್ಮ 'ಎಮರ್ಜೆನ್ಸಿ' ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು, ತನಗೆ ಕಷ್ಟಕಾಲದಲ್ಲಿ ಬೆಂಬಲಿಸಿದ್ದಕ್ಕಾಗಿ ಎಲ್ಲ ಕಲಾವಿದರು, ಚಿತ್ರತಂಡಕ್ಕೆ ಧನ್ಯವಾದ ಹೇಳಿದರು.
ಕಂಗನಾ ರನೌತ್ ಅವರು ಹಿಂದಿ ಚಲನಚಿತ್ರೋದ್ಯಮದಿಂದ "ಬಹಿಷ್ಕಾರ" ಕ್ಕೆ ಒಳಗಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ತನ್ನನ್ನು ಬೆಂಬಲಿಸಿದವರು ದೇವರು ಮತ್ತು ದೇವತೆಗಳಂತೆ ಎಂದು ಅಭಿಪ್ರಾಯಪಟ್ಟರು.
ಹಿಮಾಚಲ ಪ್ರದೇಶದ ಮಂಡಿಯ ಬಿಜೆಪಿ ಸಂಸದರೂ ಆಗಿರುವ ರನೌತ್ 'ಎಮರ್ಜೆನ್ಸಿ' ಚಿತ್ರದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ನಟಿಸಿ, ಚಿತ್ರವನ್ನು ನಿರ್ದೇಶಿಸಿದ್ದಾರೆ. ಬುಧವಾರದಂದು ಟ್ರೇಲರ್ ಲಾಂಚ್ ಆಗಿರುವ ಈ ಸಿನಿಮಾ ಸೆಪ್ಟೆಂಬರ್ 6ರಂದು ಬಿಡುಗಡೆಯಾಗಲಿದೆ.
ಚಿತ್ರದಲ್ಲಿ ಅನುಪಮ್ ಖೇರ್, ಮಹಿಮಾ ಚೌಧರಿ, ಮಿಲಿಂದ್ ಸೋಮನ್, ಶ್ರೇಯಸ್ ತಲ್ಪಾಡೆ, ವಿಶಾಕ್ ನಾಯರ್ ಮತ್ತು ದಿವಂಗತ ಸತೀಶ್ ಕೌಶಿಕ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.